ಐತಿಹಾಸಿಕ ಬೆಳಗಾವಿ ಗಣೇಶೋತ್ಸವದಲ್ಲಿ ಈ ಬಾರಿ ವೀರ್ ಸಾವರ್ಕರ್ ಹವಾ!

ಕಾಂಗ್ರೆಸ್ ಬಿಜೆಪಿ ಮಧ್ಯೆ ಸಾವರ್ಕರ್ ಫೈಟ್ ಇರುವಾಗ ಈ ಬಾರಿ ಗಣೇಶೋತ್ಸವವನ್ನು ಸಾವರ್ಕರ್ ಉತ್ಸವವಾಗಿ ಆಚರಿಸುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನಿನ್ನೆಯಷ್ಟೇ ಹೇಳಿದ್ದರು. 

Shadow of Veer Savarkar looms over Ganesh festival in Belagavi gow

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಆ.21): ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಬಿಜೆಪಿ ಮಧ್ಯೆ ಸಾವರ್ಕರ್ ವಿವಾದ ಜೋರಾಗಿರುವ ನಡುವೆ ಬೆಳಗಾವಿಯ ಐತಿಹಾಸಿಕ ಗಣೇಶೋತ್ಸವದ ಮಂಟಪಗಳಲ್ಲಿ ಈ ಬಾರಿ ಸಾವರ್ಕರ್ ಫೋಟೋ ರಾರಾಜಿಸಲಿದೆ. ಕಾಂಗ್ರೆಸ್ ಬಿಜೆಪಿ ಮಧ್ಯೆ ಸಾವರ್ಕರ್ ಫೈಟ್ ಇರುವಾಗ ಈ ಬಾರಿ ಗಣೇಶೋತ್ಸವವನ್ನು ಸಾವರ್ಕರ್ ಉತ್ಸವವಾಗಿ ಆಚರಿಸುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನಿನ್ನೆಯಷ್ಟೇ ಹೇಳಿದ್ದರು. ಇದರ ಬೆನ್ನಲ್ಲೇ ಈ ಬಾರಿ ಬೆಳಗಾವಿಯ ಐತಿಹಾಸಿಕ ಸಾರ್ವಜನಿಕ ಗಣೇಶೋತ್ಸವ ವೇಳೆ ಬೆಳಗಾವಿ ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಪ್ರತಿಯೊಂದು ಗಣೇಶ ಮಂಟಪಗಳಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಫೋಟೋ ಇರಿಸುತ್ತೇವೆ ಎಂದು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಹೇಳಿದ್ದಾರೆ. ಬೆಳಗಾವಿಯ ಗಣೇಶೋತ್ಸವಕ್ಕೆ ತನ್ನದೇ ಆದ ಶತಮಾನದ ಇತಿಹಾಸವಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕ್ ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದರು. ಅಂದಿನಿಂದಲೂ ಬೆಳಗಾವಿಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ. ಬೆಳಗಾವಿ ನಗರದಾದ್ಯಂತ ಸುಮಾರು 350ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಗಣೇಶಮೂರ್ತಿಯನ್ನು 11 ದಿನಗಳ ಕಾಲ ಪ್ರತಿಷ್ಠಾಪಿಸಿ ಕೊನೆಯ ದಿ‌ನ ಅದ್ದೂರಿಯಾಗಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಾಗುತ್ತೆ. ಈ ವರ್ಷ ಪ್ರತಿ ಗಣೇಶೋತ್ಸವ ಮಂಡಳಿಗಳು ಗಣೇಶನ ಜೊತೆ ಮಂಟಪದಲ್ಲಿ ಸಾವರ್ಕರ್ ಫೋಟೋ ಇರಿಸಲಿವೆ. 

ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಖಡಕ್ ವಾರ್ನಿಂಗ್: 
ಈ ಕುರಿತು ಮಾತನಾಡಿರುವ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್, 'ಯಾವ ಯುವಕ ಮಂಡಳದವರು ಸಾವರ್ಕರ್ ಭಾವಚಿತ್ರ ಹಾಕ್ತೀವಿ ಅಂತಾರೆ ಅವರಿಗೆ ನಿಶ್ಚಿತವಾಗಿ ಅವಕಾಶ ನೀಡುತ್ತೇವೆ ಎಂದಿದ್ದಾರೆ. ಪೊಲೀಸ್ ಇಲಾಖೆ ತಡೆಯಲು ಮುಂದಾದ್ರೆ ಏನ್ ಮಾಡ್ತೀರಾ ಅಂತಾ ಮಾಧ್ಯಮಗಳ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅಭಯ್ ಪಾಟೀಲ್, 'ಯಾರಾದರೂ ತಡೆಯಲು ಮುಂದಾದರೆ ಗಂಭೀರ ಪರಿಣಾಮ ಎದುರಿಸುತ್ತಾರೆ.

