ಚಿತ್ರದುರ್ಗ (ಅ.21):  ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಹಣ ಮಂಜೂರು ಮಾಡದಿದ್ದರೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಪ್ರತಿಕೃತಿ ದಹನ, ಚುನಾಯಿತ ಪ್ರತಿನಿಧಿಗಳಿಗೆ ಸೀರೆ, ಬಳೆ, ಎಲೆ, ಅಡಕೆ ನೀಡುವುದು, ಚಟ್ಟಕಟ್ಟುವುದು ಸೇರಿ ಹೀಗೆ ವಿನೂತನ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್‌ ಎಚ್ಚರಿಸಿದರು.

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಏಳು ವರ್ಷಗಳ ಹಿಂದೆಯೇ ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ಮೆಡಿಕಲ್‌ ಕಾಲೇಜು ಮಂಜೂರಾಗಿದೆ. ಆದರೆ, ಇಲ್ಲಿಯವರೆಗೂ ಹಣ ಮಂಜೂರು ಮಾಡದೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇದಕ್ಕೆ ಪೂರಕವಾಗಿ ಜನಪ್ರತಿನಿಧಿಗಳು ಸಹ ಧ್ವನಿ ಎತ್ತದಿರುವುದು ಬಡವರ ಬಗೆಗಿನ ಕಾಳಜಿ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪಚುನಾವಣೆ ಮೂಲಕ ಕಾಂಗ್ರೆಸ್‌ ಗೂಂಡಾಗಿರಿಗೆ ಅಂತ್ಯವಾಡಬೇಕಿದೆ: ಸಚಿವ ಅಶೋಕ ...

ಚಿತ್ರದುರ್ಗದಲ್ಲಿ ಮೂರು ಹೆದ್ದಾರಿಗಳು ಹಾದು ಹೋಗಿರುವುದರಿಂದ ಸಾಕಷ್ಟುಅಪಘಾತಗಳು ಸಂಭವಿಸಿ ಸಾವು-ನೋವುಗಳುಂಟಾಗುತ್ತಿವೆ. ಹೃದಯಾಘಾತ ಸೇರಿ ತುರ್ತು ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಾವಣಗೆರೆ, ಮಣಿಪಾಲ್‌ ಇಲ್ಲವೇ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಇದರಿಂದ ಬಡ ರೋಗಿಗಳು ಪ್ರಾಣ ಕಳೆದುಕೊಳ್ಳುವುದು ಸರ್ವೆ ಸಾಮಾನ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ಮೆಡಿಕಲ್‌ ಕಾಲೇಜಿಗೆ ಹಣ ಮಂಜೂರು ಮಾಡುವಂತೆ ಅನೇಕ ಬಾರಿ ಹೋರಾಟಗಳನ್ನು ನಡೆಸಿದ್ದರೂ, ಸರ್ಕಾರ ಹಣ ಬಿಡುಗಡೆಗೊಳಿಸುವಲ್ಲಿ ಮೀನಮೇಷ ಎಣಿಸುತ್ತಿದೆ. ಜಿಲ್ಲೆಯ ಎಲ್ಲ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರಿಗೆ ನೇರವಾಗಿ ಫೋನ್‌ ಮೂಲಕ ಸಂಪರ್ಕಿಸಿ ಮೆಡಿಕಲ್‌ ಕಾಲೇಜಿಗೆ ಹಣ ಬಿಡುಗಡೆಗೊಳಿಸುವಂತೆ ಒತ್ತಾಯಿಸಲಾಗಿದೆ. ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳು ಪಕ್ಷಭೇದ ಮರೆತು ಸಿಎಂ ಬಳಿಗೆ ನಿಯೋಗ ತೆರಳಿ ಮೆಡಿಕಲ್‌ ಕಾಲೇಜಿಗೆ ಹಣ ಮಂಜೂರು ಮಾಡಿಸಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ ಗೌರಣ್ಣ, ನಗರಾಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಓಬಳೇಶ್‌, ಯುವ ಘಟಕದ ಅಧ್ಯಕ್ಷ ಬಿ.ಅನಿಲ್‌, ಉಪಾಧ್ಯಕ್ಷ ಹರೀಶ್‌, ಗ್ರಾಮಾಂತರ ಘಟಕದ ತಾಲೂಕು ಅಧ್ಯಕ್ಷ ಶಿವರಾಜ್‌ ಉಪಸ್ಥಿತರಿದ್ದರು.