ಶಿವಮೊಗ್ಗಕ್ಕೆ ಕೊರೋನಾ ವಕ್ಕರಿಸಿಕೊಂಡಿದ್ದೇಗೆ? ಜಿಲ್ಲೆಯ ಬಣ್ಣ ಬದಲಿಸಿದವರ್ಯಾರು?
ಗ್ರೀನ್ ಝೋನ್‌ನಲ್ಲಿದ್ದ ದಾವಣಗೆರೆ, ಚಿತ್ರದುರ್ಗಕ್ಕೆ ಕೊರೋನಾ ಮಾಹಾಮಾರಿ ವಕ್ಕರಿಸಿಕೊಂಡಿದ್ದೇ ತಡ ಇದೀಗ ಯಾವಾಗಲೂ ಹಸಿರಿನಿಂದ ಕೂಡಿರುವ ಮಲೆನಾಡ ಜಿಲ್ಲೆ ಶಿವಮೊಗ್ಗಕ್ಕೂ ಕಾಲಿಟ್ಟಿದೆ. ಹಾಗಾದ್ರ ಶಿವಮೊಗ್ಗಕ್ಕೆ ಕೊರೋನಾ ಆಮದು ಆಗಿದ್ದೇಗೆ..?
ಶಿವಮೊಗ್ಗ, (ಮೇ.10) : ಮಹಾಮಾರಿ ಕೊರೋನಾ ಇದೀಗ ಮಲೆನಾಡ ಜಿಲ್ಲೆ ಶಿವಮೊಗ್ಗಕ್ಕೂ ಕಾಲಿಟ್ಟಿದ್ದು, ಇದರಿಂದಾಗಿ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ.
ರಾಜ್ಯಕ್ಕೆ ಕೊರೋನ ಕಾಲಿಟ್ಟ ದಿನದಿಂದ ಇಲ್ಲಿಯವರೆಗೂ ಶಿವಮೊಗ್ಗ ಹಸಿರು ವಲಯದಲ್ಲಿ ಗುರುತಿಸಿಕೊಂಡಿತ್ತು. ಆದರೆ ಭಾನುವಾರ ಒಮ್ಮೆಲೆ 8 ಮಂದಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇದೀಗ ಶಿವಮೊಗ್ಗ ಕೂಡ ರೆಡ್ ಜೋನ್ ನತ್ತ ತಿರುಗುವಂತೆ ಮಾಡಿದೆ.
ಗ್ರೀನ್ ಝೋನ್‌ನಲ್ಲಿದ್ದ ಸಿಎಂ ತವರು ಜಿಲ್ಲೆಗೆ ವಕ್ಕರಿಸಿದ ಕೊರೋನಾ...!
ಕಂಟಕವಾದ ತಬ್ಲಿಘಿ ಗಳು:
ತಬ್ಲಿಘಿ ಗಳು ಮಲೆನಾಡು ಜಿಲ್ಲೆ ಶಿವಮೊಗ್ಗಕ್ಕೆ ಕಂಟಕವಾಗಿದ್ದಾರೆ. ಇಲ್ಲಿಯವರೆಗೂ ಹಸಿರು ವಲಯದಲ್ಲಿದ್ದ ಶಿವಮೊಗ್ಗದಲ್ಲಿ ಭಾನುವಾರದಂದು ಒಂದೇ ಬಾರಿಗೆ ಎಂಟು ಮಂದಿಗೆ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಇಡೀ ಜಿಲ್ಲೆ ಬೆಚ್ಚಿ ಬಿದ್ದಿದೆ.
