25 ದಿನದ ಬಳಿಕ ಕುವೈಟ್‌ನಿಂದ ತವರಿಗೆ ಬಂದ ಅನಿವಾಸಿ ಕನ್ನಡಿಗನ ಮೃತದೇಹ
ಅನುಮಾನಾಸ್ಪದವಾಗಿ ಮೃತಪಟ್ಟ ಅನಿವಾಸಿ ಕನ್ನಡಿಗ ವ್ಯಕ್ತಿಯ ಮೃತದೇಹ 25 ದಿನಗಳ ಬಳಿಕ ತವರಿಗೆ ತಲುಪಿದೆ.
ಶಿವಮೊಗ್ಗ (ಜ.17): ಕಳೆದ ಡಿಸೆಂಬರ್ 25 ರಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ಅನಿವಾಸಿ ಕನ್ನಡಿಗನ ಪಾರ್ಥಿವ ಶರೀರ ಕೊನೆಗೂ ತವರನ್ನು ತಲುಪಿದೆ.
ಕುವೈಟ್ ಸಿಟಿಯಲ್ಲಿ ಕರ್ನಾಟಕ ಮೂಲದ ವ್ಯಕ್ತಿಯ ಅನುಮಾನಾಸ್ಪದ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬ ತನಿಖಗೆ ಆಗ್ರಹಿಸಿತ್ತು. ಕುವೈಟ್ ನ ಮಹಬೂಲದಲ್ಲಿ ರಾಜ್ಯದ ಸಾಗರ ತಾಲೂಕಿನ ತಾಳಗುಪ್ಪ ನಿವಾಸಿ ಹಾಶಂ ಪರೀದ್ ಸಾಬ್ ಸಾವನ್ನಪ್ಪಿದ್ದರು.
ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿ ಭಿತ್ತರಿಸಿತ್ತು. ಇದೀಗ ಕುವೈಟ್ ನಿಂದ ಸಾಗರ ತಾಲೂಕಿನ ಚೂರಿ ಕಟ್ಟೆ ಗ್ರಾಮಕ್ಕೆ ಪಾರ್ಥಿವ ಶರೀರ ತರಲಾಗಿದೆ. ಕಳೆದ 25 ದಿನಗಳಿಂದ ನಿರಂತರ ಹೋರಾಟದ ನಂತರ ತವರಿಗೆ ಪಾರ್ಥಿವ ಶರೀರ ತರಲಾಗಿದೆ.
ಕುವೈತ್‌ನಲ್ಲಿ ಅನಿವಾಸಿ ಕನ್ನಡಿಗ ಸಂಶಯಾಸ್ಪದ ಸಾವು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಟ್ವಿಟರ್ ಅಭಿಯಾನ ...
ಈಜಲು ಸಮುದ್ರಕ್ಕೆ ತೆರಳಿದಾಗ ನೀರಿನಲ್ಲಿ ಮುಳುಗಿ ಆಕಸ್ಮಿಕವಾಗಿ ಪಾಶಾ ಸಾವಿಗೀಡಾಗಿದ್ದಾರೆ ಎಂದು ಕುಟುಂಬಕ್ಕೆ ಕಂಪನಿಯಿಂದ ಸಂದೇಶ ಬಂದಿತ್ತು.
ಕುವೈಟ್ ನಲ್ಲಿರುವ ಹಾಶಂ ನ ಸ್ನೇಹಿತರು ಹಾಶಂ ಮಲಗುವ ಹಾಸಿಗೆ ಯ ಮೇಲೆ ರಕ್ತದ ಕಲೆಗಳಿರುವುದನ್ನು ಗಮನಿಸಿ ಅವರ ಸಾವು ಸಂಶಯಾಸ್ಪದ ಎಂದು ಕುಟುಂಬಸ್ಥರಿಗೆ ಮಾಹಿತಿ ರವಾನೆ ಮಾಡಿದ್ದರು
ಮೃತನ ಕುಟುಂಬವು ಡಿ. 28 ರಂದು ಕುವೈಟ್ ನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಮರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ನಂತರ ಶರೀರವನ್ನು ಹಸ್ತಾಂತರಿಸುವಂತೆ ಇಮೇಲ್ ಮೂಲಕ ಮನವಿ ಸಲ್ಲಿಸಿತ್ತು. ಶಿವಮೊಗ್ಗ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರದ ಒಳ ಆಡಳಿತದ ಅಪರ ಕಾರ್ಯದರ್ಶಿ ಗಳಿಗೂ ಸಂಶಯಾಸ್ಪದ ಸಾವಿನ ತನಿಖೆ ಕೋರಿ ಮನವಿ ಮಾಡಲಾಗಿತ್ತು.
ಸದ್ಯ ಪಾರ್ಥಿವ ಶರೀರ ತವರಿಗೆ ತಲುಪಿದ್ದು, ಈಗಲಾದರೂ ಹಾಶಂ ಅಸಹಜ ಸಾವಿಗೆ ನ್ಯಾಯ ಕೊಡಿಸುವಂತೆ ಹಾಶಂ ತಂದೆಯ ಮನವಿ ಮಾಡಿದ್ದಾರೆ.