ಶರಾವತಿ ಕಣಿವೆಯಲ್ಲಿ ಉದ್ದೇಶಿತ 2000 ಮೆಗಾವಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಗೆ ನಿಯಾಸ್ ಸಂಸ್ಥೆ ನೀಡಿರುವ ವರದಿಯನ್ನು ತಿರಸ್ಕರಿಸುವಂತೆ ಪರಿಸರ ತಜ್ಞರು ಆಗ್ರಹಿಸಿದ್ದಾರೆ. ಈ ಯೋಜನೆಯಿಂದ ಅಪಾರ ಅರಣ್ಯ ನಾಶ ಮತ್ತು ಭೂಕುಸಿತದ ಅಪಾಯವಿದ್ದರೂ, ನಿಯಾಸ್ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿಲ್ಲ ಎಂದು ತಜ್ಞರ ಸಮಿತಿ ಕಳವಳ ವ್ಯಕ್ತಪಡಿಸಿದೆ.

ಶಿವಮೊಗ್ಗ: ರಾಜ್ಯ ಸರ್ಕಾರದ ವತಿಯಿಂದ ಶರಾವತಿ ಕಣಿವೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 2000 ಮೆಗಾವಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿಚಾರದಲ್ಲಿ ನಿಯಾಸ್ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್) ಸಂಸ್ಥೆ ನೀಡಿರುವ ಅಧ್ಯಯನ ವರದಿಯನ್ನು ತಕ್ಷಣವೇ ತಿರಸ್ಕರಿಸಬೇಕು ಎಂದು ಮಲೆನಾಡಿನ ಪರಿಸರ ತಜ್ಞರ ಸಮಿತಿ ಒತ್ತಾಯಿಸಿದೆ.

ವರದಿಗೆ ಪರಿಸರ ತಜ್ಞರಿಂದ ವಿರೋಧ ಯಾಕೆ?

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸ್ಥಳೀಯ ಹಾಗೂ ಪರಿಸರ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಎಚ್.ಎಸ್. ಸಿಂಗ್ ನೇತೃತ್ವದಲ್ಲಿ ತಜ್ಞರ ಪರಿಶೀಲನಾ ಸಮಿತಿಯೊಂದನ್ನು ನೇಮಿಸಿತ್ತು. ಈ ಸಮಿತಿಯು ಸಾಗರ, ಜೋಗ, ಗೇರುಸೊಪ್ಪ ಹಾಗೂ ಹೊನ್ನಾವರ ಪ್ರದೇಶಗಳಿಗೆ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿತ್ತು. ಯೋಜನೆಯಿಂದ ಅಪಾರ ಜೀವವೈವಿಧ್ಯ ನಾಶ, ವನ್ಯಜೀವಿಗಳ ಆವಾಸಸ್ಥಾನಕ್ಕೆ ಹಾನಿ, ಭೂಕುಸಿತದ ಭೀತಿ ಹಾಗೂ ಭಾರಿ ಪ್ರಮಾಣದ ಅರಣ್ಯ ನಾಶವಾಗಲಿದೆ ಎಂಬ ಕಾರಣ ನೀಡಿ, ಯೋಜನೆಗೆ ಅನುಮತಿ ನೀಡಬಾರದು ಎಂದು ಸಮಿತಿ ವರದಿ ನೀಡಿತ್ತು.

ಆದರೆ, ಈ ವರದಿಯನ್ನು ಮರು ವಿಮರ್ಶೆ ಮಾಡಲು ಬೆಂಗಳೂರಿನ ನಿಯಾಸ್ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿತ್ತು. ನಿಯಾಸ್ ಸಂಸ್ಥೆಯು ಈ ಯೋಜನೆ ಜಾರಿಯಾಗಬೇಕು ಎಂದು ವರದಿ ಸಲ್ಲಿಸಿದೆ.

