ಬೆಳಗಾವಿಯಲ್ಲಿ ಎಂಇಎಸ್‌ಗೆ ಹೀನಾಯ ಸೋಲು: ಮತ್ತೆ ಉದ್ಧಟತನ ಮೆರೆದ ಶಿವಸೇನೆ
* ಎಂಇಎಸ್ ಸೋಲನ್ನು ಮರಾಠಿ ಭಾಷಿಕರ ಸೋಲು ಎಂದು ಬಿಂಬಿಸಲು ಶಿವಸೇನೆ ಯತ್ನ
* ಎಂಇಎಸ್ ಸೋಲು ಅರಗಿಸಿಕೊಳ್ಳಲಾಗದೇ ನರಿಬುದ್ದಿ ಪ್ರದರ್ಶಿಸುತ್ತಿರುವ ಶಿವಸೇನೆ
* ಮಹಾರಾಷ್ಟ್ರ ಬಿಜೆಪಿ ಘಟಕ ಉದ್ದೇಶಿಸಿ ಸಂಜಯ್ ರಾವುತ್ ಫೇಸ್‌ಬುಕ್ ಪೋಸ್ಟ್
ಬೆಳಗಾವಿ(ಸೆ.09): ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಸೋಲಿನಿಂದ ಕಂಗೆಟ್ಟ ಶಿವಸೇನೆ ತನ್ನ ಸೋಲನ್ನ ಮರಾಠಿ ಭಾಷಿಕರ ಸೋಲೆಂದು ಬಿಂಬಿಸಲು ಯತ್ನ ನಡೆಸಿದೆ. ಈ ಮೂಲಕ ಮತ್ತೆ ಭಾಷಾ ವಿವಾದದ ಕಿಡಿ ಹೊತ್ತಿಸಲು ಶಿವಸೇನೆ ಕುತಂತ್ರ ನಡೆಸುತ್ತಿದೆ. ಬೆಳಗಾವಿಯ ಮುಗ್ಧ ಮರಾಠಿಗರ ದಾರಿ ತಪ್ಪಿಸಲು, ಪ್ರಚೋದಿಸಲು ಶಿವಸೇನೆ ಯತ್ನ ನಡೆಸುತ್ತಿದೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಕುರಿತು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಪ್ರಕಟವಾಗಿದೆ. ಇದರಲ್ಲಿ 'ಬೆಳಗಾವಿ ಕದನ, ಮರಾಠಿ ಜನರಿಗೆ ಪಾಠ!' ಎಂಬ ಅಡಿ ಬರಹದಲ್ಲಿ ಬರೆಯಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಬಳಸಿ ಬೆಳಗಾವಿಯ ಮರಾಠಿಗರ ಹಾದಿ ತಪ್ಪಿಸಲು ಶಿವಸೇನೆ ಕುತಂತ್ರ ನಡೆಸುತ್ತಿದೆ.
'ಮಧ್ಯ ಪ್ರದೇಶ ವೈರಸ್ ಮಹಾರಾಷ್ಟ್ರ ಪ್ರವೇಶಿಸಲ್ಲ'
ಆಗ್ರಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ಔರಂಗಜೇಬ್ ಬಂಧಿಸಿದ ಸುದ್ದಿ ಕೇಳಿ ಇಡೀ ಮಹಾರಾಷ್ಟ್ರ ಆತಂಕಕ್ಕೀಡಾಗಿತ್ತು. ಆದ್ರೆ ಆ ವೇಳೆ ಛತ್ರಪತಿ ಶಿವಾಜಿ ಬಂಧನ ಸಂಭ್ರಮಿಸಿದ ಕೆಲ ಜನ ಮಹಾರಾಷ್ಟ್ರದಲ್ಲೂ ಇದ್ರು. ಅದೇ ಪ್ರವೃತ್ತಿ ಜನ ಬೆಳಗಾವಿಯಲ್ಲಿ ಮರಾಠಿ ಸೋಲನ್ನ ಸಂಭ್ರಮಿಸುತ್ತಿದ್ದಾರೆ. ಮರಾಠಿಗರು ಹಾಗೂ ಹುತಾತ್ಮರ ಶಾಪ ಅವರಿಗೆ ತಟ್ಟುತ್ತೆ. ಗಡಿ ಹೋರಾಟ ಮುಂದುವರಿಯುತ್ತೆ, ಮರಾಠಿಗರು ಒಗ್ಗೂಡಿ ಮತ್ತೆ ಮುಂದೇ ಬರ್ತಾರೆ. ಬೆಳಗಾವಿಯಲ್ಲಿ ಸೋಲಿನಿಂದ ನಾವು ಪಾಠ ಕಲಿಯಬೇಕು. ಶತ್ರುಗಳು ಹಾಗೂ ಮಿತ್ರರು ನಮ್ಮ ಮನೆಯಲ್ಲೇ ಇದ್ದಾರೆ ಅಂತ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯದಲ್ಲಿ ಬರೆಯಲಾಗಿದೆ.
