ರಾಜ್ಯ ಎಸ್‌ಡಿಪಿಐ ಸಂಘಟನಾ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆಯನ್ನು ಹಾಸನದಲ್ಲಿ ಶನಿವಾರಸಂತೆ ಪೊಲೀಸರು ಬಂಧಿಸಿದ್ದಾರೆ. ಹಾಸನ ಪೊಲೀಸರ ಸಹಾಯದಿಂದ ಅಪ್ಸರ್‌‌ನನ್ನು ಬಂಧಿಸಲಾಗಿದೆ.

ಕೊಡಗು (ಸೆ.27): ದೇಶಾದ್ಯಂತ ಪಿಎಫ್‌ಐ ಮುಖಂಡರ ಮೇಲೆ ರಾಷ್ಟ್ರೀಯ ತನಿಖಾ ದಳ ಮತ್ತು ಪೊಲೀಸರು ದಾಳಿ ನಡೆಸಿದ, ಬೆನ್ನಲ್ಲೇ ಕರ್ನಾಟಕದಲ್ಲೂ ಪಿಎಫ್‌ಐ ಹಾಗೂ ಎಸ್‌ಡಿಪಿಐ ಮುಖಂಡರ ವಿರುದ್ಧ ಪೊಲೀಸರ ಶಿಕಾರಿ ಮುಂದುವರೆದಿದೆ. ಇದರ ಭಾಗವಾಗಿ ರಾಜ್ಯ ಎಸ್‌ಡಿಪಿಐ ಸಂಘಟನಾ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆಯನ್ನು ಹಾಸನದಲ್ಲಿ ಶನಿವಾರಸಂತೆ ಪೊಲೀಸರು ಬಂಧಿಸಿದ್ದಾರೆ. ಎನ್‌ಐಎ ದಾಳಿ ಖಂಡಿಸಿ ಪ್ರತಿಭಟನೆ ಹಾಗೂ ಶಾಂತಿ ಕದಡುವ ಸಾಧ್ಯತೆ ಇರುವ ಕಾರಣಕ್ಕೆ ಮುಂಜಾಗೃತಾ ಕ್ರಮವಾಗಿ ಹಾಸನ ಪೊಲೀಸರ ಸಹಾಯದಿಂದ ಅಪ್ಸರ್‌‌ನನ್ನು ಬಂಧಿಸಲಾಗಿದೆ. ಅಪ್ಸರ್ ಮೂಲತಃ ಕೊಡಗು ಜಿಲ್ಲೆ ಕೊಡ್ಲಿಪೇಟೆಯವನು. ಸೋಮವಾರ ಹಾಸನಕ್ಕೆ ಬಂದು ಅಪ್ಸರ್ ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಈ ಬಂಧನವಾಗಿದೆ. ಹಾಸನ ಪೊಲೀಸರ ಸಹಕಾರದೊಂದಿಗೆ ಮಂಗಳವಾರ ಕಾರ್ಯಾಚರಣೆ ನಡೆಸಿದ್ದರು. ಸೋಮವಾರಪೇಟೆ ತಹಶೀಲ್ದಾರ್ ಎದುರು ಪೊಲೀಸರು ಅಪ್ಸರ್ ಅವರನ್ನು ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಎಸ್‌ಡಿಪಿಐ ಹಾಸನ ಜಿಲ್ಲಾಧ್ಯಕ್ಷ ಸಿದ್ದಿಕ್ ಆನೆಮಹಲ್, ಪ್ರಧಾನ ಕಾರ್ಯದರ್ಶಿ ಸಯ್ಯದ್ ಫರೀದ್ ಅವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಮೂವರ ಬಂಧನದ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸ್ಪಷ್ಟಪಡಿಸಿದ್ದು, ಎನ್‌ಐಎ ದಾಳಿ ಬಳಿಕ ದೇಶದ ವಿವಿಧೆಡೆ ಶಾಂತಿ ಕದಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇವರನ್ನು ಬಂಧಿಸಲಾಗಿದೆ. ಜೊತೆಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದಿದ್ದಾರೆ. 

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಹಾಗೂ ಎಸ್‌ಡಿಪಿಐ ಮುಖಂಡರು, ಕಚೇರಿಗಳ ಮೇಲೆ ಎನ್‌ಐಎ ದಾಳಿ ನಡೆಸುತ್ತಿರುವುದನ್ನು ಖಂಡಿಸಿ ದೇಶದಾದ್ಯಂತ ಹಲವೆಡೆ ಪ್ರತಿಭಟನೆಗಳು ಕೂಡ ನಡೆಯುತ್ತಿದೆ. ಇನ್ನು ಹುಬ್ಬಳ್ಳಿಯಲ್ಲಿ ಎನ್‌ಐಎ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಹಾಗೂ ಪಿಎಫ್‌ಐನ 51 ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಕರ್ನಾಟಕ, ಕೇರಳ ಸೇರಿ 10 ರಾಜ್ಯಗಳಲ್ಲಿ NIA, ED Raid: ನೂರಾರು ಪಿಎಫ್ಐ ಕಾರ್ಯಕರ್ತರ ಬಂಧನ

ಪಿಎಫ್‌ಐ ಮುಖಂಡರ ಮನೆಗಳ ಮೇಲೆ ರಾಜ್ಯಾದ್ಯಂತ ದಾಳಿ ನಡೆಸಿ ಕೆಲವರನ್ನು ವಶಪಡಿಸಿಕೊಂಡಿದ್ದನ್ನು ಖಂಡಿಸಿ ನಗರದ ಕೌಲಪೇಟೆಯಲ್ಲಿ ಎರಡು ದಿನಗಳ ಹಿಂದೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ನಿಷೇಧವಾದ್ರೂ ಚಿಂತೆ ಇಲ್ಲ, ಇದೇ ನೋಡಿ ಪಿಎಫ್ಐ ಸಂಸ್ಥೆಯ ಪ್ಲ್ಯಾನ್‌ ಬಿ!

ಪಿಎಫ್‌ಐ ಧ್ವಜ ಹಿಡಿದುಕೊಂಡು ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆ ವೇಳೆ ಪೊಲೀಸರೊಂದಿಗೆ ತಳ್ಳಾಟ ನೂಕಾಟ ನಡೆಸಿದ್ದರು. ಕೆಲಕಾಲ ಬಿಗುವಿನ ವಾತಾವರಣ ಕೂಡ ಸೃಷ್ಟಿಯಾಗಿತ್ತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಜತೆಗೆ 51 ಜನರನ್ನು ಬಂಧಿಸಿದ್ದರು. ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ 51 ಜನರ ವಿರುದ್ಧ ಕಮರಿಪೇಟೆ ಠಾಣೆಯಲ್ಲಿ ಕಲಂ 143,145, 341, 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.