ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತ ಆನೆ ಗಲಿಬಿಲಿಗೊಂಡು ಓಡಿದಾಗ ದೇವಿಯ ವಿಗ್ರಹಕ್ಕೆ ಹಾನಿಯಾಗಿತ್ತು. ಈ ದೋಷ ಪರಿಹಾರಕ್ಕಾಗಿ ಐದು ದಿನಗಳ ಕಾಲ ನಡೆದ ಪ್ರಾಯಶ್ಚಿತ್ತ ಹೋಮಗಳು ಯಶಸ್ವಿಯಾಗಿ ಸಂಪನ್ನಗೊಂಡಿವೆ.
ಶಿವಮೊಗ್ಗ: ಶಿವಮೊಗ್ಗ ದಸರಾ ಮೆರವಣಿಗೆಯ ವೇಳೆ ಅಂಬಾರಿ ಹೊತ್ತ ಸೋಮಣ್ಣ ಆನೆ ಗಲಿಬಿಲಿಗೊಂಡು ಓಡಿದಾಗ ಬೆಳ್ಳಿ ಅಂಬಾರಿ ಕಳಚಿ ಬಿದ್ದು, ತಾಯಿ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಹಾನಿಯಾಗಿದ್ದ ಹಿನ್ನೆಲೆ ಈ ಅವಘಡದ ದೋಷ ಪರಿಹಾರಕ್ಕಾಗಿ ಶಿವಮೊಗ್ಗದ ಪ್ರಮುಖ ದೇವಾಲಯಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಐದು ದಿನಗಳ ವಿಶೇಷ "ಪ್ರಾಯಶ್ಚಿತ್ತ ಹೋಮ" ಹಾಗೂ ಧಾರ್ಮಿಕ ವಿಧಿವಿಧಾನಗಳು ಯಶಸ್ವಿಯಾಗಿ ಸಂಪನ್ನಗೊಂಡಿವೆ.
ಪ್ರಾಯಶ್ಚಿತ್ತ ಹೋಮ
ಶೃಂಗೇರಿ ಜಗದ್ಗುರುಗಳ ಮಾರ್ಗದರ್ಶನ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಪಂಡಿತರ ಸೂಚನೆಯಂತೆ ನವೆಂಬರ್ 3 ರಿಂದ ನವೆಂಬರ್ 7 ರವರೆಗೆ ನಗರದ ಕೋಟೆ ಚಂಡಿಕಾ ಪರಮೇಶ್ವರಿ ದೇವಾಲಯ ಹಾಗೂ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಈ ವಿಶೇಷ ಪೂಜೆಗಳು ಜರುಗಿದವು.
ಐದು ದಿನಗಳ ಕಾಲ ನಡೆದ ಪ್ರಾಯಶ್ಚಿತ್ತ ಹೋಮ ಶನಿವಾರ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಸಂಪನ್ನಗೊಂಡಿದೆ.
ಶಿವಮೊಗ್ಗ ದಸರಾ ಮೆರವಣಿಗೆ ವೇಳೆ ನಡೆದ ಅಹಿತಕರ ಘಟನೆಗೆ ಪರಿಹಾರವಾಗಿ ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ಮತ್ತು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರಾಯಶ್ಚಿತ್ತ ಹೋಮ ಆಯೋಜಿಸಲಾಗಿತ್ತು.
ಎರಡು ದೇಗುಲಗಳಲ್ಲಿ ನಡೆದ ಪ್ರಾಯಶ್ಚಿತ್ತಾದಿ ಧಾರ್ಮಿಕ ವಿಧಿ ವಿಧಾನಗಳು ಜರುಗಿದ್ದು, ಶ್ರೀ ವಿಶ್ವಕ್ಸೇನ ಪೂಜೆ, ನವಗ್ರಹ ಪೂಜೆ ಹಾಗೂ ಹೋಮ, ಪೂರ್ಣಾಹುತಿ, ಸಂಪ್ರೋಕ್ಷಣೆ ಪೂಜೆಯೊಂದಿಗೆ ಪ್ರಾಯಶ್ಚಿತ್ತ ಹಿನ್ನೆಲೆ ಕೊನೆಯ ದಿನ ಗಜವಾಹನೋತ್ಸವ ವಿಶೇಷ ಪೂಜೆ ನೆರವೇರಿಸಲಾಗಿದೆ.
