Shivamogga ಬಾಲ್ಯ ವಿವಾಹ ತಡೆ ಬಗ್ಗೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟ DC

ಬಾಲ್ಯ ವಿವಾಹಗಳ ತಡೆ ಬಗ್ಗೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ   ಅವರು ಅಧಿಕಾರಿಗಳಿಗೆ ಖಡಕ್ ಸೂಚನೆಗಳನ್ನ ನೀಡಿದ್ದಾರೆ.

Shivamogga DC Selvamani Talks About child marriage rbj

ಶಿವಮೊಗ್ಗ, (ಜುಲೈ.12): ಬಾಲ್ಯ ವಿವಾಹ ಮಾಡುವ ಕಲ್ಯಾಣ ಮಂದಿರ, ದೇವಸ್ಥಾನ, ಮದುವೆ ಮಾಡಿಸುವ ಪೂಜಾರಿಗಳು, ಆಮಂತ್ರಣ ಮುದ್ರಿಸುವ ಪ್ರಿಂಟರ್ ಸೇರಿದಂತೆ ಬಾಲ್ಯವಿವಾಹಕ್ಕೆ ಸಹಕರಿಸುವವರೆಲ್ಲರ ವಿರುದ್ದ ಪ್ರಕರಣ ದಾಖಲು ಮಾಡಬೇಕೆಂದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ  ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು (ಶುಕ್ರವಾರ) ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಾಲ್ಯವಿಹಾಹ ತಡೆಗಟ್ಟಲು ಅನೇಕ ರೀತಿಯಲ್ಲಿ ಅರಿವು ಮೂಡಿಸಲಾಗುತ್ತಿದ್ದರೂ, ಬಾಲ್ಯವಿವಾಹಗಳು ನಡೆಯುತ್ತಲೇ ಇವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಸಮಿತಿಯವರು ಇಂತಹ ಮದುವೆಗೆ ಸಹಕರಿಸಿದವರೆಲ್ಲರ ವಿರುದ್ದ ಪ್ರಕರಣ ದಾಖಲಿಸಬೇಕೆಂದರು.

BIG 3 Impact: ಶಿವಮೊಗ್ಗದ ಬೀದಿ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ, ಮಳಿಗೆ ಉದ್ಘಾಟನೆ
 
ಬಾಲ್ಯವಿವಾಹವನ್ನು ತಗ್ಗಿಸಲು ಡಿಡಿಪಿಯು ಮತ್ತು ಡಿಡಿಪಿಐ ರವರು ಶಾಲಾ-ಕಾಲೇಜು ಮುಖ್ಯೋಪ್ಯಾಧ್ಯಾಯರನ್ನು ಕರೆಯಿಸಿ, ಮಕ್ಕಳ ಕಲ್ಯಾಣ ಸಮಿತಿ ಸಹಯೋಗದಲ್ಲಿ ಸಭೆ ನಡೆಸಿ, ಮಕ್ಕಳ ಕುರಿತು ಹೆಚ್ಚಿನ ನಿಗಾ ವಹಿಸುವ ಬಗ್ಗೆ ಹಾಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಕ್ರಮ ವಹಿಸಲು ಸೂಚಿಸಿದರು ಪಿಯುಸಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದರು

ದತ್ತು ಕೇಂದ್ರಕ್ಕೆ ಅಗತ್ಯವಾದ ಸಿಬ್ಬಂದಿಯನ್ನು ಕೂಡಲೇ ನಿಯೋಜಿಸಲು ಕ್ರಮ ವಹಿಸಿ, ಆಗಸ್ಟ್ 15 ರೊಳಗೆ ಕೇಂದ್ರವನ್ನು ಆರಂಭಿಸಬೇಕು. ಬಾಲಕಿಯರ ಬಾಲ ಮಂದಿರದ ಸ್ಥಿತಿ ಉತ್ತಮವಾಗಿಲ್ಲ. ಸೂಕ್ತವಾದ ಕಟ್ಟಡವನ್ನು ಹುಡುಕಿ ಸುಧಾರಣೆಗೆ ಕ್ರಮ ವಹಿಸಬೇಕು. ವಿಶೇಷ ಪಾಲನಾ ಯೋಜನೆ, ಪೋಷಕತ್ವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.

ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು ಬಾಲನ್ಯಾಯ ಮಂಡಳಿ ಮುಂದೆ ಬಂದ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿ, ಪುನರ್ವಸತಿಗೆ ಒತ್ತು ನೀಡಬೇಕು. ಸ್ವಾಧಾರ ಗೃಹಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗಬೇಕು. ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ತ್ವರಿತ ವಿಲೇವಾರಿ ಮಾಡಿ ಸೂಕ್ತ ಪರಿಹಾರ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸೂಚನೆ
ಮಕ್ಕಳ ಸಹಾಯವಾಣಿ 1098 ಸೇರಿದಂತೆ ಮಕ್ಕಳ ಹಕ್ಕುಗಳ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ತರಬೇತಿ ಮತ್ತು ಅರಿವು ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರೊಂದಿಗೆ ಡಿಡಿಪಿಐ, ಡಿಡಿಪಿಯು ಇವರು ಮುಖ್ಯೋಪಾಧ್ಯಾಯರು, ಎಸ್‍ಡಿಎಂಸಿ, ಶಿಕ್ಷಕರ ಸಹಯೋಗದೊಂದಿಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳು, ಜಾಥಾ ಹಾಗೂ ಪ್ರಾರ್ಥನೆ ವೇಳೆ ತಿಳಿಸಬೇಕು. ಈ ಕುರಿತು ತಾಲ್ಲೂಕು ಇಓ ವರದಿ ನೀಡಬೇಕು ತಿಳಿಸಿದರು.

112ಗೆ ಕರೆ ಮಾಡಿ ನೆರವು ಪಡೆಯಲು ಸೂಚನೆ
ಮಕ್ಕಳ ಸಹಾಯವಾಣಿ 1098 ಗೆ ಅಪರಾತ್ರಿ ವೇಳೆ ಅಥವಾ ಅತಿ ತುರ್ತು ಕರೆಗಳು ಬಂದಾಗ ಚೈಲ್ಡ್‌ ಲೈನ್ ಅಧಿಕಾರಿಗಳು 112 ಗೆ ಕರೆ ಮಾಡಿ ಪೊಲೀಸರ ನೆರವು ಪಡೆದು ಕಾರ್ಯಪ್ರವೃತ್ತರಾಗಬೇಕು. ಹಾಗೂ ಮಕ್ಕಳ ಸಹಾಯವಾಣಿ ಸೇರಿದಂತೆ ಮಕ್ಕಳ ಹಕ್ಕುಗಳು ಮತ್ತು ಮಹಿಳೆಯರ ಸಂರಕ್ಷಣೆ ಕುರಿತಾದ ಎಲ್ಲಾ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಕುರಿತು ಹೆಚ್ಚಿನ ಅರಿವು, ಐಇಸಿ(ಮಾಹಿತಿ, ಶಿಕ್ಷಣ, ಸಂವಹನ) ಚಟುವಟಿಕೆಯನ್ನು ಹೆಚ್ಚಿಸಬೇಕು ಎಂದು ಮಾಹಿತಿ ನೀಡಿದರು.

 ಸಿಇಓ ಎಂ.ಎಲ್.ವೈಶಾಲಿ ಹೇಳಿಕೆ
ಸಭೆಯಲ್ಲಿ ಉಪಸ್ಥಿತರಿದ್ದ ಜಿ.ಪಂ. ಸಿಇಓ ಎಂ.ಎಲ್.ವೈಶಾಲಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ವಿಶೇಷವಾಗಿ ನಗರ ಭಾಗದಲ್ಲಿ ಕಡ್ಡಾಯವಾಗಿ ಗರ್ಭಿಣಿಯರ ತಾಯಿ ಕಾರ್ಡ್ ಮಾಡಿಸಬೇಕು. ಅಂಗನವಾಡಿ ಮತ್ತು ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆಗಾಗಿ ಆರ್‍ಬಿಎಸ್‍ಕೆ ತಂಡ ಇನ್ನೂ ಚುರುಕಾಗಬೇಕು. ಆರೋಗ್ಯ ತಪಾಸಣೆಯಲ್ಲಿ ನಾಲ್ಕು ‘ಡಿ’ ಗಳಾದ ಡಿಸ್‍ಆರ್ಡರ್, ಡಿಫಿಷಿಯನ್ಸಿ, ಡಿಸೆಬಿಲಿಟಿ ಮತ್ತು ಡಿಫೆಕ್ಟ್‍ಗಳನ್ನು ರೆಫರ್ ಮಾಡಿ ಸಮಸ್ಯೆ ಸರಿಹೋಗುವವರೆಗೆ ಅನುಪಾಲನೆ ಮಾಡಬೇಕು. ಆರೋಗ್ಯ ತಪಾಸಣೆ ಮತ್ತು ಲಸಿಕಾಕರಣಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ತಿಳಿಸಿದರು.

ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಗುರುತಿಸಿ ನಿಗದಿತ ಅವಧಿಯವರೆಗೆ ಎನ್‍ಆರ್‍ಸಿ(ನ್ಯೂಟ್ರಿಷನ್ ರಿಹ್ಯಾಬಿಲಿಟೇಷನ್ ಸೆಂಟರ್) ಯಲ್ಲಿ ಇರಿಸಿ, ಸೂಕ್ತ ಚಿಕಿತ್ಸೆ ನೀಡಿ, ಪೋಷಕರಿಗೆ ಪೌಷ್ಟಿಕತೆ ಮತ್ತು ಆಹಾರ ಕ್ರಮದ ಕುರಿತು ತಿಳಿಸಬೇಕು. ಜಿಲ್ಲೆಯಲ್ಲಿ ಒಟ್ಟು 2458 ಅಂಗನವಾಡಿ ಕೇಂದ್ರಗಳಿದ್ದು, 237 ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸ್ವಂತ ಕಟ್ಟಡ ಹೊಂದಲು ಸಿಡಿಪಿಓ ಗಳು ಸೂಕ್ತ ಜಾಗ ಹುಡುಕಬೇಕು. ನಗರ ಭಾಗದಲ್ಲಿ ಜಾಗ ಸಿಗುವುದು ಸ್ವಲ್ವ ಕಷ್ಟವಾಗಿದ್ದು ಜಾಗಕ್ಕಾಗಿ ಆಯುಕ್ತರು ಮತ್ತು ಡಿಸಿ ಯವರ ಗಮನಕ್ಕೆ ತಂದು ಎಲ್ಲ ರೀತಿಯಲ್ಲಿ ಪ್ರಯತ್ನಿಸಬೇಕು ಹೇಳಿದರು.

ನಗರದ ಪುನರ್ವಸತಿ ಕೇಂದ್ರ ಮತ್ತು ಮಹಿಳಾ ನಿಲಯದಲ್ಲಿ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ನಿಲಯದಲ್ಲಿ ಮಾನಸಿಕವಾಗಿ ಬಳಲುತ್ತಿರುವ ಹೆಣ್ಣುಮಕ್ಕಳಿಗೆ ಮಾನಸಿಕ ತಜ್ಞರಿಂದ ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನ ಆಗಬೇಕೆಂದರು.

ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗಣೇಶ್ ಘಟಕದ ಕಾರ್ಯಕ್ರಮಗಳು ಮತ್ತು ಯೋಜನೆಗಳ ವರದಿ ಸಲ್ಲಿಸಿದರು. ಮಹಿಳಾ ಕಲ್ಯಾಣ ಯೋಜನೆ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಗಂಗೂಬಾಯಿ ವರದಿ ನೀಡಿದರು. ಐಸಿಡಿಎಸ್ ಯೋಜನೆಗಳು ಮತ್ತು ಜಿಲ್ಲಾ ಮಟ್ಟದ ಸ್ವತಂತ್ರ ವಿಶೇಷ ಟಾಸ್ಕ್‍ಫೋರ್ಸ್ ಸಮಿತಿ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ ವಿವರಣೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಡಿಹೆಚ್‍ಓ ಡಾ. ರಾಜೇಶ್ ಸುರಗಿಹಳ್ಳಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಡಿಪಿಓ ಗಳು, ಇಓ ಗಳು ಹಾಜರಿದ್ದರು.

Latest Videos
Follow Us:
Download App:
  • android
  • ios