ಶಿವಮೊಗ್ಗದ ಬಿಜೆಪಿ ಕಾರ್ಯಕರ್ತ ಗೋಕುಲಕೃಷ್ಣ ಮೇಲಿನ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.!
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಕೆಂಚೇನಹಳ್ಳಿ ಕುಮಾರ ಅವರು, ಬಿಜೆಪಿ ಕಾರ್ಯಕರ್ತ ಗೋಕುಲಕೃಷ್ಣನ ಮೇಲೆ ನಡೆಸಿದ್ದ ಹಲ್ಲೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಶಿವಮೊಗ್ಗ (ಡಿ.11): ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಕೆಂಚೇನಹಳ್ಳಿ ಕುಮಾರ ಅವರು, ಬಿಜೆಪಿ ಕಾರ್ಯಕರ್ತ ಗೋಕುಲಕೃಷ್ಣನ ಮೇಲೆ ನಡೆಸಿದ್ದ ಹಲ್ಲೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹೌದು, ಭದ್ರಾವತಿಯ ಬಿಜೆಪಿ ಕಾರ್ಯಕರ್ತ ಗೋಕುಲ್ ಕೃಷ್ಣ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಲ್ಲೆ ಪ್ರಕರಣ ಹಳೆಯ ದ್ವೇಷಕ್ಕೆ ನಡೆದಿದ್ದು ಎಂಬುದು ಬೆಳಕಿಗೆ ಬಂದಿದೆ. ಮಾಜಿ ಪುರಸಭಾ ಸದಸ್ಯ ಕೆಂಚೇನಹಳ್ಳಿ ಕುಮಾರ್ ವಿರುದ್ಧ ಬಿಜೆಪಿ ಕಾರ್ಯಕರ್ತ ಗೋಕುಲ್ ಕೃಷ್ಣ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದನು. 'ಕುಲ್ಡಾ ನಾ ನಿನ್ನ ಬಿಡಲಾರೆ ಆನ್ ದಿ ವೇ ಟು ಡಾರ್ಲಿಂಗ್ ಕೆಂಚು' ಎಂದು ಬರೆದುಕೊಂಡಿದ್ದನು. ಇನ್ನು ಅನೇಕ ಮೆಸೇಜ್‌ಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿಕೊಂಡು ಕೆಂಚನಹಳ್ಳಿ ಕುಮಾರ್ ಅವರಿಗೆ ಅವಹೇಳನ ಮಾಡಿದ್ದನು.
ಅಷ್ಟೇ ಅಲ್ಲದೆ ಕೆಂಚನಹಳ್ಳಿ ಕುಮಾರ್ ಅವರಿಗೆ ಮೊಬೈಲ್ ಕರೆ ಮಾಡಿ ನಿಮ್ಮದು ನಾಲ್ಕು ಮನೆ ಇದೆ ಅಲ್ವಾ, ನೀನು ಯಾವ ಮನೆಯಲ್ಲಿದ್ದೀಯಾ ಎಂದು ಅಪಾರ್ಥದಲ್ಲಿ ಲೇವಡಿ ಮಾಡಿದ್ದನು. ನಿನಗೆ ಧಮ್ ಇದ್ರೆ ನನ್ನ ಬಳಿ ಬಾರೋ, ನಾನು ಭದ್ರಾವತಿಯ ಕಾಂಚನ ಹೋಟೆಲ್ ಬಳಿ ಇದ್ದೇನೆ ಅಲ್ಲಿಗೆ ಬಾ ಎಂದು ಕೆಂಚೇನಹಳ್ಳಿ ಕುಮಾರನಿಗೆ, ಬಿಜೆಪಿ ಕಾರ್ಯಕರ್ತ ಗೋಕುಲಕೃಷ್ಣ ಧಮಕಿ ಹಾಕಿದ್ದನು. ಇಷ್ಟಕ್ಕೂ ಅವರಿಬ್ಬರ ಮೊಬೈಲ್ ಸಂಭಾಷಣೆ ಮೂಲಕ ಇದೊಂದು ವೈಯಕ್ತಿಕ ದ್ವೇಷ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸೆಪ್ಟೆಂಬರ್ 2024ರೊಳಗೆ ಜಮ್ಮು ಕಾಶ್ಮೀರದಲ್ಲಿ ಎಲೆಕ್ಷನ್ ನಡೆಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಡೆಡ್‌ಲೈನ್
ಕೆಂಚೇನಹಳ್ಳಿ ಕುಮಾರ್ ಹಾಗೂ ಗೋಕುಲ ಕೃಷ್ಣ ನಡುವಿನ ಮೊಬೈಲ್ ಸಂಭಾಷಣೆ ವಿವರ ಹೀಗಿದೆ.
ಗೋಕುಲ್ ಕೃಷ್ಣ:
ಎಲ್ಲಣ್ಣ ಬಂದಿಲ್ಲ .