ಕೊನೆಯ ದಿನ ನಡೆದ ಹಿತ್ತಾಳೆಯ ಗಜವಾಹನೋತ್ಸವ, ಅಮ್ಮನವರ ತ್ರಿಶೂಲ ಇಟ್ಟು ಆನೆಯು ಚಲಿಸಿದ ರಸ್ತೆಯಲ್ಲಿ ಉತ್ಸವ, ಸೋಮಣ್ಣ ಆನೆ ಅಂಬಾರಿ ಹೊತ್ತು ಚಲಿಸಿದ ಮಾರ್ಗಗಳಲ್ಲಿ ಗಜ ವಾಹನೋತ್ಸವ, ಹಿತ್ತಾಳೆಯ ಆನೆಯ ಉತ್ಸವಮೂರ್ತಿ ಮತ್ತು ಅಮ್ಮನವರ ಉತ್ಸವ ಮೂರ್ತಿಗಳ ಮೆರವಣಿಗೆ, ಆನೆ ಮರಕ್ಕೆ ಡಿಕ್ಕಿ ಹೊಡೆದ ಜಾಗ, ಕಾರುಗಳನ್ನು ಜಖಂಗೊಳಿಸಿದ್ದ ಜಾಗ, ಆನೆ ಅಂಬಾರಿ ಮತ್ತು ವಿಗ್ರಹಗಳನ್ನು ಕೆಳಗೆ ಬೀಳಿಸಿದ ಜಾಗ, ಆನೆ ಅಂಬಾರಿ ಹೊತ್ತು ಓಡಿದ ಜಾಗಗಳೆಲ್ಲ ಪ್ರೋಕ್ಷಣೆ ಮತ್ತು ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಗಿದ್ದು. ಮೆರವಣಿಗೆಯಲ್ಲಿ ಪಾಲಿಕೆ ಆಯುಕ್ತ ಮಾಯಣ್ಣಗೌಡ ಮತ್ತು ಸಿಬ್ಬಂದಿ, ದೇಗುಲ ಸಮಿತಿಯ ಅಧ್ಯಕ್ಷ ದೇವೇಂದ್ರಪ್ಪ ಹಾಗೂ ಸದಸ್ಯರು ಸೇರಿದಂತೆ ಅರ್ಚಕರು ಭಾಗಿಯಾಗಿದ್ದರು.
ಮೆರವಣಿಗೆಯಲ್ಲಿ ಆಗಿದ್ದೇನು?
ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದ ಮೂರು ಪಳಗಿದ ಆನೆಗಳನ್ನು ಶಿವಮೊಗ್ಗ ನಗರಕ್ಕೆ ಕರೆತರಲಾಗಿತ್ತು.
ಕಳೆದ ಆರು ವರ್ಷಗಳಿಂದ ಸಾಗರ ಆನೆ ಶಿವಮೊಗ್ಗದಲ್ಲಿ ಅಂಬಾರಿಯನ್ನು ಹೊರುತ್ತಿದ್ದ. ಆದರೆ, ಈ ಬಾರಿ ಸಾಗರ ಆನೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಸೋಮಣ್ಣ ಆನೆಗೆ ಕೊನೆ ಕ್ಷಣದಲ್ಲಿ ಬೆಳ್ಳಿಯ ಅಂಬಾರಿ ಹೊರುವುದಕ್ಕೆ ಅರಣ್ಯ ಅಧಿಕಾರಿಗಳು ನಿರ್ಧರಿಸಿದ್ದರು. ಸೋಮಣ್ಣಗೆ ಕೇವಲ ನಗರದಲ್ಲಿ ಸುತ್ತಾಡಿದ ತಾಲೀಮು ಮಾತ್ರವಿತ್ತು. ಆದರೆ, ಅಂಬಾರಿ ಹೊತ್ತು ಸಾಗುವ ತಾಲೀಮು ನೀಡಿರಲಿಲ್ಲ. ಹೀಗಾಗಿ ಸೋಮಣ್ಣ ಆನೆ ಕೋಟೆ ಆಂಜನೇಯ ದೇಗುಲದಿಂದ ಕೇವಲ 500 ಮೀಟರ್ ಮುಂದೆ ಹೋಗಿ ಜನಜಂಗುಳಿಗೆ ಬೆದರಿ ವಾಪಸ್ ಓಡಿ ಬಂದಿತ್ತು. ವಾಪಸ್ ಬರುವಾಗ ಆನೆಯು ದೊಡ್ಡ ಅವಾಂತರ ಸೃಷ್ಟಿಸಿತ್ತು. ಅನೇಕ ಕಾರು ಬೈಕುಗಳು ಜಖಂ ಆಗಿದ್ದವು. ಹಾಗೆ ಅಂಬಾರಿಯ ಬೆಳ್ಳಿ ಮಂಟಪ ಕೆಳಗೆ ಬಿದ್ದು ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೂ ವಿಘ್ನ ಉಂಟಾಗಿತ್ತು.














