ಚಿಕ್ಕಮಗಳೂರು(ಮೇ.25): ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೂ.25 ರಿಂದ ಆರಂಭವಾಗಲಿದ್ದು, ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, 58 ಕೇಂದ್ರಗಳನ್ನು ಇದಕ್ಕಾಗಿ ಸಜ್ಜುಗೊಳಿಸಲಾಗಿದೆ.

ಕೊರೋನಾದಿಂದ ತಲೆದೋರಿರುವ ಸಮಸ್ಯೆಗಳ ನಡುವೆಯೂ ಯಶಸ್ವಿಯಾಗಿ ಪರೀಕ್ಷಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ನಂಜಯ್ಯ ತಿಳಿಸಿದ್ದಾರೆ.

ಈವರೆಗೆ ಜಿಲ್ಲೆಯ 58 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಈ ಬಾರಿಯೂ ಅದರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಸಾಮಾನ್ಯವಾಗಿ ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಈ ಬಾರಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆನ್ನುವ ಕಾರಣಕ್ಕೆ ಅದನ್ನು 20 ಸೀಟುಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಈ 58 ಕೇಂದ್ರಗಳ ಪೈಕಿ ಯಾವುದಾದರೂ ಕೇಂದ್ರದಲ್ಲಿ 22 ಕೊಠಡಿಗಳಿದ್ದು, ಹೆಚ್ಚುವರಿಯಾಗಿ ಐದಾರು ಕೊಠಡಿಗಳು ಬೇಕಾದಲ್ಲಿ ಪಕ್ಕದಲ್ಲೇ ಇರುವ ನಡೆದು ಹೋಗಬಹುದಾದ ಯಾವುದೇ ಸರ್ಕಾರಿ ಅಥವಾ ಖಾಸಗಿ ಶಾಲೆ ಕೊಠಡಿಗಳನ್ನು ಬಳಸಿಕೊಳ್ಳಲಾಗುವುದು ಎಂದರು.

ಮಾಸ್ಕ್‌, ಸ್ಯಾನಿಟೈಜರ್‌:

ಜಿಲ್ಲೆಯಲ್ಲಿ ಒಟ್ಟು 13,371 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಮಾಸ್ಕ್‌ ಧರಿಸುವುದು ಕಡ್ಡಾಯ. ಮಾಸ್ಕ್‌ಗಳನ್ನು ಪೂರೈಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಸೇರಿದಂತೆ ವಿವಿಧ ಸಂಸ್ಥೆಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಮುಂದೆ ಬಂದಿದ್ದಾರೆ. ಪ್ರತಿ ವಿದ್ಯಾರ್ಥಿಗೆ 2 ಮಾಸ್ಕ್‌ನಂತೆ 27 ಸಾವಿರ ಮಾಸ್ಕ್‌ಗಳನ್ನು ಇಲಾಖೆಗೆ ಆರ್ಥಿಕ ಹೊರೆ ಇಲ್ಲದಂತೆ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಸ್ಯಾನಿಟೈಜರ್‌ ವ್ಯವಸ್ಥೆ ಮಾಡಲಾಗುವುದು. ಎಲ್ಲ ಕೊಠಡಿಗಳನ್ನು ಸ್ವಚ್ಚವಾಗಿಟ್ಟು ಕೊಳ್ಳಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜ್ವರ, ಇನ್ನಿತರೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಂಡುಬರುವ ಶಂಕಾಸ್ಪದ ಮಕ್ಕಳನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಒಂದೇ ದಿನ 23 ಪ್ರಕರಣ: ಸಮುದಾಯಕ್ಕೆ ಸೋಂಕು ಭೀತಿ!

ಶಾಲಾ ಲಾಗ್‌ ಇನ್‌ಗಳಿಗೆ ಮೇ.25ರ ನಂತರ ಪ್ರವೇಶ ಪತ್ರ ಹಾಗೂ ನಾಮಿನಲ್‌ ರೋಲ್‌ಗಳನ್ನು ಕಳುಹಿಸಿಕೊಡಲಾಗುವುದು. ನಂತರ ಆಯಾ ಶಾಲೆಯ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಪರೀಕ್ಷೆಗೆ ಹತ್ತು ದಿನ ಮೊದಲು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಈಗಾಗಲೇ ವೇಳಾಪಟ್ಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ಕೊಡಲಾಗಿದೆ ಎಂದು ಹೇಳಿದರು.

3 ಮಾದರಿ ಪರೀಕ್ಷೆಗಳು:

ಪರೀಕ್ಷೆಗೆ ವಿದ್ಯಾರ್ಥಿಗಳು ಇನ್ನಷ್ಟುಸಿದ್ಧರಾಗಬೇಕೆನ್ನುವ ದೃಷ್ಟಿಯಿಂದ ಫಲಿತಾಂಶ ಗುರಿಯಾಗಿಟ್ಟುಕೊಂಡು ಬಹು ಆಯ್ಕೆಯ 3 ಮಾದರಿ ಪರೀಕ್ಷೆಗಳನ್ನು ಈಗಾಗಲೇ ಮುಗಿಸಲಾಗಿದೆ. ಅದರಲ್ಲಿ ಪರಿಣಾಮಕಾರಿ ಫಲಿತಾಂಶ ಸಿಕ್ಕಿದೆ. ಇಲಾಖೆಯಿಂದ ಆಯಾ ಶಾಲೆ ಶಿಕ್ಷಕರಿಗೆ ವಿಷಯವಾರು ಪ್ರಶ್ನೆಪತ್ರಿಕೆಯನ್ನು ಲಾಗ್‌ ಇನ್‌ನಲ್ಲಿ ಕಳಿಸಿಕೊಡಲಾಗಿತ್ತು. ಅವರು ಅದನ್ನು ಮಕ್ಕಳಿಗೆ ವಾಟ್ಸಪ್‌ನಲ್ಲಿ ಕಳಿಸಿದ್ದರು. ಮಕ್ಕಳು ಮೊಬೈಲ್‌ನಲ್ಲಿ ಪ್ರಶ್ನೆಗಳನ್ನು ನೋಡಿ, ಉತ್ತರ ಬರೆದಿದ್ದಾರೆ. ಈ ವೇಳೆ ತಪ್ಪಾಗಿದ್ದ ಉತ್ತರಗಳನ್ನು ಸರಿಯಾಗಿ ಹೇಳಿಕೊಡುವ ಕೆಲಸ ನಡೆದಿದೆ. ಮುಂದಿನ ವಾರದಲ್ಲಿ 3 ಅಥವಾ 4 ಅಂಕಗಳ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಪರೀಕ್ಷೆ ನೀಡಲಾಗುವುದು. ಈ ಮೂಲಕ ಮಕ್ಕಳ ಮನಸ್ಸನ್ನು ಪರೀಕ್ಷೆಯೆಡೆಗೆ ಕೇಂದ್ರೀಕರಿಸುವ ಕಾರ್ಯವನ್ನು ಶಿಕ್ಷಕರು, ಸಂಪನ್ಮೂಲ ತಂಡಗಳು ವಿಷಯವಾರು ಪರಿವೀಕ್ಷಕರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಸಂಪನ್ಮೂಲ ತಂಡದಿಂದ ನಡೆಸಲಾಗುತ್ತಿದೆ ಎಂದು ಹೇಳಿದರು.

ಚಂದನ ವಾಹಿನಿ ಉಪಯೋಗ:

ಆ್ಯಂಡ್ರಾಯ್ಡ್‌ ಮೊಬೈಲ್‌ ಇಲ್ಲದವರು ಹಾಗೂ ನೆಟ್‌ವರ್ಕ್ ಸಮಸ್ಯೆ ಇರುವ ಕಡೆ ವಿದ್ಯಾರ್ಥಿಗಳಿಗೆ ಹೇಗಾದರೂ ಮಾಡಿ ಪ್ರಶ್ನೆಪತ್ರಿಕೆ ತಲುಪಿಸುವ ಗರಿಷ್ಠ ಪ್ರಯತ್ನ ಮಾಡಿದ್ದೇವೆ. ಒಂದುವೇಳೆ ಅದು ಸಾಧ್ಯ ಆಗದಿದ್ದಲ್ಲಿ ಪತ್ರಿಕೆಯನ್ನು ಜೆರಾಕ್ಸ್‌ ಮಾಡಿ ಅವರ ಮನೆಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ. ಇದರೊಂದಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಠ, ಪ್ರವಚನ, ಪರೀಕ್ಷಾ ಸಿದ್ಧತೆಯ ಮಾಹಿತಿಗಳು ಮಕ್ಕಳಿಗೆ ಸಾಕಷ್ಟುಉಪಯೋಗವಾಗಿವೆ. ಇದರೊಂದಿಗೆ ಇಲಾಖೆಯ ಮಾದರಿ ಪಾಠಗಳು ಮುಂದುವರಿದಿವೆ. ಒಟ್ಟಾರೆ ಕೊರೋನಾ ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಉಳಿದಿರುವ ಮಕ್ಕಳಿಗೆ ಕಲಿಕೆಯಿಂದ ಅಂತರ ಉಂಟಾಗಬಾರದು ಎನ್ನುವ ದೃಷ್ಟಿಯಿಂದ ಇಲಾಖೆ ಎಲ್ಲ ರೀತಿಯ ಪ್ರಯತ್ನ ನಡೆಸಿದೆ ಎಂದು ತಿಳಿಸಿದರು.

ಕೊರೋನಾ ಸಂದರ್ಭದಲ್ಲಿ ಮಕ್ಕಳ ರಕ್ಷಣೆ ಜವಾಬ್ದಾರಿ ಇಲಾಖೆ ಮೇಲಿದೆ. ಇಲಾಖೆಯ ಆಯುಕ್ತರು, ಪರೀಕ್ಷಾ ಮಂಡಳಿ ನಿರ್ದೇಶಕರ ನಿರ್ದೇಶನದ ಮೇರೆಗೆ ಬಿಇಒಗಳ ಸಭೆ ಮಾಡಿ ಸೂಚನೆಗಳನ್ನು ನೀಡಲಾಗಿದೆ. ಜಿಲ್ಲಾ ಹಂತದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಸಭೆ ಮೇ 27ರಂದು ನಡೆಸಿ ಅವರಿಗೆ ಇತ್ತೀಚಿನ ಪರೀಕ್ಷಾ ಸಂಬಂಧ ನಿರ್ದೇಶನಗಳನ್ನು ನೇರವಾಗಿ ತಿಳಿಸಲಾಗುವುದು ಎಂದರು.