ಶಿವಮೊಗ್ಗ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಅಧ್ವಾನಕ್ಕೆ ಜನ ಹೈರಾಣ
ಸ್ಮಾರ್ಟ್‌ಸಿಟಿ ವತಿಯಿಂದ ನಗರದಲ್ಲಿ ಈಗಾಗಲೇ ಮುಗಿದಿರುವ ಮತ್ತು ನಡೆಯುತ್ತಿರುವ ರಸ್ತೆ, ಚರಂಡಿ, ಫುಟ್ಪಾತ್ ಕಾಮಗಾರಿ ಕೆಲಸ ಅಧ್ವಾನವಾಗಿದೆ. ಶಿವಮೊಗ್ಗ ನಗರ ಜನತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಶಿವಮೊಗ್ಗ (ಮಾ.15) : ಸ್ಮಾರ್ಟ್‌ಸಿಟಿ ವತಿಯಿಂದ ನಗರದಲ್ಲಿ ಈಗಾಗಲೇ ಮುಗಿದಿರುವ ಮತ್ತು ನಡೆಯುತ್ತಿರುವ ರಸ್ತೆ, ಚರಂಡಿ, ಫುಟ್ಪಾತ್ ಕಾಮಗಾರಿ ಕೆಲಸ ಅಧ್ವಾನವಾಗಿದೆ. ಶಿವಮೊಗ್ಗ ನಗರ ಜನತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸ್ಮಾರ್ಟ್‌ಸಿಟಿ ಅವಾಂತರಕ್ಕೆ ನಗರದ ಬಾಲರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ ಯುಜಿಡಿ ಹಾಗೂ ಯುಜಿ ಕೇಬಲ್ ಮತ್ತು ಪೈಪ್‌ಲೈನ್‌ಗಳ ಮ್ಯಾನ್‌ಹೋಲ್‌ಗಳ ಮುಚ್ಚಳ ಅಪಾಯಕಾರಿ ಸ್ಥಿತಿಯಲ್ಲಿದ್ದು, ಬಲಿಗಾಗಿ ಕಾದು ಕೂತಂತಿವೆ.
ಇತ್ತೀಚೆಗಷ್ಟೇ ರಸ್ತೆ ಕಾಮಗಾರಿಗಳು ಪ್ರಮುಖ ರಸ್ತೆಗಳಲ್ಲಿ ಪೂರ್ಣಗೊಂಡಿದ್ದರೂ ಸ್ಮಾರ್ಟ್‌ಸಿಟಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಾಯಕ್ಕೆ ಮುನ್ನುಡಿ ಬರೆದಿದೆ. ಯುಡಿಜಿ ಮ್ಯಾನ್‌ಹೋಲ್‌ಗಳು ರಸ್ತೆಗಿಂತ ಅರ್ಧ ಅಡಿ ಎತ್ತರದಲ್ಲಿದ್ದು, ಬೀದಿದೀಪಗಳು ಕೂಡ ಇಲ್ಲದೇ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಮ್ಯಾನ್‌ಹೋಲ್ ಮುಚ್ಚಳಗಳ ತಡೆಯಿಂದಾಗಿ ಬಿದ್ದು ಆಸ್ಪತ್ರೆ ಪಾಲಾಗುತ್ತಿದ್ದಾರೆ.
