ಶಿವಮೊಗ್ಗ (ಆ.28):  ಜೋಗದ ಅಭಿವೃದ್ಧಿಯ ಶಕೆ ಆರಂಭವಾಗುವ ಮುನ್ನವೇ ಸದ್ಯದ ಸ್ಥಿತಿಯಲ್ಲಿ ವ್ಯವಸ್ಥೆಯನ್ನು ಸರಿಪಡಿಸುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಗುರುವಾರ ಜೋಗಕ್ಕೆ ಭೇಟಿ ನೀಡಿ ಹಲವಾರು ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.

ಪ್ರಮುಖವಾಗಿ ವಾಹನಗಳ ದಟ್ಟಣೆಯ ಹಿನ್ನೆಲೆಯಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್‌ ಜಾಮ್‌ ಗಮನಿಸಿ, ಜಲಪಾತ ವೀಕ್ಷಣಾ ಸ್ಥಳ ಪ್ರವೇಶಿಸುವ ಯಾವುದೇ ವಾಹನ ಒಮ್ಮೆ ಟಿಕೆಟ್‌ ಪಡೆದರೆ ನಾಲ್ಕು ಗಂಟೆಗಳಿಗೆ ಮಾತ್ರ ಅವಕಾಶ ನೀಡುವಂತೆ ಸೂಚನೆ ನೀಡಿದ್ದಾರೆ. ನಾಲ್ಕು ಗಂಟೆಯ ಬಳಿಕ ಮತ್ತೊಮ್ಮೆ ಟಿಕೆಟ್‌ ಪಡೆಯ ಬೇಕಾಗುತ್ತದೆ. ಇದರಿಂದಾಗಿ ಅನಗತ್ಯ ಟ್ರಾಫಿಕ್‌ ಜಾಮ್‌ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

ಜೋಗ ಫಾಲ್ಸ್‌​ನಲ್ಲಿ ಟೆಕಿ ಆತ್ಮಹತ್ಯೆ ಹೈ ಡ್ರಾಮಾ..

ಜಲಪಾತ ವೀಕ್ಷಣಾ ಸ್ಥಳದಲ್ಲಿ ಎರಡು ಸಾಲುಗಳು ಮಾಡುವಂತೆ ತಿಳಿಸಲಾಗಿದೆ. ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಮಾಸ್ಕ್‌ ಧರಿಸಬೇಕು. ಜೊತೆಗೆ ಸಾಮಾಜಿಕ ಅಂತರ ಕೂಡ ಕಾಪಾಡುವಂತೆ ಮನವರಿಕೆ ಮಾಡಿಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಲಪಾತದ ಕೆಳಗೆ ಮೆಟ್ಟಿಲು ಮೂಲಕ ಇಳಿಯಲು ಶನಿವಾರ ಮತ್ತು ಭಾನುವಾರ ಅವಕಾಶ ನೀಡದೆ ಇರಲು ನಿರ್ಧರಿಸಲಾಗಿದೆ. ಇದಕ್ಕೆ ಅಧಿಕ ಜನದಟ್ಟಣೆಗೆ ಕಾರಣವಾಗಿದೆ. ವಾಹನಗಳ ಪಾರ್ಕಿಂಗ್‌ಗೆ ನಾಲ್ಕು ಪ್ರತ್ಯೇಕ ಸ್ಥಳಗಳನ್ನು ಸೂಚಿಸಲಾಗಿದ್ದು, ಇವುಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆಯೂ ಹೇಳಿದರು.

'ಜೋಗಕ್ಕೆ 150 ಕೋಟಿ ರು. ವೆಚ್ಚ​ದ​ಲ್ಲಿ ಮೆರುಗು'..

ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಮರೆತು ಮೈಮರೆತಿದ್ದ ಪ್ರವಾಸಿಗರಿಗೆ ಎಸ್‌ಪಿ ಶಾಂತರಾಜು ಮೈಕ್‌ ಮೂಲಕ ಸಾಮಾಜಿಕ ಅಂತರದ ಪಾಠ ಮಾಡಿದರು. ಇದೇ ವೇಳೆ ಪ್ರವಾಸೋದ್ಯಮ ಹಾಗೂ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

- ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಆಗುತ್ತಿದ್ದ ಸಮಸ್ಯೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ. ಬಿ.ಶಿವಕುಮಾರ್‌ ಭೇಟಿ ನೀಡಿ ಹಲವು ಸೂಚನೆ ನೀಡಿದರು.