ಶಿರಾ ತಾ. ಜಿಲ್ಲೆಯಾಗುವ ಎಲ್ಲಾ ಸೌಲಭ್ಯ ಹೊಂದಿದೆ: ಡಾ. ರಾಜೇಶಗೌಡ
ಜಿಲ್ಲೆಯಾಗುವಷ್ಟು ಎಲ್ಲಾ ಸೌಲಭ್ಯ ಹೊಂದಿರುವ ಶಿರಾ ತಾಲೂಕಿಗೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆಯಂತಹ ಸಮಗ್ರ ನೀರಾವರಿ ಯೋಜನೆ ಅವಶ್ಯಕ. ಶಿರಾ ತಾಲೂಕು ಮುಂದಿನ ದಶಕದಲ್ಲಿ ಮತ್ತೊಂದು ಉಜ್ವಲ ಹಂತಕ್ಕೆ ತಲುಪಲಿದೆ. ಇದಕ್ಕೆ ಪೂರಕವಾಗಿ ನೀರಾವರಿ ಯೋಜನೆ ನಮಗೆ ಬುನಾದಿಯಾಗಲಿವೆ ಎಂದು ಮಾಜಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಹೇಳಿದರು.
ಶಿರಾ : ಜಿಲ್ಲೆಯಾಗುವಷ್ಟು ಎಲ್ಲಾ ಸೌಲಭ್ಯ ಹೊಂದಿರುವ ಶಿರಾ ತಾಲೂಕಿಗೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆಯಂತಹ ಸಮಗ್ರ ನೀರಾವರಿ ಯೋಜನೆ ಅವಶ್ಯಕ. ಶಿರಾ ತಾಲೂಕು ಮುಂದಿನ ದಶಕದಲ್ಲಿ ಮತ್ತೊಂದು ಉಜ್ವಲ ಹಂತಕ್ಕೆ ತಲುಪಲಿದೆ. ಇದಕ್ಕೆ ಪೂರಕವಾಗಿ ನೀರಾವರಿ ಯೋಜನೆ ನಮಗೆ ಬುನಾದಿಯಾಗಲಿವೆ ಎಂದು ಮಾಜಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಹೇಳಿದರು.
ಅವರು ತಾಲೂಕಿನ ಚಿಕ್ಕದಾಸರಹಳ್ಳಿ ಬಳಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಕಾಮಗಾರಿಯನ್ನು ವೀಕ್ಷಣೆ ಮಾಡಿ ಮಾತನಾಡಿದರು. ತುಮಕೂರು-ದಾವಣಗೆರೆ ರೈಲ್ವೆ ಮಾರ್ಗ, ನೂತನ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ, ಉದ್ದೇಶಿತ ನೂತನ ವಿಮಾನ ನಿಲ್ದಾಣ ಹಾಗೂ ಸುಸಜ್ಜಿತ ಕೈಗಾರಿಕಾ ವಲಯ ಜೊತೆಗೆ ತುಮಕೂರು ಜಿಲ್ಲೆಯಲ್ಲಿ 2ನೇ ದೊಡ್ಡ ತಾಲೂಕು ಶಿರಾ ಹೆಚ್ಚು ಜನಸಂಖ್ಯೆ ಕೂಡ ಹೊಂದಿದೆ. ಇಂತಹ ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿದ್ದು ಶೀಘ್ರವಾಗಿ ನೀರು ಬರಬೇಕಿದೆ. ಭದ್ರಾ ಮೇಲ್ದಂಡೆ, ಹೇಮಾವತಿ ಹಾಗೂ ಗಾಯಿತ್ರಿ ಜಲಾಶಯ ಮುಖೇನ ಶಿರಾ ತಾಲೂಕಿನ ಗೌಡಗೆರೆ ಹೋಬಳಿಗೆ ನೀರು ಹರಿದರೆ, ಮುಂದಿನ ಪೀಳಿಗೆಯ ರೈತಾಪಿ ಕುಟುಂಬಗಳಿಗೆ ಆಸರೆಯಾಗಿ ನೆಮ್ಮದಿಯಿಂದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ, ಅಲ್ಲದೆ ಅಂತರ್ಜಲ ಕೂಡ ವೃದ್ಧಿಯಾಗಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ. ಬಯಲುಸೀಮೆ ಭಾಗವಾಗಿರುವ ಶಿರಾ ತಾಲೂಕಿಗೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಒಂದು ಜೀವನಾಡಿ ಹಾಗೂ ವರದಾನದಂತೆ ಅನುಷ್ಠಾನಕ್ಕೆ ಬಂದಿದೆ. 