ಶಿವಮೊಗ್ಗದ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಶಾಸಕ ಎಸ್.ಎನ್. ಚನ್ನಬಸಪ್ಪ ಮತ್ತು ಪಾಲಿಕೆ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ದಸರಾ ಕಾರ್ಯಕ್ರಮವನ್ನು ಜಿಲ್ಲಾಡಳಿತವೇ ವಹಿಸಿಕೊಳ್ಳಬೇಕು ಎಂದು ಮನವಿ ಸಲ್ಲಿಸಲಾಗಿದೆ.

Shivamogga Vande Mataram Row | ಸರ್ಕಾರದ ಆದೇಶ ಉಲ್ಲಂಘಿಸಿ ವಂದೇ ಮಾತರಂ ಗೀತೆಯನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಹಾಡಿದ್ದನ್ನು ವಿರೋಧಿಸಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ನಗರ ಪಾಲಿಕೆಯ ದಸರಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ಕಾರ ಆದೇಶದಂತೆ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಹಾಡಲಾಗಿತ್ತು. ಆದರೆ ಸ್ಥಳೀಯ ಶಾಸಕರಾದ ಎಸ್.ಎನ್. ಚನ್ನಬಸಪ್ಪ ಅವರು ಪೂರ್ಣ ನಾಲ್ಕು ಚರಣಗಳನ್ನು ಹಾಡಿಸಿದರು. ಪಾಲಿಕೆ ಆಯುಕ್ತ ಮಾಯಣ್ಣಗೌಡ ಉಪಸ್ಥಿತರಿದ್ದರೂ, ಕೂಡ ಸರ್ಕಾರದ ಆದೇಶ ಉಲ್ಲಂಘಿಸಿದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಇದನ್ನು ಖಂಡಿಸಿ ನಿಗಮ ಮಂಡಳಿಯ ಅಧ್ಯಕ್ಷರು, ನಾಮ ನಿರ್ದೇಶಿತ ಸದಸ್ಯರು ಸಭಾ ತ್ಯಾಗ ಮಾಡಬೇಕಾಗಿ ಬಂತು ಎಂದು ಪ್ರತಿಭಟನಾಕಾರರು ತಿಳಿಸಿದರು.

ಇದು ಪೂರ್ವ ನಿಯೋಜಿತ ಎಂದ ಕಾಂಗ್ರೆಸ್:

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ.ಯೋಗೀಶ್, ಈ ಹಿಂದೆ ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶದಂತೆ ಎರಡೇ ಚರಣ ಹಾಡಿದಾಗ ಇದೇ ಶಾಸಕರು ಸಭಾ ತ್ಯಾಗ ಮಾಡಿದ್ದರು. ತೀರ್ಥಹಳ್ಳಿಯಲ್ಲೂ ಕೂಡ ಮುಖ್ಯಮಂತ್ರಿಗಳು ಬಂದಿದ್ದಾಗ ಇದೇ ನಿಲುವನ್ನು ಪ್ರಕಟಿಸಿದ್ದರು. ಇದು ಪೂರ್ವ ನಿಯೋಜಿತವಾಗಿದೆ ಎಂದರು.

ಶಾಸಕ ಚನ್ನಬಸಪ್ಪ ಅವರು ದಸರಾ ಸಮಿತಿಯ ಅಧ್ಯಕ್ಷರಾಗಿದ್ದು, ಇವರ ನೇತೃತ್ವದಲ್ಲಿ ಪೂರ್ವ ತಯಾರಿಯೊಂದಿಗೆ ಆಗಮಿಸಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುವಂತೆ ಪ್ರೇರಣೆ ನೀಡಿದ್ದಾರೆ. ಆಯುಕ್ತರು ಕೂಡ ಸುಮ್ಮನಿದ್ದಾರೆ. ಆದ್ದರಿಂದ ಇದನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಮತ್ತು ಮಹಾನಗರ ಪಾಲಿಕೆಯಿಂದ ನಡೆಸುತ್ತಿರುವ ದಸರಾ ಕಾರ್ಯಕ್ರಮವನ್ನು ಇನ್ನು ಮುಂದೆ ಜಿಲ್ಲಾಡಳಿತವೇ ವಹಿಸಿಕೊಂಡು ನಡೆಸಬೇಕು. ಕಾರಣ ಈ ಕಾರ್ಯಕ್ರಮ ಈಗ ಬಿಜೆಪಿ ಕಾರ್ಯಕ್ರಮವಾಗಿ ರೂಪಗೊಳ್ಳುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಹಾಗಾಗಿ ಚನ್ನಬಸಪ್ಪ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮುಂದುವರೆಸಬಾರದು ಮತ್ತು ಪಾಲಿಕೆ ಆಯುಕ್ತ ಮಾಯಣ್ಣಗೌಡ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಪ್ರಮುಖರಾದ ಆರ್.ಪ್ರಸನ್ನಕುಮಾರ್, ಚೇತನ್ ಗೌಡ, ಮಧುಸೂಧನ್, ಎಸ್.ಪಿ ದಿನೇಶ್, ಶಿ.ಜು.ಪಾಷ, ಎಚ್.ಎಂ ಮಧು, ಪಾಲಕ್ಷಿ, ಆರ್.ರಾಜಶೇಖರ್, ಜಿ.ಡಿ.ಮಂಜುನಾಥ್, ದಿನೇಶ್ ಪಟೇಲ್, ಮಂಜುನಾಥ ಬಾಬು, ಕವಿತಾ, ರೇಷ್ಮಾ, ಯಮುನಾ ರಂಗೇಗೌಡ, ವಿಜಯಲಕ್ಷ್ಮಿ ಪಾಟೀಲ್, ಸ್ಟೆಲಾ ಮಾರ್ಟಿನ್, ಚಿನ್ನಪ್ಪ, ಎಸ್. ರವಿಕುಮಾರ್, ಅರ್ಚನಾ ನಿರಂಜನ್, ಎಸ್.ಟಿ.ಹಾಲಪ್ಪ, ಪಿ.ಎಸ್.ಗಿರೀಶ್ ರಾವ್, ಡಾ. ಪ್ರದೀಪ್ ಡಿಮೇಲ್ಲೋ, ಯು.ಶಿವಾನಂದ್, ಕಲೀಂ ಪಾಷ, ಶಿವುಕುಮಾರ್ ಮತ್ತಿತರರು ಇದ್ದರು.

--------