ಶಿವಮೊಗ್ಗ(ಮೇ.25): ಭಾನುವಾರದ ಲಾಕ್‌ಡೌನ್‌ಗೆ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೊರೋನಾ ವೈರಸ್‌ ಹರಡದಂತೆ ತಡೆಗಟ್ಟುವ ಸಲುವಾಗಿ ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಆದೇಶ ಪಾಲಿಸುವಂತೆ ಸರ್ಕಾರ ಸೂಚನೆ ನೀಡಿದೆ. ಅದರಂತೆ ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಲಾಕ್‌ಡೌನ್‌ ಜಾರಿಗೊಳಿಸಲಾಗಿತ್ತು.

ಶನಿವಾರ ಮಾತ್ರ ರಾತ್ರಿ 8.30 ರವರೆಗೂ ಜನ ಸಂಚಾರವಿತ್ತು. ಆದರೆ ಭಾನುವಾರ ಬೆಳಗ್ಗೆಯಿಂದಲೂ ನಗರದಲ್ಲಿ ಜನಸಂಚಾರ ವಿರಳವಾಗಿತ್ತು. ತುರ್ತುಸೇವೆ ಹಾಗೂ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಾಪಾರ, ವ್ಯವಹಾರಕ್ಕೆ ಅವಕಾಶ ಇರಲಿಲ್ಲ. ಹೀಗಾಗಿ ಮಾರುಕಟ್ಟೆಸಂಪೂರ್ಣ ಬಂದ್‌ ಆಗಿತ್ತು.

ನಗರದ ಪ್ರಮುಖ ವ್ಯಾಪಾರ-ವಹಿವಾಟು ಕೇಂದ್ರಗಳಾದ ಗಾಂಧಿಬಜಾರ್‌, ದುರ್ಗಿಗುಡಿ, ಸವಳಂಗ ರಸ್ತೆ, ನೆಹರು ರಸ್ತೆ ಬಿ.ಎಚ್‌ ರಸ್ತೆ, ಲಕ್ಷ್ಮಿ ಟಾಕೀಸ್‌ ವೃತ್ತ, ಪೊಲೀಸ್‌ ಚೌಕಿ ಸೇರಿದಂತೆ ಎಲ್ಲೆಡೆ ವಾಹನ ಸಂಚಾರ ವಿರಳವಾಗಿತ್ತು. ಪ್ರತಿನಿತ್ಯ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಗಾಂಧಿ ಬಜಾರ್‌ ರಸ್ತೆ, ದುರ್ಗಿಗುಡಿ ರಸ್ತೆ, ಬಿಎಚ್‌ ರಸ್ತೆ, ನೆಹರು ರಸ್ತೆ ಬಿಕೋ ಎನ್ನುತ್ತಿದ್ದವು. ಭಾನುವಾರ ಬೆಳಗ್ಗೆ ಸ್ವಲ್ಪ ಹೊತ್ತು ಅಗತ್ಯವಸ್ತುಗಳ ಖರೀದಿಗೆಂದು ಜನರು ಮನೆಯಿಂದ ಹೊರ ಬಂದಿದ್ದರಾದರೂ ನಂತರ ಮನೆಯತ್ತ ಹಿಂದಿರುಗಿದರು. ಒಂದು ದಿನದ ಕೊರೋನಾ ಕಫ್ರ್ಯೂಗೆ ಜನತೆ ಸಂಪೂರ್ಣ ಬೆಂಬಲ ನೀಡಿದರು.

ಬೆಳಗ್ಗೆ ಅಲ್ಲೊಂದು ಇಲ್ಲೊಂದು ವಾಹನ ಸಂಚಾರ ಇತ್ತಾದರೂ ಮಧ್ಯಾಹ್ನದ ವೇಳೆಗೆ ನಗರದಲ್ಲಿ ಕಫ್ರ್ಯೂ ವಾತಾವರಣ ಕಂಡು ಬಂದಿತ್ತು. ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ವಾಹನ ಸಂಚಾರ ತಡೆಗೆ ಬ್ಯಾರಿಕೇಡ್‌ ಹಾಕಲಾಗಿತ್ತು.

ಜೂನ್‌ 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ; ಚಿಕ್ಕಮಗಳೂರಿನಲ್ಲಿ 58 ಕೇಂದ್ರಗಳು

ಬಸ್‌ ಸ್ಟಾ್ಯಂಡ್‌ ವೃತ್ತ, ಎಎ ವೃತ್ತ, ಗೋಪಿ ವೃತ್ತ, ಮಹಾವೀರ ವೃತ್ತ, ಜೈಲ್‌ ಸರ್ಕಲ್‌, ಶಿವಮೂರ್ತಿ ಸರ್ಕಲ್‌ ಸೇರಿದಂತೆ ನಗರದ ವಿವಿಧೆಡೆ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದರು. ಇತ್ತ ಮಾರುಕಟ್ಟೆಬಂದ್‌ ಆಗಿದ್ದರಿಂದ ಜನರು ಮನೆಯಿಂದ ಹೊರ ಬರಲಿಲ್ಲ.

ರಸ್ತೆಗೆ ಇಳಿಯದ ಕೆಎಸ್‌ಆರ್‌ಟಿಸಿ :

ಭಾನುವಾರ ಸರ್ಕಾರಿ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಬಸ್‌ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಇರುವುದಿಲ್ಲ ಎನ್ನುವುದನ್ನು ಅರಿತಿದ್ದ ಪ್ರಯಾಣಿಕರು ಬಸ್‌ ನಿಲ್ದಾಣದತ್ತ ಸುಳಿಯಲಿಲ್ಲ. ಆಟೋರಿಕ್ಷಾ ಕೂಡ ರಸ್ತೆಗೆ ಇಳಿಯಲಿಲ್ಲ.

ಅಗತ್ಯ ವಸ್ತು ಖರೀದಿ:

ತರಕಾರಿ, ಹಾಲು, ದಿನಸಿ, ಮಾಂಸ-ಮೀನು ಖರೀದಿಗೆ ಅವಕಾಶ ನೀಡಲಾಗಿತ್ತು. ಭಾನುವಾರ ಬೆಳಗ್ಗೆ ತರಕಾರಿ, ಹಾಲು, ಮೀನು, ಮಾಂಸ ಖರೀದಿಗೆಂದು ಜನರು ಮನೆಯಿಂದ ಹೊರಬಂದರಾದರು ನಂತರ ಜನರ ಓಡಾಟ ಕಡಿಮೆಯಾಯಿತು. ಈ ಭಾನುವಾರ ಮಾಂಸ ಮಾರಾಟದ ಅಂಗಡಿ ಮುಂದೆ ಜನರ ಸಂಖ್ಯೆ ಕಡಿಮೆಯಿತ್ತು. ಇದ್ದವರು ಕೂಡ ಸಾಮಾಜಿಕ ಅಂತರದೊಂದಿಗೆ, ಮಾಸ್ಕ್‌ ಧರಿಸಿ ಖರೀದಿಗೆ ಆಗಮಿಸಿದ್ದರು. ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.