ವರದಿಯಲ್ಲಿ ಅಪಾಯಗಳ ನಿರ್ಲಕ್ಷ್ಯ

ಶರಾವತಿಯಂತಹ ಅಭಯಾರಣ್ಯದಲ್ಲೇ ಈ ಯೋಜನೆ ಏಕೆ ಬೇಕು ಎಂಬುದಕ್ಕೆ ಸೂಕ್ತ ಕಾರಣ ನೀಡಿಲ್ಲ. ಅಷ್ಟೇ ಅಲ್ಲದೆ, ಭೂಗರ್ಭದಲ್ಲಿ ವಿದ್ಯುತ್ ಕೇಂದ್ರ ಸ್ಥಾಪನೆ, ಸುರಂಗ ನಿರ್ಮಾಣ, ಅಂತರ್ಜಲ ಬದಲಾವಣೆ ಹಾಗೂ ಭೂಕುಸಿತದಂತಹ ಗಂಭೀರ ಅಪಾಯಗಳ ಬಗ್ಗೆ ವರದಿಯಲ್ಲಿ ಉಲ್ಲೇಖವೇ ಇಲ್ಲ. ಯೋಜನೆಗೆ ಪರ್ಯಾಯ ಸಾಧ್ಯತೆಗಳ ಬಗ್ಗೆ ಯಾವುದೇ ಚರ್ಚೆ ಮಾಡದೇ ತೇಪೆ ಸಾರುವ ಕೆಲಸ ಮಾಡಲಾಗಿದೆ ಎಂದು ನಾಗರಿಕ ಸ್ವತಂತ್ರ ತಜ್ಞ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ತಜ್ಞರ ಸಮಿತಿಯ ಪ್ರಮುಖರು

ನಾಗರಿಕ ಸ್ವತಂತ್ರ ತಜ್ಞ ಸಮಿತಿಯಲ್ಲಿ ರಾಜ್ಯ ಜೀವ ವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಪಶ್ಚಿಮಘಟ್ಟ ಕಾರ್ಯಪಡೆಯ ಸಂಚಾಲಕ ಕೆ.ಗಣಪತಿ, ಮುಂಬೈನ ಕಲ್ಪವೃಕ್ಷ ಸಂಸ್ಥೆಯ ಆಶೀಷ್ ಕೊಠಾರಿ, ನಿವೃತ್ತ ಹಿರಿಯ ಅರಣ್ಯಾಧಿಕಾರಿ ಬಿ.ಕೆ.ಸಿಂಗ್, ವನ್ಯಜೀವಿ ತಜ್ಞ ದೇಬಾದಿತ್ಯ ಸಿನ್ಹಾ, ಬೆಳಗಾವಿಯ ಪರಿಸರ ಹೋರಾಟಗಾರ ದಿಲೀಪ್ ಕಾಮತ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಗೋಪಾಲಗೌಡ, ಪರಿಸರವಾದಿ ಜೋಸೆಫ್ ಹೂವರ್, ಸಂಶೋಧಕ ರಾಜೇಶ್ ರಾಮಕೃಷ್ಣನ್, ನಿರ್ಮಲಾ ಗೌಡ, ಶಿವಮೊಗ್ಗದ ಎಲ್. ಶ್ರೀಪತಿ, ಐಐಟಿ ಧಾರವಾಡದ ಗೌರವ ಪ್ರಾಧ್ಯಾಪಕ ಶ್ರೀಪಾದ, ವಿಜ್ಞಾನಿ ಸುಭಾಸ್ ಚಂದ್ರನ್, ಕಾನಪುರದ ಸುಧೀರ ಶೇಷಾದ್ರಿ, ಹಿರಿಯ ಪರಿಸರ ತಜ್ಞ ಎ.ಎನ್. ಯಲ್ಲಪ್ಪರೆಡ್ಡಿ, ರವಿ ಚೋಪ್ರಾ, ಸಾಗರಧಾರಾ ಹಾಗೂ ಸುರತ್ಕಲ್‌ನ ಶ್ರೀಕುಮಾರ್ ತಜ್ಞರ ಸಮಿತಿಯಲ್ಲಿದ್ದಾರೆ.

ಇದನ್ನೂ ಓದಿ: ಕಬ್ಬು ರೈತರ ಹೋರಾಟಕ್ಕೆ ತಾತ್ಕಾಲಿಕ ತೆರೆ: 2 ಬೇಡಿಕೆ ಈಡೇರಿಕೆ ಹೊಣೆ ಜೋಶಿ ಹೆಗಲಿಗೆ