ಶಿವಮೊಗ್ಗ ಜಿಲ್ಲೆಯ ಮಹತ್ವಾಕಾಂಕ್ಷೆಯ ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿಯು ಶೇ.77ಕ್ಕೂ ಹೆಚ್ಚು ಆರ್ಥಿಕ ಪ್ರಗತಿ ಸಾಧಿಸಿ ವೇಗವಾಗಿ ಪೂರ್ಣಗೊಳ್ಳುವತ್ತ ಸಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಅವರು ಬಾಕಿ ಯೋಜನೆಗಳ ತ್ವರಿತ ಜಾರಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಶಿವಮೊಗ್ಗ: ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಮಲೆನಾಡಿನ ರೈಲು ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವಕಾಂಕ್ಷೆಯ ಯೋಜನೆಯಾದ ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿಯು ವೇಗವಾಗಿ ಪೂರ್ಣಗೊಳ್ಳುವತ್ತ ಸಾಗುತ್ತಿದೆ. ಪ್ರಸಕ್ತ ಅಧಿವೇಶನದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಯೋಜನೆಯ ಪ್ರಸ್ತುತ ಪ್ರಗತಿಯ ವಿವರಗಳನ್ನು ಒದಗಿಸಿದ್ದಾರೆ.

ಕೇಂದ್ರ ಸರ್ಕಾರ ಒಟ್ಟು 76.01 ಕೋಟಿ ಅಂದಾಜು ವೆಚ್ಚದಲ್ಲಿ ಮಂಜೂರು ಮಾಡಿರುವ ಈ ಯೋಜನೆಗೆ, ಸಂಸದ ರಾಘವೇಂದ್ರ ಅವರ ನಿರಂತರ ಪರಿಶ್ರಮದ ಫಲವಾಗಿ ಮಾರ್ಚ್ 31, 2026ರವರೆಗೆ 58.82 ಕೋಟಿರು.ಗಳಷ್ಟು ಕಾಮಗಾರಿಗಳನ್ನು ಮುಗಿಸಿ, ಶೇ.77 ಕ್ಕಿಂತ ಹೆಚ್ಚು ಹಣಕಾಸು ಪ್ರಗತಿ ಸಾಧಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೇಂದ್ರ ರೈಲ್ವೆ ಸಚಿವಾಲಯ, ಪ್ರಸಕ್ತ ಸಾಲಿನಲ್ಲಿ 9.5 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.

ಕೋಟೆಗಂಗೂರಿನ ರೈಲ್ವೆ ನಿಲ್ದಾಣದ ಕಟ್ಟಡ

ಕೋಟೆಗಂಗೂರಿನ ರೈಲ್ವೆ ನಿಲ್ದಾಣದ ಕಟ್ಟಡ ಹಾಗೂ ಸೇವಾ ಕಟ್ಟಡ ನಿರ್ಮಾಣ ಕಾರ್ಯ, ರೈಲು ಬೋಗಿಗಳ ದುರಸ್ತಿ ಮತ್ತು ನಿರ್ವಹಣೆಗೆ ಅಗತ್ಯವಿರುವ ಸಿಕ್ ಲೈನ್ ಕವರ್ಡ್ ಶೆಡ್‌ನ ಪಾಯದ ಕಾಮಗಾರಿ ಪೂರ್ಣಗೊಂಡಿದೆ. 24 ಬೋಗಿಗಳ ಸುಸಜ್ಜಿತ ರೈಲುಗಳನ್ನು ತಪಾಸಣೆ ಮಾಡುವ 2 ಫಿಟ್ ಲೈನ್‌ಗಳು , 2 ಸ್ಟೇಬ್ಲಿಂಗ್ ಲೈನ್‌ಗಳು , 1 ಲೂಪ್ ಲೈನ್ ಹಾಗೂ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಭೂಸ್ವಾಧೀನ ಪ್ರಕ್ರಿಯೆ: ಯೋಜನೆಗೆ ಅಗತ್ಯವಿರುವ ಒಟ್ಟು 38 ಎಕರೆ ಭೂಮಿಯಲ್ಲಿ ಈಗಾಗಲೇ 31.3 ಎಕರೆ ಭೂಸ್ವಾಧೀನ ಪೂರ್ಣಗೊಂಡಿದೆ. ಶಂಟಿಂಗ್ ನೆಕ್‌ಗೆ ಅಗತ್ಯವಿರುವ ಬಾಕಿ 6.7 ಎಕರೆ ಭೂಮಿಯನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಶೀಘ್ರವೇ ಪಡೆದುಕೊಳ್ಳಲು ಕ್ರಮ ವಹಿಸಲಾಗಿದೆ.

