ಸೊರಬ ತಾಲೂಕಿನ ಜಡೆ ಗ್ರಾಮದ 7ನೇ ತರಗತಿ ವಿದ್ಯಾರ್ಥಿ ಎಸ್. ವಿರಾಟ್ ಕೇವಲ 17 ನಿಮಿಷದಲ್ಲಿ ಫ್ರೀಸ್ಟೈಲ್ ಎಫ್.ಪಿ.ವಿ. ಡ್ರೋನ್ ಜೋಡಿಸಿ ವಿಶ್ವ ದಾಖಲೆ ಬರೆದಿದ್ದಾನೆ. ಈತನ ವಿಶಿಷ್ಟ ಸಾಧನೆಯನ್ನು ಮೆಚ್ಚಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸನ್ಮಾನಿಸಿದ್ದಾರೆ.

ಶಿವಮೊಗ್ಗ: ಸೊರಬ ತಾಲೂಕಿನ ವಿದ್ಯಾರ್ಥಿ ವಿಶಿಷ್ಟ ಸಾಧನೆಯ ಮೂಲಕ ವಿಶ್ವ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗುವುದರೊಂದಿಗೆ ತಾಲೂಕಿನ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.

ತಾಲೂಕಿನ ಜಡೆ ಗ್ರಾಮದ ಕೃಷಿಕ ಶಿವಕುಮಾರಸ್ವಾಮಿ ಹಾಗೂ ಆರ್.ಕೆ. ಅರುಣಾ ದಂಪತಿಯ ಪುತ್ರ ಎಸ್. ವಿರಾಟ್ ಸಾಧನೆ ಮಾಡಿದ ವಿದ್ಯಾರ್ಥಿಯಾಗಿದ್ದು, 17 ನಿಮಿಷದ ಅತ್ಯಂತ ಕಡಿಮೆ ಅವಧಿಯಲ್ಲಿ ಫ್ರೀಸ್ಟೈಲ್ ಎಫ್.ಪಿ.ವಿ. ಡ್ರೋನ್‌ಅನ್ನು ಜೋಡಿಸುವ ಮೂಲಕ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು ವಿಶ್ವ ದಾಖಲೆ ಬರೆದಿದ್ದಾರೆ.

7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಸ್. ವಿರಾಟ್

ಪ್ರಸ್ತುತ ಬೆಂಗಳೂರಿನ ಚಂದಾಪುರದಲ್ಲಿರುವ ಮೆಗಾ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಸ್. ವಿರಾಟ್ ಈ ಸಾಧನೆಯ ಮೂಲಕ ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಸಾಧಕ ವಿದ್ಯಾರ್ಥಿ ಬೆಂಗಳೂರಿನಲ್ಲಿ ಸಚಿವ ಮಧು ಬಂಗಾರಪ್ಪ ಅವರ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ ಅಲ್ಲಿಯೂ ಕೂಡ ೧೭ ನಿಮಿಷದಲ್ಲಿ ಫ್ರೀಸ್ಟೈಲ್ ಡ್ರೋನ್‌ ಜೋಡಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ಈ ಸಾಧನೆಯ ಮಾಹಿತಿಯನ್ನು ಕೇಳಿ ತಿಳಿದುಕೊಂಡು ವಿದ್ಯಾರ್ಥಿ ವಿರಾಟ್ ಹಾಗೂ ಅವರ ಪೋಷಕರನ್ನು ಗೌರವಿಸಿ, ಸನ್ಮಾನಿಸಿದರು.

ಮಧು ಬಂಗಾರಪ್ಪ ಮೆಚ್ಚುಗೆ

17 ನಿಮಿಷದಲ್ಲಿ ಫ್ರೀಸ್ಟೈಲ್ ಡ್ರೋನ್ ಜೋಡಿಸುವುದು ಕಷ್ಟಸಾಧ್ಯದ ಮಾತು. ಕೇವಲ 17 ವಯಸ್ಸಿನಲ್ಲಿ ಇಂಥ ಸಾಧನೆ ಮಾಡಿದ ವಿದ್ಯಾರ್ಥಿಗಳು ಸಿಗುವುದು ವಿರಳ. ಆಧುನಿಕ ಜಗತ್ತಿನಲ್ಲಿ ವಿರಾಟ್ ವಿದ್ಯಾರ್ಥಿಯ ಕೊಡುಗೆ ಅಪಾರವಾಗಿದ್ದು, ಮುಂದಿಯೂ ಇಂಥ ಅನ್ವೇಷಣೆಯಿಂದ ಇನ್ನಷ್ಟು ಸಾಧನೆ ಮಾಡಲಿ ಎಂದು ಆಶಿಸುತ್ತೇನೆ. ಅವರ ಸಾಧನೆ ತಾಲೂಕಿನ ಹೆಮ್ಮೆಯೂ ಹೌದು ಎಂದು ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದ್ದಾರೆ.