ಶಿವಮೊಗ್ಗ-ಚೆನ್ನೈ ರೈಲು ವಾರಕ್ಕೆರಡು ಬಾರಿ ಸಂಚಾರ
ವಾರಕ್ಕೆ ಒಂದೇ ಬಾರಿ ಸಂಚರಿಸುತ್ತಿದ್ದ ಶಿವಮೊಗ್ಗ ಹಾಗೂ ಚೆನ್ನೈ ಎಕ್ಸ್ಪ್ರೆಸ್ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಇನ್ಮುಂದೆ ವಾರಕ್ಕೆ ಎರಡು ಬಾರಿ ಸಂಚಾರ ಮಾಡಲಿದೆ.
ಬೆಂಗಳೂರು [ಫೆ.28]: ಈವರೆಗೆ ವಾರಕ್ಕೆ ಒಂದು ದಿನ ಲಭ್ಯವಿದ್ದ ‘ಶಿವಮೊಗ್ಗ ಟೌನ್-ಚೆನ್ನೈ ತತ್ಕಾಲ್ ಎಕ್ಸ್ಪ್ರೆಸ್’ ರೈಲು ಸೇವೆ ಇನ್ನುಮುಂದೆ ವಾರಕ್ಕೆ ಎರಡು ದಿನ ಸಿಗಲಿದೆ.
ಬೆಂಗಳೂರಿನ ರೈಲ್ವೆ ಇಲಾಖೆ ವಿಭಾಗೀಯ ಕಚೇರಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್.ಸಿ. ಅಂಗಡಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಶಿವಮೊಗ್ಗ-ಚೆನ್ನೈ ರೈಲು ಸೇವೆ ವಾರದಲ್ಲಿ ಒಂದು ದಿನ ಮಾತ್ರ ಇತ್ತು. ಶಿವಮೊಗ್ಗ, ಭದ್ರಾವತಿ ಮತ್ತು ಬೀರೂರು ಪ್ರದೇಶದ ಜನರು ಹಾಗೂ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಬೇಡಿಕೆ ಮೇರೆಗೆ ಇದೀಗ ಎರಡು ದಿನಕ್ಕೆ ವಿಸ್ತರಿಸಲಾಗಿದೆ ಎಂದು ಹೇಳಿದರು.
ಹುಬ್ಬಳ್ಳಿ - ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸಪ್ರೆಸ್ LHB ಮೇಲ್ದರ್ಜೆಗೆ ಯಾವಾಗ?...
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಸಿ ಅಂಗಡಿ ಮಾತನಾಡಿ, ರಾಜಧಾನಿ ಸಂಚಾರ ಸಮಸ್ಯೆಗೆ ಕೇಂದ್ರ ಸರ್ಕಾರ ಸಬ್ ಅರ್ಬನ್ ರೈಲು ಯೋಜನೆ ಘೋಷಿಸಿದೆ. ಇದರ ಜಾರಿಗೆ ಕೇಂದ್ರ ಆರ್ಥಿಕ ವ್ಯವಹಾರ ಸಂಪುಟ ಸಮಿತಿಯಿಂದ ಶೀಘ್ರವೇ ಒಪ್ಪಿಗೆ ದೊರೆಯಲಿದೆ. ರಾಜ್ಯ ಸರ್ಕಾರವೂ ತನ್ನ ಪಾಲಿನ ಅನುದಾನ ನೀಡಿದರೆ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನವಾಗಲಿದೆ ಎಂದರು.
ಇದೇ ವೇಳೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅಳವಡಿಸಲಾದ ರೈಲು ಪ್ರದರ್ಶನಾ ಜಾಲ, ನಿರೀಕ್ಷಣಾ ಆವರಣ, ಪಲ್ಸ್ ಆ್ಯಕ್ಟಿವ್ ಸ್ಟೇಷನ್ ಕಿಯೋಸ್ಕ್, ಸ್ನಾ್ಯಕ್ ಫೀಸ್ಟ್ ಕಿಯೋಸ್ಕ್‌ಗಳನ್ನು ಉದ್ಘಾಟಿಸಲಾಯಿತು. ಸಂಸದ ಬಿ.ವೈ. ರಾಘವೇಂದ್ರ ಇದ್ದರು.
ಹೊಸ ವೇಳಾಪಟ್ಟಿ
ಶಿವಮೊಗ್ಗ ಟೌನ್-ಚೆನ್ನೈ ತತ್ಕಾಲ್ ದ್ವೈ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಶಿವಮೊಗ್ಗದಿಂದ ಪ್ರತಿ ಸೋಮವಾರ ಮತ್ತು ಶುಕ್ರವಾರ ರಾತ್ರಿ 11.55ಕ್ಕೆ ಹೊರಟು ಮಂಗಳವಾರ ಮತ್ತು ಶನಿವಾರ ಬೆಳಗ್ಗೆ 11.45ಕ್ಕೆ ಚೆನ್ನೈ ತಲುಪಲಿದೆ. ಇನ್ನು ಚೆನ್ನೈನಿಂದ ಪ್ರತಿ ಮಂಗಳವಾರ ಹಾಗೂ ಶನಿವಾರ ಹೊರಟು ಕ್ರಮವಾಗಿ ಮರುದಿನ ಶಿವಮೊಗ್ಗ ತಲುಪಲಿದೆ.