ಶಿಕಾರಿಪುರ ತಾಲೂಕಿನ ಏಳು ಮಂದಿಗೆ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಒಬ್ಬರಲ್ಲಿ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಕೊರೋನ ಸೋಂಕಿತರಿಗೆಂದೇ ನಿಗದಿಪಡಿಸಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಅವರನ್ನೀಗ ಕ್ವಾರಂಟೈನ್ ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಹಮದಾಬಾದ್ ಟು ಶಿವಮೊಗ್ಗ :
ಕಳೆದ ಮಾರ್ಚ್ 5 ರಂದು ಗುಜರಾತ್ ರಾಜ್ಯದ ಅಹಮದಾಬಾದ್ ಗೆ ದಾವಣಗೆರೆಯಿಂದ ರೈಲಿನ ಮೂಲಕ 9 ಜನರು ತೆರಳಿದ್ದರು. ಅಲ್ಲಿ ಜಮಾತೆಯಲ್ಲಿ ಭಾಗವಹಿಸಿದ ನಂತರ ಮಸೀದಿಯೊಂದರಲ್ಲಿ ಇವರೆಲ್ಲಾ ಆಶ್ರಯ ಪಡೆದಿದ್ದರು. ಅ ಸಂದರ್ಭದಲ್ಲಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಗುಜರಾತ್ ಸರ್ಕಾರ ಇವರನ್ನೆಲ್ಲಾ ಕ್ವಾರಂಟೈನ್ ನಲ್ಲಿ ಇರಿಸಿತ್ತು. ನಂತರ ಅಲ್ಲಿನ ಸರ್ಕಾರದ ಅನುಮತಿ ಮೇರೆಗೆ ಶಿವಮೊಗ್ಗಕ್ಕೆ ವಾಪಾಸ್ಸಾಗಿದ್ದರು.
ಕರಾಳ ಭಾನುವಾರ :
ದೂರದ ಅಹಮದಾಬಾದ್ ನಿಂದ ಖಾಸಗಿ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದು, ಮುಂಬೈ, ಬೆಳಗಾವಿ ಮೂಲಕ ಶನಿವಾರ ಶಿವಮೊಗ್ಗ ತಲುಪಿದ್ದರು.ಕೂಡಲೇ ಅವರುಗಳನ್ನೆಲ್ಲ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಅಹಮದಾಬಾದ್ ಗೆ ತೆರಳಿದ್ದ 9 ಮಂದಿಯಲ್ಲಿ ಇದೀಗ ಎಂಟು ಮಂದಿಗೆ ಕರೋನಾ ಸೋಂಕು ತಗುಲಿರುವುದು ದೃಢಪಟ್ಟಿರುವುದರ ಮೂಲಕ ಮೂಲಕ ಶಿವಮೊಗ್ಗಕ್ಕೆ ಮೇ 10 ಕರಾಳ ಭಾನುವಾರವಾಗಿ ಪರಿಣಮಿಸಿದೆ.
25 ಮಂದಿಗೆ ಕ್ವಾರಂಟೈನ್ ಶಿಕ್ಷೆ :
ಶಿವಮೊಗ್ಗಕ್ಕೆ ಬಂದ ತಬ್ಲೀಘಿಗಳನ್ನು ವೈದ್ಯಕೀಯ ಪರೀಕ್ಷೆ ಮಾಡಿದವರಿಂದ ಹಿಡಿದು, ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಗೆ ಒಳಪಡಿಸಿದವರು ಮತ್ತು ಹಾಸ್ಟೆಲ್ ಸಿಬ್ಬಂದಿ ಸೇರಿದಂತೆ ಸುಮಾರು 25 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಮಲೆನಾಡಿಗರಿಗೆ ಆತಂಕ :
ಒಂದೇ ಬಾರಿಗೆ 8 ಪಾಸಿಟಿವ್ ಪ್ರಕರಣ ದಾಖಲಾಗುವುದರ ಮೂಲಕ ಶಿವಮೊಗ್ಗ ರೆಡ್ ಝೋನ್ ಗೆ ತಿರುಗುವಂತೆ ಮಾಡಿದೆ. ಗುಜರಾತ್ ನಿಂದ ತಬ್ಲೀಘಿಗಳು ಶಿವಮೊಗ್ಗಕ್ಕೆ ವಾಪಾಸ್ ಬಂದಿದ್ದು, ಶಿವಮೊಗ್ಗ ನಾಗರೀಕರು ಇದೀಗ ಆತಂಕದಲ್ಲಿ ದಿನ ದೂಡುವಂತಾಗಿದೆ.
