ಅಯೋಧ್ಯೆ ರಾಮ ಮಂದಿರಕ್ಕೆ ನಿಧಿ ಸಂಗ್ರಹ ಅಭಿಯಾನ ಈಗಾಗಲೇ ಆರಂಭವಾಗಿದೆ. ಈ ನಿಟ್ಟಿನಲ್ಲಿ ಇದೀಗ ಅನೇಕರು ತಮ್ಮ ಶಕ್ತ್ಯಾನುಸಾರ ದೇಣಿಗೆ ನೀಡುತ್ತಿದ್ದಾರೆ. ಇದೇ ರೀತಿ ಮುಸ್ಲಿಂ ವ್ಯಕ್ತಿಯೊಬ್ಬರು 1 ಲಕ್ಷ ರು ದೇಣಿಗೆ ನೀಡಿದ್ದಾರೆ. 

ಬೆಂಗಳೂರು (ಜ.16):  ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಯೋಜನೆಯನ್ವಯ ವಿಶ್ವಹಿಂದೂ ಪರಿಷತ್‌ ನೇತೃತ್ವದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಶುಕ್ರವಾರ ರಾಜ್ಯಾದ್ಯಂತ ಆರಂಭವಾಗಿದೆ. ಫೆ.5ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಿತ್ರನಟಿ ಸುಮಲತಾ ಸೇರಿದಂತೆ ಅನೇಕ ಗಣ್ಯರು, ಭಕ್ತರು ತಮ್ಮ ಶಕ್ತ್ಯಾನುಸಾರ ದೇಣಿಗೆ ನೀಡಿದರು.

ಶಿವಮೊಗ್ಗದ ಮುಸ್ಲಿಂ ಉದ್ಯಮಿಯೊಬ್ಬರು ಸೌಹಾರ್ದದ ಸಂಕೇತವಾಗಿ ರಾಮಮಂದಿರಕ್ಕೆ 1 ಲಕ್ಷ ರು. ದೇಣಿಗೆ ನೀಡಿದ್ದಾರೆ. ನಗರದ ಅಶೋಕನಗರ ನಿವಾಸಿ ಹಾಗೂ 93 ಮಾರ್ಕ್ ಬೀಡಿ ಮಾಲೀಕ ಮುಜೀಬ್‌ ಮತ್ತು ಕುಟುಂಬದವರು ಸಚಿವ ಈಶ್ವರಪ್ಪ ಅವರಿಗೆ 1,01,001 ಚೆಕ್‌ ಹಸ್ತಾಂತರಿಸಿದ್ದಾರೆ.

ಉಡುಪಿಯಲ್ಲಿ ಟ್ರಸ್ಟ್‌ನ ವಿಶ್ವಸ್ಥರಾಗಿರುವ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಯಾನಕ್ಕೆ ಚಾಲನೆ ನೀಡಿದ್ದು ಅಷ್ಟಮಠಾಧೀಶರು ನೀಡಿದ ತಮ್ಮ ಮಠದ ದೇಣಿಗೆಯನ್ನು ಸಂಗ್ರಹಿಸಿ ಪೇಜಾವರ ಶ್ರೀಗಳಿಗೆ ಹಸ್ತಾಂತರಿಸಿದರು. ಉತ್ತರ ಕನ್ನಡ ಶಿರಸಿಯಲ್ಲಿ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದರು.

ರಾಮ ಮಂದಿರ ದೇಣಿಗೆ ಸಂಗ್ರಹಕ್ಕೆ ಭರ್ಜರಿ ಪ್ರತಿಕ್ರಿಯೆ: 11 ಕೋಟಿ ರೂ. ನೀಡಿದ ಉದ್ಯಮಿ! ..

ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ, ಹೊಸಪೇಟೆಯಲ್ಲಿ ಸಚಿವ ಆನಂದ್‌ ಸಿಂಗ್‌, ಚಿಕ್ಕಬಳ್ಳಾಪುರದಲ್ಲಿ ಡಾ.ಸುಧಾಕರ್‌ ಅಭಿಯಾನಕ್ಕೆ ಚಾಲನೆ ನೀಡಿದರು. ಮೈಸೂರಿನಲ್ಲಿ ನಟ ಅಭಿಷೇಕ್‌ ಅಂಬರೀಶ್‌ ಅವರು ಚಾಲನೆ ನೀಡಿ ತಮ್ಮ ದೇಣಿಗೆ ಅರ್ಪಿಸಿದರು. ಮಂಡ್ಯದ ಆರೆಸ್ಸೆಸ್‌ ಕಾರ್ಯಾಲಯವಾದ ಕಮಲ ಮಂದಿರಕ್ಕೆ ಭೇಟಿ ನೀಡಿದ ಸಂಸದೆ ಸುಮಲತಾ ಅವರು ಜಿಲ್ಲಾ ಪ್ರಚಾರಕ್‌ ಉಮೇಶ್‌ ಅವರಿಗೆ ತಮ್ಮ ದೇಣಿಗೆ ಹಸ್ತಾಂತರಿಸಿದರು.

ಏತನ್ಮಧ್ಯೆ ಕಲಬುರಗಿಯ ಶರಣಬಸವೇಶ್ವರ ಮಹಾ ದಾಸೋಹ ಪೀಠದ ವತಿಯಿಂದ 25 ಲಕ್ಷ ರು. ದೇಣಿಗೆಯನ್ನು ದಾಸೋಹಪೀಠದ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಘೋಷಿಸಿದ್ದಾರೆ.