ಬೆಳಗಾವಿಯಲ್ಲಿ ಎಂಇಎಸ್ ಸೋಲಿನಿಂದ ಕಂಗೆಟ್ಟ ಶಿವಸೇನೆ
ಬೆಳಗಾವಿಯಲ್ಲಿ ಪಾಲಿಕೆಯಲ್ಲಿ ಹೀನಾಯ ಸೋಲಿನ ಬಳಿಕ ಶಿವಸೇನೆ ಮುಖಂಡ ಸಂಜಯ್ ರಾವುತ್ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸರಣಿ ಪೋಸ್ಟ್‌ಗಳನ್ನ ಮಾಡಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಗೆಲುವು ಸ್ವಾಗತಿಸಿದ ಮಹಾರಾಷ್ಟ್ರ ಬಿಜೆಪಿ ವಿರುದ್ಧ ಗರಂ ಆದ ಸಂಜಯ್ ರಾವುತ್, ಬೆಳಗಾವಿಯಲ್ಲಿ ಗೆದ್ದ ಬಿಜೆಪಿ ಮರಾಠಿ ಭಾಷಿಕ ಸದಸ್ಯರ ಮುಂಬೈಗೆ ಕರೆತನ್ನಿ. ಹುತಾತ್ಮ ಸ್ಮಾರಕ ಎದುರು ಶಿರಭಾಗಿ ಮರಾಠಿ ಅಸ್ಮಿತೆಯ ಪ್ರಮಾಣ ವಚನ ಬೋಧಿಸಿ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಅಂತಾ ಎರಡು ಸಾಲಿನ ಠರಾವು ಪಾಸ್ ಮಾಡಿ. ಅಹಂಕಾರ ಬದಿಗೊತ್ತಿ ಇಷ್ಟು ಮಾಡಿ ಅಂತ ಪೋಸ್ಟ್ ಮಾಡಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆ ಎಂಇಎಸ್ ಬೆಂಬಲಿಸಿತ್ತು. ಆದ್ರೆ ಬೆಳಗಾವಿ ಜನ ಎಂಇಎಸ್ ವಿರುದ್ಧ ಮತಹಾಕಿ ಭಾಷಾ ರಾಜಕಾರಣಕ್ಕೆ ಇತಿಶ್ರೀ ಹಾಡಿದ್ದಾರೆ. 58 ವಾರ್ಡ್‌ಗಳ ಪೈಕಿ 35 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. 10 ಕಾಂಗ್ರೆಸ್, 10 ಪಕ್ಷೇತರ, ಓರ್ವ ಎಐಎಂಐಎಂ ಅಭ್ಯರ್ಥಿ ಗೆದ್ದಿದ್ದಾರೆ. ಕೇವಲ ಎರಡು ವಾರ್ಡ್‌ಗಳಲ್ಲಿ ಗೆದ್ದು ಎಂಇಎಸ್ ಹೀನಾಯವಾಗಿ ಸೋಲನುಭವಿಸಿತ್ತು. ಎಂಇಎಸ್ ವಿರುದ್ಧ ಮತಹಾಕಿ ಪ್ರಜ್ಞಾವಂತ ಮರಾಠಿಗರು ಭಾಷಾ ರಾಜಕಾರಣಕ್ಕೆ ಅಂತ್ಯ ಹಾಡಿದ್ದಾರೆ.