ಡೆಡ್ಲಿ ಬಸ್:
ಗುಜರಾತ್ ನೋಂದಣಿ ಸಂಖ್ಯೆಯ ಬಸ್ ನಲ್ಲಿ ಆಗಮಿಸಿದ ತಬ್ಲಿಘಿಗಳು ಇದೀಗ ಮಲೆನಾಡಿಗರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದ್ದಾರೆ. ಲಾಕ್ ಡೌನ್ ಸಡಿಲಿಕೆ ಮಾಡಿದ್ದರಿಂದ ತಮಗೇನು ತೊಂದರೆ ಇಲ್ಲ ಎಂದು ಭಯ-ಭೀತಿ ಇಲ್ಲದೇ ಓಡಾಡಿಕೊಂಡಿದ್ದ ಶಿವಮೊಗ್ಗದ ಜನತೆ ಆತಂಕಕ್ಕೆ ಈಡಾಗಿದ್ದಾರೆ.
ವ್ಯರ್ಥವಾದ ಜಿಲ್ಲಾಡಳಿತದ ಶ್ರಮ :
ಕೊರೋನಾ ಜಿಲ್ಲೆಗೆ ಕಾಲಿಡದಂತೆ ತಡೆಯುವಲ್ಲಿ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿತ್ತು. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು ಸೇರಿದಂತೆ ಆರೋಗ್ಯ, ವೈದ್ಯಕೀಯ, ಪೊಲೀಸ್, ಆಶಾ ಕಾರ್ಯಕರ್ತೆಯರು, ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಹಲವರ ಪರಿಶ್ರಮದ ಜಿಲ್ಲೆ ಕೊರೋನಾ ಮುಕ್ತವಾಗಿತ್ತು. ಆದರೆ ಗುಜರಾತಿನಿಂದ ಶಿವಮೊಗ್ಗಕ್ಕೆ ಆಗಮಿಸಿದವರಲ್ಲಿ ಸೊಂಕು ತಗುಲಿದ್ದು, ಇದೀಗ ಜಿಲ್ಲಾಡಳಿತದ ಶ್ರಮ ಸಂಪೂರ್ಣ ವ್ಯರ್ಥವಾದಂತಾಗಿದೆ.
ಸೋಂಕಿತರ ವಿವರ :
1. P-808, ವಯಸ್ಸು 65 ಪುನೇತಹಳ್ಳಿ, ಶಿಕಾರಿಪುರ.
2. P-809, ವಯಸ್ಸು 65 ವಿನಾಯಕ ನಗರ, ಶಿಕಾರಿಪುರ.
3. P-810, ವಯಸ್ಸು 18 ಆಶ್ರಯ ಬಡಾವಣೆ ಶಿಕಾರಿಪುರ.
4. P-811, ವಯಸ್ಸು 56 ಆಶ್ರಯ ಬಡಾವಣೆ ಶಿಕಾರಿಪುರ.
5. P-812, ವಯಸ್ಸು 43 ಅಂಬರಗೊಪ್ಪ, ಶಿಕಾರಿಪುರ.
6. P-813, ವಯಸ್ಸು 25 ಬಿಳಿಕಿ ಶಿಕಾರಿಪುರ.
7. P-814, ವಯಸ್ಸು 20 ಜಟಪಟ್ ನಗರ, ಶಿಕಾರಿಪುರ.
8. P-815 ವಯಸ್ಸು 27 ಕೋಣಂದೂರು, ತೀರ್ಥಹಳ್ಳಿ ತಾಲೂಕು.