ರಾಮ ಮಂದಿರ ದೇಣಿಗೆ ಸಂಗ್ರಹಕ್ಕೆ ಭರ್ಜರಿ ಪ್ರತಿಕ್ರಿಯೆ: 11 ಕೋಟಿ ರೂ. ನೀಡಿದ ಉದ್ಯಮಿ!
ರಾಮಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿಯಿಂದ 5 ಲಕ್ಷ| ಗುಜರಾತ್ ಉದ್ಯಮಿಯಿಂದ 11 ಕೋಟಿ| ದೇಣಿಗೆ ಸಂಗ್ರಹಕ್ಕೆ ಉತ್ತಮ ಆರಂಭಿಕ ಪ್ರತಿಕ್ರಿಯೆ
ನವದೆಹಲಿ(ಜ.16): ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆಂದು ವಿಶ್ವ ಹಿಂದು ಪರಿಷತ್ ಸಂಕ್ರಾಂತಿಯಿಂದ ಆರಂಭಿಸಿರುವ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಶುಕ್ರವಾರ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೊಟ್ಟಮೊದಲಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 5,01,000 ರು. ಮೊತ್ತದ ಚೆಕ್ ಅನ್ನು ರಾಮಮಂದಿರ ನಿರ್ಮಾಣ ಹೊಣೆ ಹೊತ್ತಿರುವ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ನಡುವೆ, ಜಾರ್ಖಂಡ್ ರಾಜ್ಯಪಾಲೆ ದ್ರೌಪದಿ ಮುರ್ಮು ಅವರು 51,000 ರು. ಮತ್ತು ಸೂರತ್ ವಜ್ರೋದ್ಯಮಿ ಗೋವಿಂದಭಾಯಿ ಧೋಲಕಿಯಾ 11 ಕೋಟಿ ರು.ವನ್ನು ದೇಣಿಗೆ ನೀಡಿದರು. ಅಲ್ಲದೆ ಬಾಬ್ರಿ ಮಸೀದಿ ವಿವಾದದ ಕಕ್ಷಿದಾರ ಇಕ್ಬಾಲ್ ಅನ್ಸಾರಿ, ತಾವೂ ಸಹ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.