ಅವ್ಯವಸ್ಥೆಗಳ ಸರಮಾಲೆ:
ಕೆಲವೆಡೆ ಮ್ಯಾನ್‌ಹೋಲ್‌ಗಳ ಮುಚ್ಚಳಗಳು ಅರ್ಧ ಅಡಿ ಆಳಕ್ಕಿಳಿದಿವೆ. ಸಾವಿರಾರು ವಿದ್ಯಾರ್ಥಿಗಳು, ವೃದ್ಧರು ಓಡಾಡುವ ಈ ಪ್ರಮುಖ ರಸ್ತೆಗಳಲ್ಲಿ ಅಪಾಯಕಾರಿ ಹೊಂಡಗಳನ್ನು ಕೂಡಲೇ ಸರಿಪಡಿಸಬೇಕಾಗಿದೆ. ಯುಜಿ ಕೇಬಲ್ ಅವಳಡಿಸಿದ ನಂತರ ಕೆಲವೆಡೆ ಕಂಬಗಳನ್ನು ಕಿತ್ತಿದ್ದು, ಕಂಬಗಳನ್ನು ಕಿತ್ತಿರುವ ಜಾಗದಲ್ಲಿ ಕೂಡ ಯಥಾಸ್ಥಿತಿ ಬಿಟ್ಟುಹೋಗಿದ್ದಾರೆ. ಗುತ್ತಿಗೆದಾರರು ಅರ್ಧಂಬರ್ಧ ಕಾಮಗಾರಿ ನಡೆಸಿದ್ದಾರೆ. ರಸ್ತೆಯ ಮೂಲೆಗಳಲ್ಲಿ ಕೇಬಲ್‌ಗಳು ನೇತಾಡುತ್ತಿದ್ದು, ಕೆಲವೆಡೆ ಈಗಾಗಲೇ ವಿದ್ಯುತ್ ಸಂಪರ್ಕ ಕೂಡ ನೀಡಲಾಗಿದೆ. ದೊಡ್ಡ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸ್ಮಾರ್ಚ್‌ಸಿಟಿ ಅಭಿವೃದ್ಧಿ ಕೆಲಸದಲ್ಲಿ ಶಿವಮೊಗ್ಗ ದೇಶದಲ್ಲೇ 10ನೇ ಸ್ಥಾನದಲ್ಲಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರಿನಲ್ಲಿ ಓಡಾಡದೆ ನಡೆದುಕೊಂಡು ಪ್ರಮುಖ ರಸ್ತೆಗಳಲ್ಲಿ ಓಡಾಡಿದರೆ ಸ್ಮಾರ್ಚ್‌ಸಿಟಿಕಾಮಗಾರಿ ಕೆಲಸ ಎಂತಹ ಅವ್ಯವಸ್ಥೆಗಳ ಆಗರ ಎನ್ನುವುದನ್ನು ಕಣ್ಣಾರೆ ಕಾಣಬಹುಹುದು. ಸ್ಮಾರ್ಚ್‌ಸಿಟಿ ಅಧಿಕಾರಿಗಳು, ಎಂಜಿನಿಯರ್‌ಗಳು ತಾವು ಮಾಡಿರುವ ತಪ್ಪಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಿಗದಿತ ಸ್ಥಳಗಳಲ್ಲಿ ಸುಳ್ಳು ಅಂಕಿ ಅಂಶವನ್ನು ನೀಡಿ ನಂಬಿಸಿಬಿಡುತ್ತಾರೆ. ಹೀಗಾಗಿ ಪತ್ರಕರ್ತರು ಜನತೆ ಸಮಸ್ಯೆಗಳನ್ನು ಜನಪ್ರತಿನಿಧಿಗಳಿಗೆ ಹೇಳಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ.
ತುಂಗಾನದಿಗೆ ಮಲಿನ ನೀರು ಸೇರದಂತೆ ಅಗತ್ಯ ಕ್ರಮ: ಕೆ.ಎಸ್.ಈಶ್ವರಪ್ಪ
ಶಿವಮೊಗ ಸ್ವಚ್ಛ-ಸುಂದರ ಶಿವಮೊಗ್ಗ ನಗರವಾಗುತ್ತದೆ ಎಂದು ನಂಬಿದ್ದ ಜನರ ಆಸೆ ಈಗ ಹುಸಿಯಾಗಿದೆ.ಸ್ಮಾರ್ಟ್ ಸಿಟಿ ಕೆಲಸ ನಡೆಯುತ್ತಿರುವುದರಿಂದ ಯುಜಿಡಿ ಪೈಪ್‌ಗಳು, ಕುಡಿಯುವ ನೀರಿನ ಪೈಪ್‌ಗಳು, ಏರ್ ಪೈಪ್‌ಗಳು ಕೆಲವಡೆ ಹಾಳಾಗಿವೆ. ಇನ್ನೂ ಕೆಲವಡೆ ಕಿತ್ತುಹೋಗಿವೆ. ಹಲವಡೆ ಅವೈಜ್ಞಾನಿಕ ಕಾಮಗಾರಿಗಳೇ ರಾರಾಜಿಸುತ್ತಿವೆ. ಸ್ಮಾರ್ಚ್‌ಸಿಟಿ ಕಳಪೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲ ಎಂಬಂತಾಗಿದೆ
- ಕೆ.ವಿ.ವಸಂತ್‌ಕುಮಾರ್, ಪ್ರಧಾನ ಕಾರ್ಯದರ್ಶಿ, ನಾಗರೀಕ ಹಿತರಕ್ಷಣಾ ವೇದಿಕೆ