Asianet Suvarna News Asianet Suvarna News

ಶಿಡ್ಲಘಟ್ಟಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಗೊಂದಲ

ಶಿಡ್ಲಘಟ್ಟತಾಲೂಕಿನಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ನಾವಿಕನಿಲ್ಲದ ನಾವೆಯಂತಾಗಿದೆ. 2018ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್‌ ಗೊಂದಲಮಯ ನಿರ್ಣಯಗಳಿಂದಾಗಿ ಕೈಗೆ ಬಂದ ತುತ್ತನ್ನು ಹೈಕಮಾಂಡ್‌ ಬೆಳ್ಳಿ ತಟ್ಟೆಯಲ್ಲಿಟ್ಟು ಕಾಂಗ್ರೆಸ್‌ ಪಾಲಾಗುವಂತೆ ಮಾಡಿತ್ತು.

Shidlaghattakshetra Congress candidate selection confusion snr
Author
First Published Apr 9, 2023, 9:13 AM IST

  ಶಿಡ್ಲಘಟ್ಟ :  ಶಿಡ್ಲಘಟ್ಟತಾಲೂಕಿನಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ನಾವಿಕನಿಲ್ಲದ ನಾವೆಯಂತಾಗಿದೆ. 2018ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್‌ ಗೊಂದಲಮಯ ನಿರ್ಣಯಗಳಿಂದಾಗಿ ಕೈಗೆ ಬಂದ ತುತ್ತನ್ನು ಹೈಕಮಾಂಡ್‌ ಬೆಳ್ಳಿ ತಟ್ಟೆಯಲ್ಲಿಟ್ಟು ಕಾಂಗ್ರೆಸ್‌ ಪಾಲಾಗುವಂತೆ ಮಾಡಿತ್ತು.

ಅಂದು ಜೆಡಿಎಸ್‌ಗೆ ಉಂಟಾಗಿದ್ದ ಪರಿಸ್ಥಿತಿ ಈಗ ಕಾಂಗ್ರೆಸ್‌ಗೆ ಬಂದೊದಗಿದೆ. ಹಾಲಿ ಶಾಸಕ ವಿ.ಮುನಿಯಪ್ಪರವರು ಗೊಂದಲಕ್ಕೆ ಸಿಲಿಕಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾದ ಪುಟ್ಟು ಆಂಜಿನಪ್ಪ ರವರನ್ನು ಒಮ್ಮೆ ಒಲೈಕೆ ಮಾಡಿ ಅವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿ ಅವರ ಕಡೆ ಒಲವು ತೋರಿದರೆ, ಕೆಲವೇ ಗಂಟೆಗಳಲ್ಲಿ ತಮ್ಮ ರಾಜಕೀಯ ಬದ್ದ ವೈರಿ ರಾಜೀವ್‌ ಗೌಡ ಅವರೊಂದಿಗೆ ಸಂಧಾನ ಸಭೆ ನಡೆಸುತ್ತಾರೆ. ಕೆಲ ದಿನಗಳ ಹಿಂದಷ್ಟೇ ಬ್ಯಾಲಹಳ್ಳಿ ಗೋವಿಂದ ಗೌಡರಿಗೆ ತಮ್ಮ ಬೆಂಬಲವೆಂದು ಬಹಿರಂಗವಾಗಿ ಘೋಷಣೆ ಮಾಡಿದರು.

ಗೊಂದಲದಲ್ಲಿ ಕೈ ಕಾರ್ಯಕರ್ತರು

ಶಾಸಕ ಮುನಿಯಪ್ಪ ಹೀಗೆ ತಾವೇ ಹೆಣೆದ ಬಲೆಯಲ್ಲಿ ತಾವೇ ಸಿಕ್ಕಿಕೊಂಡಂತಾಗಿದೆ. ಇದರಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಯಾರ ಹಿಂದೆ ಹೋಗಬೇಕು ಎಂಬದರ ಸ್ಪಷ್ಟವಾಗದೆ ಕಾರ್ಯಕರ್ತರಲ್ಲಿ ಕೆಲವರು ಪರೋಕ್ಷವಾಗಿ ಜೆಡಿಎಸ್‌ನ ಮೇಲೂರು ರವಿಕುಮಾರ್‌ರವರನ್ನು ಬೆಂಬಲಿಸಿದರೆ ಮತ್ತೆ ಕೆಲವರು ಇತ್ತೀಚೆಗೆ ತಾನೆ ಕಾಂಗ್ರೆಸ್‌ಗೆ ಬಂದ ರಾಜೀವ್‌ ಗೌಡರ ಪಾಳಯದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.