228 ಕಿ.ಮೀ. ಪೈಪ್ ಲೈನ್ ಅಳವಡಿಕೆಯ ಕಾಮಗಾರಿ 2 ವರ್ಷ ಅವಧಿಯಲ್ಲಿ ಶೇ.90ರಷ್ಟು ಕಾಮಗಾರಿ ಸಂಪೂರ್ಣವಾಗಿದ್ದು, ಇನ್ನು ಉಳಿದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ನೀರು ಹರಿಸುವ ಕಾರ್ಯಕ್ಕೆ ಸರ್ಕಾರಗಳು ಮುಂದಾಗಬೇಕಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಗೌಡಗೆರೆ, ಕಳ್ಳಂಬೆಳ್ಳ, ಹುಲಿಕುಂಟೆ, ಕಸಬಾ ಹೋಬಳಿಗಳ ೬೫ ಕೆರೆಗಳಿಗೆ 1 ನೇ ಹಂತದಲ್ಲಿ ನೀರು ಬರಲಿದ್ದು, 2ನೇ ಹಂತದ ಭದ್ರಾ ಮೇಲ್ದಂಡೆ ಹನಿ ನೀರಾವರಿ ಯೋಜನೆ ಅಡಿಯಲ್ಲಿ ಸಹಸ್ರಾರು ಹೆಕ್ಟೇರ್ ಗಳ ಅಚ್ಚುಕಟ್ಟು ಪ್ರದೇಶಗಳಿಗೆ ಶೇಖರಣೆ ಕೆರೆಗಳ ಮುಖೇನ ನೀರು ಲಭ್ಯವಾಗಲಿದೆ. ಹಿಂದಿನ ಸರ್ಕಾರದ ಉದ್ದೇಶಿತ ಯೋಜನೆಗಳಲ್ಲಿ ಒಂದಾದ ಗಾಯತ್ರಿ ಜಲಾಶಯ ಮೂಲಕ ಹಿರಿಯೂರು ತಾಲೂಕಿನ ಸುಮಾರು ಮೂರೂವರೆ ಸಾವಿರ ಹೆಕ್ಟೇರ್ ಹಾಗೂ ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಸುಮಾರು 4 ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಿದ್ದಲ್ಲಿ, ಈಗಾಗಲೇ ಹರಿಯುವ ಹೇಮಾವತಿ ನೀರಿನ ಜೊತೆಯಲ್ಲಿ ತಾಲೂಕಿನ ನೀರಿನ ಭವಣೆ ಸಂಪೂರ್ಣವಾಗಿ ಬಗೆಹರಿಯಲಿದೆ. ನಮ್ಮ ಪಕ್ಕದ ಹಿರಿಯೂರು ತಾಲೂಕಿನಲ್ಲಿ ಒಂದು ಸಮಗ್ರ ನೀರಾವರಿ ವ್ಯವಸ್ಥೆ ಇರುವ ರೀತಿಯಲ್ಲಿ ನಮ್ಮ ತಾಲೂಕು ಕೂಡ ನೀರಾವರಿ ವ್ಯವಸ್ಥೆ ಶಾಶ್ವತವಾಗಿ ಕಲ್ಪಿಸಬಹುದು. ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ತುರ್ತು ಅನುಷ್ಠಾನಕ್ಕೆ ಸ್ಥಳೀಯ ಆಡಳಿತ, ರೈತರು, ಸಾರ್ವಜನಿಕರು ಎಲ್ಲರೂ ಕೂಡ ಸಹಕರಿಸಬೇಕಾಗಿದೆ ಎಂದರು.
----
14ಶಿರಾ1:
ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಭೇಟಿ ನೀಡಿ ವೀಕ್ಷಣೆ ಮಾಡಿದರು.