ಶಿವಮೊಗ್ಗ ಪಿಯು ಕಾಲೇಜು ವಿದ್ಯಾರ್ಥಿನಿಗೆ ಹೃದಯಾಘಾತ; ಬಾಗಿಲಲ್ಲಿ ಬಿದ್ದಿದ್ದಷ್ಟೇ, ಪ್ರಾಣವೇ ಹೋಯ್ತು!
ಶಿವಮೊಗ್ಗದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಾಲೇಜು ಆವರಣದಲ್ಲಿ ತರಗತಿಗೆ ಹೋಗುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಮುಭಾಶಿರ ಭಾನು (17) ಮೃತ ವಿದ್ಯಾರ್ಥಿನಿ. ಲೋ ಬಿಪಿಯಿಂದಾಗಿ ಹೃದಯಾಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗ (ಡಿ.18): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಾಲೇಜು ಆವರಣದಲ್ಲಿ ತರಗತಿ ಕೋಣೆಗೆ ಹೋಗುವಾಗ ಹೃದಯಾಘಾತ ಸಂಭವಿಸಿದ್ದು, ತಕ್ಷಣವೇ ಹಿಂದಕ್ಕ ಬಿದ್ದಿದ್ದಾಳೆ. ಕೂಡಲೇ ಆ ವಿದ್ಯಾರ್ಥಿನಿಯನ್ನು ಎಬ್ಬಿಸಲು ಪ್ರಯತ್ನ ಮಾಡಿದರೂ ಬದುಕುಳಿಯದೇ ವಿದ್ಯಾರ್ಥಿನಿಯ ಜೀವ ಅಲ್ಲಿಯೇ ಹೋಗಿದೆ.
ಈ ಘಟನೆ ಶಿವಮೊಗ್ಗದ ನಂಜಪ್ಪ ಲೇಔಟ್ ನಲ್ಲಿರುವ ಇಂಟೀರಿಯಲ್ ಪಿಯು ಕಾಲೇಜಿನಲ್ಲಿ ನಡೆದಿದೆ. ಮುಭಾಶಿರ ಭಾನು (17) ಸಾವನಪ್ಪಿದ ವಿದ್ಯಾರ್ಥಿನಿ ಆಗಿದ್ದಾಳೆ. ಕಾಲೇಜ್ ಆವರಣದಲ್ಲಿ ಕುಸಿದು ಬಿದ್ದ ವಿದ್ಯಾರ್ಥಿನಿಯ ಪ್ರಾಣಪಕ್ಷಿ ಕೆಲವೇ ಕ್ಷಣಗಳಲ್ಲಿ ಹಾರಿ ಹೋಗಿದೆ. ಇನ್ನು ವಿದ್ಯಾರ್ಥಿನಿಗೆ ಲೋ ಬಿಪಿಯಿಂದಾಗಿ ಹೃದಯಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಬಾಣಂತಿಯರ ಸಾವು; ನಿನ್ನೆ ಕಲಬುರಗಿ ಭಾಗ್ಯ, ಇಂದು ಚಿಕ್ಕಮಗಳೂರು ಸವಿತಾ ಬಲಿ!
ಇಂಟೀರಿಯಲ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಮುಭಾಶಿರ ಬಾನು, ಇಂದು ಬೆಳಗ್ಗೆ ಕಾಲೇಜಿಗೆ ಹೋದ ನಂತರ ಪ್ರಾಂಶುಪಾಲರ ಚೇಂಬರ್ ಬಳಿ ನಡೆದು ಹೋಗಿದ್ದಾಳೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಾಂಶುಪಾಲ ಕೋಣೆಯಿಂದ ಮುಂದೆ ಸಾಗಿ ತನ್ನ ತರಗತಿ ಕೋಣೆಯೊಳಗೆ ನಡೆದುಕೊಂಡು ಹೋಗುವಾಗ ಹಿಂದಕ್ಕೆ ಕುಸಿದು ಬಿದ್ದಿದ್ದಾಳೆ. ಇತರೆ ವಿದ್ಯಾರ್ಥಿಗಳು ಆಕೆಯನ್ನು ಹಿಡಿದುಕೊಳ್ಳಲು ಯತ್ನಿಸಿದರೂ ಸಾಧ್ಯವಾಗದೇ ನೆಲಕ್ಕೆ ಬಿದ್ದಿದ್ದಾಳೆ. ಕೂಡಲೇ ಕಾಲೇಜು ಸಿಬ್ಬಂದಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮುನ್ನವೇ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.