ಕೆಲವು ಕಾಂಗ್ರೆಸ್‌ ಮುಖಂಡರು ಬ್ಯಾಲಹಳ್ಳಿ ಗೋವಿಂದ ಗೌಡ ರೊಂದಿಗೆ ಅಖಾಡಕ್ಕೆ ಇಳಿದರಾದರು ಗೋವಿಂದ ಗೌಡರ ದ್ವಂದ ನಿಲವು, ಸ್ಪಷ್ಟತೆ ಇಲ್ಲದಿರುವುದನ್ನು ಕಂಡು ತಟಸ್ಥರಾಗಿದ್ದಾರೆ. ಇದರ ಮಧ್ಯೆ ಕೇಸರಿ ಪಡೆ ಸೇರಿದ ಸೀಕಲ್‌ ರಾಮಚಂದ್ರ ಗೌಡರ ಸಂಪರ್ಕದಲ್ಲಿದ್ದ ಕಾಂಗ್ರೆಸ್‌ ನಿಷ್ಠಾವಂತರು ಎತ್ತ ಹೋಗಬೇಕೆಂದು ಅರಿಯದ ಸ್ಥಿತಿಯಲ್ಲಿದ್ದಾರೆ. ಇವರಲ್ಲಿ ಬಹುತೇಕ ಕಾಂಗ್ರೆಸ್‌ ಟಿಕೆಟ್‌ ರಾಜೀವ್‌ ಗೌಡರಿಗೆ ಖಚಿತವೆಂದು ಭಾವಿಸಿದ್ದಾರೆ.

ಬಿಜೆಪಿಯ ರಾಮಚಂದ್ರಗೌಡರ ಗಾಳಿ

ಬಿಜೆಪಿ ಟಿಕೆಟ್‌ ಅಭ್ಯರ್ಥಿಯಾಗಿ ಸೀಕಲ್‌ ರಾಮಚಂದ್ರ ಗೌಡರೆಂದೆ ಖಚಿತವಾದ ನಂತರ ಕಾಂಗ್ರೆಸ್‌ನ ಬಹಳಷ್ಟುಮಂದಿ ಪರೋಕ್ಷವಾಗಿ ಸೀಕಲ್‌ ರಾಮಚಂದ್ರ ಗೌಡರಿಗೆ ಬೆಂಬಲ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ ಹಾಗೂ ಸಾಕಷ್ಟುಒಕ್ಕಲಿಗರು ಈಗಾಗಲೇ ಸೀಕಲ್‌ ರಾಮಚಂದ್ರ ಗೌಡರ ಆಹ್ವಾನವನ್ನು ಸ್ವೀಕರಿಸಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಯಾವುದೇ ನಾಯಕರ ಬೆಂಬಲ ನನಗೆ ಬೇಡ ಸಾಮಾನ್ಯ ಮತದಾರ ಸಾಕು ಎಂದು ಹತ್ತು ವರ್ಷಗಳಿಂದ ಕಾಂಗ್ರೆಸ್‌ ನಾಯಕರ ಮನೆ ಬಾಗಿಲಿಗೆ ಹೋಗದೆ ಇರುವ ಪುಟ್ಟು ಆಂಜಿನಪ್ಪ ನವರನ್ನು ಬೆಂಬಲಿಸುವ ಯಾವುದೇ ಮುಖಂಡರು ಕಾಂಗ್ರೆಸ್‌ನಲ್ಲಿ ಕಾಣಿಸುತ್ತಿಲ್ಲ.

ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಜನ ಸಮೂಹ ಮತಗಳಾಗಿ ಪರಿವರ್ತನೆ ಆದಲ್ಲಿ ಜೆಡಿಎಸ್‌ಗೆ ಬಿಜೆಪಿ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ. ಜಾತಿಯನ್ನು ಬಳಸಿಕೊಂಡು ಚುನಾವಣೆ ಎದುರಿಸುವ ಪ್ರಯತ್ನದಲ್ಲಿ ಸೀಕಲ್‌ ರಾಮಚಂದ್ರ ಗೌಡರು ಯಶಸ್ಸು ಕಂಡರೆ ಗೆಲುವಿಗೆ ಹತ್ತಿರವಾದರು ಆಶ್ಚರ್ಯವಿಲ್ಲ. ಈವರಗೂ ನಡೆದ ಎಲ್ಲಾ ವಿಧಾನ ಸಭಾ ಚುನಾವಣೆಗಳಲ್ಲಿ ಒಕ್ಕಲಿಗರಲ್ಲದೆ ಬೇರೆ ಜನಾಂಗದವರು ಗೆದ್ದ ಉದಾಹರಣೆ ಇಲ್ಲ. ಕಾಂಗ್ರೆಸ್‌ ಅಭ್ಯರ್ಥಿಯ ಹೆಸರು ಪ್ರಕಟವಾದ ಬಳಿಕ ಕ್ಷೇತ್ರದ ರಾಜಕೀಯದಲ್ಲಿ ರಂಗೇರಲಿದೆ.

Follow Us:
Download App:
  • android
  • ios