ಕೆಂಚೇನಹಳ್ಳಿ ಕುಮಾರ:
ಬರ್ತೀನಿ ... ಬರ್ತೀನಿ... ಒಂದರ್ಧ ಗಂಟೆ ಎಲ್ಲಿಗೆ ಬರಬೇಕು ಹೇಳು.
ಗೋಕುಲ್ ಕೃಷ್ಣ:
ನಾಲ್ಕು ಮನೆಯಲ್ಲಿ ಯಾವ ಮನೆ ಹತ್ತಿರ ಇದ್ದೀರಾ ?
ಕೆಂಚೇನಹಳ್ಳಿ ಕುಮಾರ :
ಯಾವ ಮನೆ ಬೇಕು ನಿನಗೆ?
ಗೋಕುಲ್ ಕೃಷ್ಣ:
ಕೆಂಚೇನಹಳ್ಳಿ ಮನೆನಾ? ಸಿದ್ದಾರೂಡ ಹತ್ತಿರ ಇರೋ ಮನೆನಾ? ಪುಟ್ಟ ಕಾಲೋನಿ ಮನೆನಾ? ಅಥವಾ ಬಾರಂದೂರ್ ಹತ್ತಿರ ಇರೋ ಮನೆನಾ?
ಕೆಂಚೇನಹಳ್ಳಿ ಕುಮಾರ :
ಯಾವ ಬಾರಂದೂರು ಮನೆ?
ಗೋಕುಲ್ ಕೃಷ್ಣ:
ಗೊತ್ತಿಲ್ಲ ಅಣ್ಣ, ಅದಕ್ಕೆ ಕೇಳಿದೆ ಯಾವ ಬಾರಂದೂರು ಮನೆ ಅಂತ..
ಕೆಂಚೇನಹಳ್ಳಿ ಕುಮಾರ :
ಯಾವ ಮನೆ ಬೇಕು ನಿನಗೆ ?
ಗೋಕುಲ್ ಕೃಷ್ಣ:
ಎಷ್ಟೊತ್ತಿಗೆ ಬರ್ತೀರಾ ಅಂತ ಕೇಳೋಕೆ ಫೋನ್ ಮಾಡಿದೆ.
ಕೆಂಚೇನಹಳ್ಳಿ ಕುಮಾರ :
ಎಲ್ಲಿಗೆ ಬರಬೇಕೋ.?
ಗೋಕುಲ್ ಕೃಷ್ಣ:
ನಾನು ಕಾಂಚನ ಹತ್ತಿರ ಇದ್ದೀನಿ..
ಕೆಂಚೇನಹಳ್ಳಿ ಕುಮಾರ :
ಅಲ್ಲೇ ಇರು ಕಾಯಿ.. ಕಾಯಿ... ಬರ್ತೀನಿ..
ಗೋಕುಲ್ ಕೃಷ್ಣ:
ಇಲ್ಲೇ ಕಾಯ್ತೀನಿ..
ಬೆಳಗಾವಿ ಶಾಕ್: ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ತಾಯಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಬೆತ್ತಲೆಗೊಳಿಸಿ ಹಲ್ಲೆ!
ಮಾಜಿ ಪುರಸಭಾ ಸದಸ್ಯ ಕೆಂಚೇನಹಳ್ಳಿ ಕುಮಾರ್ ಅವರನ್ನು ರೊಚ್ಚಿಗೆಬ್ಬಿಸಿದ್ದ ಗೋಕುಲ್ ಕೃಷ್ಣ ತಾನೇ ಇದ್ದ ಜಾಗಕ್ಕೆ ಕರೆಸಿಕೊಂಡು ಹೊಡೆದಾಟ ಮಾಡಿದ್ದನು. ಇವರಿಬ್ಬರ ನಡುವೆ ವೈಯಕ್ತಿಕ ಜಗಳ ನಡೆದಿದ್ದು, ಈ ವೇಳೆ ಗೋಕುಲ್ ಕೃಷ್ಣ ಚೆನ್ನಾಗಿ ಪೆಟ್ಟು ತಿಂದಿದ್ದು, ತಮ್ಮ ವೈಯಕ್ತಿಕ ದ್ವೇಷಕ್ಕೆ ರಾಜಕೀಯವನ್ನು ಮುನ್ನೆಲೆಗೆ ತಂದಿದ್ದಾನೆ. ಬಿಜೆಪಿ ಪಕ್ಷದ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾನೆ. ಈ ಹಿಂದೆ ಜೆಡಿಎಸ್ ಮುಖಂಡರಾಗಿದ್ದ ಕೆಂಚೇನಹಳ್ಳಿ ಕುಮಾರ್ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಟಿಕೆಟ್ ವಂಚಿತರಾದ ಹಿನ್ನೆಲೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಶಾಸಕ ಬಿ.ಕೆ. ಸಂಗಮೇಶ್ವರ ರನ್ನು ಬೆಂಬಲಿಸಿದ್ದರು. ಇದೀಗ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರರ ವಿರುದ್ಧ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.