ಡಾ.ಶಾಮನೂರು ಶಿವಶಂಕರಪ್ಪ 90ನೇ ವರ್ಷದ ಜನ್ಮದಿನ ಕೋವಿಡ್‌ ವ್ಯಾಕ್ಸಿನ್‌ ಲಸಿಕಾ ಶಿಬಿರಕ್ಕೆ ಚಾಲನೆ ಆಹಾರ ಕಿಟ್‌ ವಿತರಿಸುವ ಮೂಲಕ ತಮ್ಮ ಅರ್ಥಪೂರ್ಣ ಜನ್ಮದಿನ

ದಾವಣಗೆರೆ (ಜೂ.17): ಕಾಂಗ್ರೆಸ್ಸಿನ ಹಿರಿಯ ನಾಯಕ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಕೈಗಾರಿಕೋದ್ಯಮಿ ಡಾ.ಶಾಮನೂರು ಶಿವಶಂಕರಪ್ಪ ನಗರದ ತಮ್ಮ ನಿವಾಸದಲ್ಲಿ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಕುಟುಂಬ ವರ್ಗದ ಜೊತೆಗೆ, ಕಾಂಗ್ರೆಸ್‌ ಪಕ್ಷ ಹಾಗೂ ಸಂಘ-ಸಂಸ್ಥೆಗಳು ಹಮ್ಮಿಕೊಂಡಿದ್ದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವ ಮೂಲಕ ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ 90ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಪಕ್ಷದಿಂದ, ಬಾಪೂಜಿ ವಿದ್ಯಾಸಂಸ್ಥೆಯಿಂದ, ತಮ್ಮ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ಹಮ್ಮಿಕೊಂಡಿದ್ದ ಸಮಾಜಮುಖಿ ಕಾರ್ಯಗಳಲ್ಲಿ ಹಾಗೂ ತಾವು 6 ಕೋಟಿ ರು. ವೆಚ್ಚದಲ್ಲಿ ಆಯೋಜಿಸಿರುವ ಕೋವಿಡ್‌ ವ್ಯಾಕ್ಸಿನ್‌ ಲಸಿಕಾ ಶಿಬಿರಕ್ಕೆ ಚಾಲನೆ ನೀಡಿ, ಆಹಾರ ಕಿಟ್‌ ವಿತರಿಸುವ ಮೂಲಕ ತಮ್ಮ ಅರ್ಥಪೂರ್ಣ ಜನ್ಮದಿನಕ್ಕೆ ಕಾರಣರಾದರು.

ಸ್ವಂತ ದುಡ್ಡಲ್ಲಿ ದಾವಣಗೆರೆಯಲ್ಲಿ 60000 ಡೋಸ್‌ ಲಸಿಕೆ: ಶಾಮನೂರು

ಇದಕ್ಕೂ ಮುನ್ನ ತಮ್ಮ ಪುತ್ರ, ಮಾಜಿ ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ್‌ ಅವರ ನಿವಾಸ ಶಿವ ಪಾರ್ವತಿಯಲ್ಲಿ ಮಕ್ಕಳು, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳ ಜತೆಯಲ್ಲಿ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಮನೆಯಲ್ಲಿ ಬೆಳಗ್ಗೆಯಿಂದಲೇ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಗಳೂ ನಡೆದವು.