ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಪ್ರಧಾನಿ ಮೋದಿ ಹೇಳಿಕೆ ಕುರಿತು ಟೀಕೆ ವ್ಯಕ್ತಪಡಿಸಿದ್ದಾರೆ. ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕಾರಟಗಿ (ಮೇ.18): ದೇಶದ ಆರ್ಥಿಕ ಪರಿಸ್ಥಿತಿ ಸದ್ಯ ಸಂಪೂರ್ಣ ಹದಗೆಟ್ಟು ಅಧೋಗತಿಗೆ ಹೋಗಿದ್ದು, ತೈಲ ಬೆಲೆ ಗಗನಕ್ಕೇರಿದೆ. ಈ ಸತ್ಯ ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಈಗ ಎಚ್ಚರಿಕೆ ಮಾತುಗಳಲ್ಲಿ ಬಂಗಾರ ಖರೀದಿಸಬೇಡಿ, ಪೆಟ್ರೋಲ್ ಬಳಕೆ ಕಡಿಮೆ ಮಾಡಿ ಎಂದು ಉಚಿತ ಸಲಹೆ ನೀಡಿ ತಮ್ಮ ಆಡಳಿತ ವೈಫಲ್ಯ ಮರೆಮಾಚುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

Add Asianetnews Kannada as a Preferred SourcegooglePreferred

ಇನ್ನು ನೀಟ್ ಪರೀಕ್ಷೆಯಲ್ಲಿನ ಪ್ರಶ್ನೆಪತ್ರಿಕೆ ಲೀಕ್ ಆಗಿದೆ, ಆರ್ಥಿಕ ವ್ಯವಸ್ಥೆ ವೀಕ್ ಆಗಿದೆ, ಶೇರುಪೇಟೆ ಮಾರುಕಟ್ಟೆ ಶೇಕ್ ಆಗಿದೆ, ಈ ಮೂರು ಈ ದೇಶದ ಮೋದಿ ಆಡಳಿತದ ದುರಾವಸ್ಥೆ ಸ್ಪಷ್ಟವಾಗಿ ತೋರಿಸುತ್ತದೆ ಎಂದರು. ಯಲ್ಲಮ್ಮನ ದೇವಸ್ಥಾನದಲ್ಲಿ ಸರದಿ ಸಾಲಿನಲ್ಲಿ ಮುಂದೆ ಇದ್ದವರು ಯಲ್ಲಮ್ಮ ನೀನಗ ನಾಲ್ಕು ಉಧೋ ಎಂದರೆ ಸಾಕು ಹಿಂದಿದ್ದವರೆಲ್ಲರೂ ಉಧೋ ಉಧೋ ಎನ್ನಲು ಶುರು ಮಾಡುತ್ತಾರೆ. ಹಾಗೆಯೇ ಮೋದಿ ಅಂಧ ಭಕ್ತರು ಅವರ ನಡೆಯನ್ನೆ ಬೆಂಬಲಿಸುತ್ತಾರೆ.

ಸೈಕಲ್ ಮೇಲೆ ಓಡಾಡುವುದು ದೇಶಭಕ್ತಿ ಅಲ್ಲ. ದೇಶದ ಆರ್ಥಿಕ ಸ್ಥಿತಿ ಹಳ್ಳ ಹಿಡಿದಿದೆ ಎನ್ನುವುದು ಇಡೀ ವಿಶ್ವಕ್ಕೆ ಬಿಜೆಪಿ ತೋರಿಸಿಕೊಡುತ್ತಿದೆ ಎಂದು ತಂಗಡಗಿ ಟೀಕಿಸಿದರು. ದೇಶದೊಳಗೆ ಆಡಳಿತ ಮಾಡಲು ಗೊತ್ತಿರಲಾರದ ಒಬ್ಬನನ್ನು ಪ್ರಧಾನ ಮಂತ್ರಿ ಮಾಡಿದರೆ ದೇಶಕ್ಕೆ ಇದೇ ಪರಿಸ್ಥಿತಿ ಬರುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ನೋಡಿಕೊಳ್ಳಲು ಸಾಧ್ಯವಿದ್ದವರು ಬಂದು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುತ್ತಾರೆ. ಅದನ್ನು ಬಿಟ್ಟು ದೇಶದ ಜನತೆಗೆ ಪುಕ್ಕಟೆ ಸಲಹೆ ನೀಡುವುದು ದೊಡ್ಡಸ್ತಿಕೆಯಲ್ಲ.

ದೇಶ ಅಧೋಗತಿ

ದೇಶದಲ್ಲಿ ಉದ್ಭವಿಸಿರುವ ಈ ಸಮಸ್ಯೆ ಯುದ್ಧದಿಂದಲ್ಲ. ಒಬ್ಬ ಪೆದ್ದನ ದುರಾಡಳಿತವಾಗಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಅವರೆ ಹೇಳಿದ್ದಾರೆ. ವಸ್ತುಸ್ಥಿತಿ ಹೀಗಿದ್ದ ಮೇಲೆ ಮೋದಿ ಅವರ ಅಂಧಭಕ್ತರು ದೇಶ ಅಧೋಗತಿಗೆ ಹೋಗಿದೆ ಎಂಬುದನ್ನು ಅರಿತುಕೊಂಡು ಸತ್ಯ ಅರಿಯಬೇಕು, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ, ರಾಜ್ಯದ ಮುಖ್ಯಮಂತ್ರಿ ಬಗ್ಗೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಮಾತನಾಡಲು ಹಿರಿಯರಾದ ಬಸವರಾಜ ರಾಯರೆಡ್ಡಿ ಅವರಿಗೆ ಬಿಟ್ಟಿದ್ದೇವೆ. ನಾವೇನಿದ್ದರೂ ಪಕ್ಷ ವಹಿಸಿ ಕೆಲಸ ಮಾತ್ರ ಮಾಡುತ್ತೇವೆ.

ಸಂಪುಟ ರಚನೆ, ಸೇರಿದಂತೆ ಎಲ್ಲ ರಚನೆಗಳನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದಷ್ಟೇ ತಂಗಡಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಕ್ಷದ ಹೈಕಮಾಂಡ್ ವಹಿಸಿದ ಕೆಲಸ ಕಾರ್ಯ ಮಾತ್ರ ಮಾಡಬೇಕು. ಇತರ ಯಾವುದೇ ವಿಷಯ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ಪಕ್ಷ ವಹಿಸಿದ ಕೆಲಸವನ್ನಷ್ಟೇ ಶಿರಸಾವಹಿಸಿ ಮಾಡುತ್ತಾ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇನೆ ಎಂದರು.