ಜಿಲ್ಲೆಯಲ್ಲಿರುವ ಗಾಂಜಾ ಮಾಫಿಯಾವನ್ನು ಮೂಲದಲ್ಲಿಯೇ ಕತ್ತರಿಸಿ ಹಾಕಬೇಕೆಂಬ ಉದ್ದೇಶದಿಂದ ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ವೈ. ಆರ್. ಮೋಹನ್ ವಿಶೇಷ ಪ್ರಯತ್ನ ಕೈಗೊಂಡಿದ್ದಾರೆ.
ಶಿವಮೊಗ್ಗ(ಆ.02): ರಾಜ್ಯದಲ್ಲಿಯೇ ಗಾಂಜಾ ಬೆಳೆಯುವಲ್ಲಿ ಮೊದಲ ಸ್ಥಾನದಲ್ಲಿದೆ ಎಂಬ ಕುಖ್ಯಾತಿಗೆ ಒಳಗಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲೀಗ ಈ ಬೆಳೆ ಪತ್ತೆ ಹಚ್ಚಿ ಮೂಲದಲ್ಲಿಯೇ ಹೊಸಕಿ ಹಾಕಲು ಅಬಕಾರಿ ಇಲಾಖೆ ಡ್ರೋಣ್ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ.
ಸಂಶಯಿತ ಹೊಲಗದ್ದೆಗಳ ಮೇಲೆ ಡ್ರೋಣ್ ಹಾರಿಸಿ ಪೈರಿನ ನಡುವೆ ಬೆಳೆಯುತ್ತಿರ ಬಹುದಾದ ಗಾಂಜಾ ಗಿಡಗಳನ್ನು ಗುರುತಿಸುವ ಪ್ರಯತ್ನ ಇದಾಗಿದೆ.
ಜಿಲ್ಲೆಯಲ್ಲಿರುವ ಗಾಂಜಾ ಮಾಫಿಯಾವನ್ನು ಮೂಲದಲ್ಲಿಯೇ ಕತ್ತರಿಸಿ ಹಾಕಬೇಕೆಂಬ ಉದ್ದೇಶದಿಂದ ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ವೈ. ಆರ್. ಮೋಹನ್ ವಿಶೇಷ ಪ್ರಯತ್ನ ಕೈಗೊಂಡಿದ್ದಾರೆ.
ಇದಕ್ಕಾಗಿ ಮೂರು ವಿಶೇಷ ತಂಡ ರಚಿಸಲಾಗಿದೆ. ಇವು ಆಗಾಗ್ಗೆ ಕೆಲವು ಪ್ರದೇಶಗಳ ಮೇಲೆ ಡ್ರೋಣ್ ಉಡಾಯಿಸಿ ಅದಕ್ಕೆ ಜೋಡಿಸಿರುವ ಕ್ಯಾಮರಾ ಮೂಲಕ ಹೊಲವನ್ನು ಮೇಲ್ಭಾಗದಿಂದ ಚಿತ್ರಿಕರಿಸಿ ಕೊಳ್ಳಲಾಗುತ್ತದೆ. ಎಲ್ಲಿ ಗಾಂಜಾ ಬೆಳೆ ಕಾಣುತ್ತದೆಯೋ ಅಲ್ಲಿ ದಾಳಿ ಮಾಡಲಾಗುತ್ತದೆ. ಇಲಾಖೆ ಈ ರೀತಿ ಮಾಡುವುದರಿಂದ ಗಾಂಜಾ ಬೆಳೆ ಗುರುತಿಸುವುದು ಒಂದೆಡೆಯಾದರೆ, ಹಣದಾಸೆಗೆ ಗಾಂಜಾ ಬೆಳೆಯುವ ರೈತರಲ್ಲಿ ಭಯ ಹುಟ್ಟಿಸಿ ಈ ಬೆಳೆಯಿಂದ ದೂರ ಇಡುವಂತೆ ಮಾಡುವುದು ಕೂಡಾ ಇದರಲ್ಲಿ ಸೇರಿದೆ. ಬುಧವಾರ ನಗರಕ್ಕೆ ಹೊಂದಿಕೊಂಡಿರುವ ಕುಂಚೇನಹಳ್ಳಿ ಯಲ್ಲಿ ಡ್ರೋಣ್ ಪ್ರಾಯೋಗಿಕವಾಗಿ ಹಾರಿಸಲಾಯಿತು.
ಗ್ರಾಮಸ್ಥರು ಇದಕ್ಕೆ ಸಾಕ್ಷಿಯಾಗಿದ್ದರು. ಆದರೆ ಈ ಪ್ರದೇಶದಲ್ಲಿ ಯಾವುದೇ ಗಾಂಜಾ ಬೆಳೆ ಕಾಣಲಿಲ್ಲ. ಮುಂದಿನ ದಿನಗಳಲ್ಲಿ ಸಾಗರ, ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಡ್ರೋಣ್ ಮೂಲಕ ಗಾಂಜಾ ಬೆಳೆ ಪತ್ತೆ ಮಾಡುವ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ಉಪ ಆಯುಕ್ತ ಮೋಹನ್ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ಗ್ರಾಮದಲ್ಲಿ ಗಾಂಜಾ ಬೆಳೆಯ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಅಬಕಾರಿ ಉಪ ಆಯುಕ್ತ ವೈ.ಆರ್. ಮೋಹನ್ ಮಾತನಾಡಿ, ಯಾರೋ ತೋರಿಸುವ ಹಣದಾಸೆಗೆ ಬಲಿಯಾಗಿ ಗಾಂಜಾ ಬೆಳೆದು ಜೈಲಿಗೆ
ಹೋಗುವ ಸ್ಥಿತಿ ತಂದುಕೊಳ್ಳಬೇಡಿ. ಜೊತೆಗೆ ಈ ರೀತಿ ಬೆಳೆದ ಗಾಂಜಾ ನಮ್ಮ ಯುವಕರನ್ನೇ ನಾಶ ಮಾಡುತ್ತಿದೆ. ಇದು ಕಾನೂನಿಗೆ ವಿರುದಟಛಿವಾದ ಕೆಲಸ. ಯಾರೂ ಇದನ್ನು ಮಾಡಬಾರದು. ಜೊತೆಗೆ ಗ್ರಾಮದಲ್ಲಿ ಯಾರಾದರೂ ಈ ರೀತಿ ಬೆಳೆದರೆ ಇಲಾಖೆಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದರು.