ಸಚಿವ ಸೋಮಣ್ಣ ಭೇಟಿ ಮಾಡಿದ ರಾಘವೇಂದ್ರ

ಶಿವಮೊಗ್ಗ ಜಿಲ್ಲೆ ಹಾಗೂ ಬೈಂದೂರಿನ ಬಾಕಿ ರೈಲ್ವೇ ಯೋಜನೆಗಳ ತ್ವರಿತ ಜಾರಿ ಹಾಗೂ ಕ್ಷೇತ್ರದ ಅಭಿವೃದ್ಧಿ, ವ್ಯಾಪಾರ ವಹಿವಾಟಿಗೆ ವೇಗ ನೀಡುವ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ಬುಧವಾರ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಮುಖ ಪ್ರತಿನಿಧಿಗಳ ನಿಯೋಗ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿದರು.

ಈ ವೇಳೆ, ಬೈಂದೂರು ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ಬಾಕಿಯಿರುವ ಎಲ್ಲಾ ಪ್ರಮುಖ ರೈಲ್ವೇ ಯೋಜನೆಗಳು ಮತ್ತು ಮೂಲಸೌಕರ್ಯ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಸಂಸದರು ಸಚಿವರಿಗೆ ಮನವಿ ಮಾಡಿದರು. ಪ್ರದೇಶದ ಕೈಗಾರಿಕಾ ಹಾಗೂ ಸಾರಿಗೆ ಪ್ರಗತಿಗೆ ಈ ಯೋಜನೆಗಳು ಅತ್ಯಗತ್ಯವಾಗಿದ್ದು, ತ್ವರಿತವಾಗಿ ಎಲ್ಲ ಅನುಮೋದಿತ ಯೋಜನೆಗಳನ್ನು ಪೂರೈಸುವಂತೆ ನಿಯೋಗದ ಪರವಾಗಿ ಸಂಸದ ರಾಘವೇಂದ್ರ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು.

ಯೋಜನೆ ಕುರಿತಂತೆ ಪ್ರತಿಕ್ರಿಯಿಸಿರುವ ಸಂಸದ ಬಿ.ವೈ.ರಾಘವೇಂದ್ರ, ಕೋಟೆಗಂಗೂರು ಕೋಚಿಂಗ್ ಡಿಪೋ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರ ದಶಕಗಳ ಕನಸಾಗಿದೆ. ಈ ಡಿಪೋ ನಿರ್ಮಾಣಗೊಂಡ ನಂತರ ಶಿವಮೊಗ್ಗ ಸ್ವತಂತ್ರ ರೈಲ್ವೆ ಹಬ್ ಆಗಿ ಹೊರಹೊಮ್ಮಲಿದೆ. 24 ಬೋಗಿಗಳ ರೈಲುಗಳ ನಿರ್ವಹಣೆ ಇಲ್ಲೇ ಸಾಧ್ಯವಾಗುವುದರಿಂದ, ಬೆಂಗಳೂರು ಅಥವಾ ಮೈಸೂರು ನಗರಗಳನ್ನು ನೆಚ್ಚಿಕೊಳ್ಳದೇ ಶಿವಮೊಗ್ಗದಿಂದಲೇ ದೇಶದ ವಿವಿಧ ಪ್ರಮುಖ ನಗರಗಳಿಗೆ ಹೊಸ ಎಕ್ಸ್‌ಪ್ರೆಸ್ ಹಾಗೂ ವಂದೇ ಭಾರತ್ ರೈಲುಗಳನ್ನು ಆರಂಭಿಸಲು ಹಾದಿ ಸುಗಮವಾಗಲಿದೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗ ಕ್ಷೇತ್ರದ ಜನತೆಗೆ ನೀಡಿರುವ ಭರವಸೆಯಂತೆ, ಕೋಟೆಗಂಗೂರು ರೈಲ್ವೆ ಡಿಪೋವನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಿ ಮಲೆನಾಡಿನ ಸಾರಿಗೆ ಕ್ಷೇತ್ರದ ಅಭಿವೃದ್ಧಿಯ ಮತ್ತೊಂದು ಪರ್ವವನ್ನು ಆರಂಭಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದಾಗಿ ಸಂಸದ ರಾಘವೇಂದ್ರ ತಿಳಿಸಿದ್ದಾರೆ.