ಶಿವಮೊಗ್ಗ(ಜೂ.26): ಜಿಲ್ಲೆಯ ಕೊರೋನಾ ಪಾಸಿಟಿವ್‌ ಪ್ರಕರಣ ಸಮರ್ಥವಾಗಿ ನಿಭಾಯಿಸಲು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಕೊರೋನಾ ಪಾಸಿಟಿವ್‌ ವ್ಯಕ್ತಿಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಶಿವಮೊಗ್ಗ ಮೆಡಿಕಲ್‌ ಕಾಲೇಜು ನಿರ್ದೇಶಕ ಡಾ.ಸಿದ್ದಪ್ಪ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 119 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 89 ಮಂದಿ ಗುಣಮುಖರಾಗಿ ವಾಪಸಾಗಿದ್ದಾರೆ. ಸದ್ಯ 28ಮಂದಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಮೆಗ್ಗಾನ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಕೊರೋನಾ ಪಾಸಿಟಿವ್‌ ರೋಗಿಗಳಿಗಾಗಿ ಪ್ರಸ್ತುತ 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. 20 ಐಸಿಯು ಹಾಸಿಗೆಗಳು, 40 ಎಚ್‌ಡಿಯು ಹಾಸಿಗೆಗಳು ಮತ್ತು 40 ಐಸೋಲೇಷನ್‌ ಹಾಸಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 8ವೆಂಟಿಲೇಟರ್‌ ಲಭ್ಯ ಇವೆ. ಕೋವಿಡ್‌ ಆಸ್ಪತ್ರೆಯಲ್ಲಿ ರೋಗಿಗಳು ಪ್ರತ್ಯೇಕವಾಗಿ ಒಳಬರಲು ಹಾಗೂ ಹೊರ ಹೋಗಲು ಪ್ರತ್ಯೇಕ ರಾರ‍ಯಂಪ್‌ ಸಿದ್ಧಪಡಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

ಕೊರೋನಾ ಪಾಸಿಟಿವ್‌ ವ್ಯಕ್ತಿಗಳಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಆಹಾರ ಮತ್ತು ಚಿಕಿತ್ಸೆ ಒದಗಿಸಲಾಗುತ್ತಿದೆ. ಎಲ್ಲಾ ಬಾತ್‌ರೂಂಗಳಿಗೆ ಗೀಜರ್‌ ಅಳವಡಿಸಲಾಗಿದೆ. ಕುಡಿಯಲು ಬಿಸಿ ಹಾಗೂ ತಣ್ಣನೆ ನೀರು ಬರುವಂತಹ 3 ಡಿಸ್ಪೆನ್ಸರ್‌ಗಳನ್ನು ಇರಿಸಲಾಗಿದೆ. ಉತ್ತಮವಾದ ಶುಚಿ ರುಚಿಯಾದ ಆಹಾರ ಒದಗಿಸಲಾಗುತ್ತಿದೆ. ಪ್ರತಿ ದಿನ 2500 ಕ್ಯಾಲರಿ ಚಪಾತಿ, ಕಾಳು ಪಲ್ಯ, ಮೊಟ್ಟೆ, ಅನ್ನ, ಸಾಂಬಾರು ಮತ್ತು ಹಣ್ಣು ಒಳಗೊಂಡಂತೆ ಶುದ್ಧ ಆಹಾರ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಕೋಲಾರದಲ್ಲಿ ಮಹಾಮಾರಿ ಕೊರೋನಾಗೆ ಮೊದಲ ಬಲಿ...!

ಯಾವುದೇ ಪರಿಸ್ಥಿತಿ ನಿಭಾಯಿಸಲು ಸಿದ್ಧತೆ ಮಾಡಲಾಗಿದೆ. ಕೋವಿಡ್‌ ಆಸ್ಪತ್ರೆಯನ್ನು ಪ್ರಸ್ತುತ 100ರಿಂದ 250 ಹಾಸಿಗೆ ಸಾಮರ್ಥ್ಯಕ್ಕೆ ಉನ್ನತೀಕರಿಸಲಾಗುತ್ತಿದೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನೆಲ ಮಹಡಿಯಲ್ಲಿ ಹೆಚ್ಚುವರಿಯಾಗಿ 150 ಹಾಸಿಗೆ ಸಜ್ಜುಗೊಳಿಸಲಾಗುತ್ತಿದೆ. ಇದರಲ್ಲಿ ತಲಾ 30 ಐಸಿಯು ಬೆಡ್‌ ಮತ್ತು ಎಚ್‌ಡಿಯು ಬೆಡ್‌ ಮತ್ತು 90 ಐಸೋಲೇಷನ್‌ ಬೆಡ್‌ಗಳಿವೆ. ಕೊರೋನಾ ಚಿಕಿತ್ಸೆಗೆ ಅಗತ್ಯ ಎಲ್ಲ ಔಷ​ಧಿ ಸಾಕಷ್ಟುಪ್ರಮಾಣದಲ್ಲಿ ಲಭ್ಯವಿದೆ. ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳಿಗೆ ಅವಶ್ಯವಿರುವ ಸ್ಯಾನಿಟೈಸರ್‌, ಪಿಪಿಇ ಕಿಟ್‌, ಎನ್‌-95 ಮಾಸ್ಕ್‌ ಪೂರೈಸಲಾಗಿದೆ ಎಂದು ತಿಳಿಸಿದ್ದಾರೆ.

ಕೊರೋನಾ ಪಾಸಿಟಿವ್‌ ವ್ಯಕ್ತಿಗಳಿಗೆ ಇನ್ನಷ್ಟುಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ಪಾಸಿಟಿವ್‌ ವ್ಯಕ್ತಿಗಳಿಂದ ಅಭಿಪ್ರಾಯ, ಸಲಹೆಗಳನ್ನು ಪಡೆಯಲು ಫಾಮ್‌ರ್‍ ನೀಡಲಾಗುತ್ತಿದೆ. ಅದರಲ್ಲಿ ಅವರು ನೀಡುವ ಸಲಹೆಗಳನ್ನು ಪರಿಗಣಿಸಿ ಸೇವೆಯನ್ನು ಇನ್ನಷ್ಟುಉತ್ತಮಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

- ಜಿಲ್ಲಾ​ಧಿಕಾರಿ ಕೆ.ಬಿ.ಶಿವಕುಮಾರ್‌