ಯಾರದಾರೂ ಸಾವರ್ಕರ್ ಭಾವಚಿತ್ರ ಹರಿಯಲು ಮುಂದಾದ್ರೆ ಅವರಿಗೆ ಏನ್ ಮಾಡಬೇಕು ಆ ದಿವಸ ಮಾಡ್ತೀವಿ. ಬಹಳಷ್ಟು ಯುವಕ ಮಂಡಳಿಯವರು ಗಣೇಶೋತ್ಸವ ಮಂಟಪದಲ್ಲಿ ಸಾವರ್ಕರ್ ಭಾವಚಿತ್ರ ಹಾಕ್ತೀವಿ, ಯಾರು ಬಂದು ಹರಿದು ಹಾಕ್ತಾರೆ ಹರಿಲಿ ನೋಡೋಣ ಎಂಬ ಭಾವನೆ ವ್ಯಕ್ತ ಮಾಡಿದ್ದಾರೆ‌‌. ಸಾವರ್ಕರ್ ಇಡೀ ದೇಶದ ನಾಯಕರು ಜಗತ್ತಿಗೆ ಮಾರ್ಗದರ್ಶನ ನೀಡಿದಂತವರು‌. ಅವರ ಭಾವಚಿತ್ರ ಗಣೇಶೋತ್ಸವ ಮಂಡಳಿಯಲ್ಲಿ ಹಾಕಿ ಅಂತಾ ಹೇಳಿದ್ದೇವೆ' ಎಂದಿದ್ದಾರೆ.

ಇನ್ನು ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂಬ ಕಾಂಗ್ರೆಸ್ ವಾದಕ್ಕೆ ಪ್ರತಿಕ್ರಿಯಿಸಿದ ಅಭಯ್ ಪಾಟೀಲ್, 'ವಿಪಕ್ಷದವರಿಗೆ ಎಷ್ಟು ಜ್ಞಾನ ಇದೆ ಅವರು ಅಭ್ಯಾಸ ಮಾಡಿಕೊಳ್ಳಲಿ. ಬ್ರಿಟಿಷ್ ಮ್ಯೂಸಿಯಂನಲ್ಲಿರುವ ದಾಖಲೆ ಪರಿಶೀಲಿಸಲಿ‌. ಸಾವರ್ಕರ್ ಇತಿಹಾಸ ಇನ್ನೊಮ್ಮೆ ಅಭ್ಯಾಸ ಮಾಡಲಿ, ಅವರ ಜೀವನಚರಿತ್ರೆ ಮತ್ತೊಮ್ಮೆ ಓದಲಿ. ಸಾವರ್ಕರ್‌ಗೆ ಆದ ಜೈಲು ಶಿಕ್ಷೆ ಯಾವ ಸ್ವಾತಂತ್ರ್ಯ ಸೈನಿಕರಿಗೆ ಆಗಿಲ್ಲ' ಎಂದಿದ್ದಾರೆ‌‌.

ಸಿದ್ದರಾಮಯ್ಯ ಹೇಳಿಕೆಗೆ ಅಭಯ್ ಪಾಟೀಲ್ ಕಿಡಿ: 
ಇನ್ನು ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಏಕೆ ಹಾಕಬೇಕಿತ್ತು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಅಭಯ್ ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ‌. ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕ ಅಭಯ್ ಪಾಟೀಲ್, 'ಸಿದ್ದರಾಮಯ್ಯ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಭಾವಚಿತ್ರ ಹಾಕಬೇಡಿ ಎಂದಿದ್ದಾರೆ. ನಾಳೆ ಹಿಂದೂಗಳು ಮುಸ್ಲಿಂ‌ ಏರಿಯಾದಲ್ಲಿ ಅಡ್ಡಾಡಬಾರದು ಅಂತಾರೆ‌. ಆಮೇಲೆ ಮುಸ್ಲಿಂ ಏರಿಯಾದಲ್ಲಿ ಹಿಂದೂ ಮನೆ ಇರಬಾರದು ಅಂತಾರೆ. ಬಳಿಕ ಅವರಿಗೆ ಆದಂತಹ ಒಂದು ದೇಶ ಕೊಡಿ ಅಂತಾ ಹೇಳ್ತಾರೆ. ಇದು ಸಿದ್ದರಾಮಯ್ಯರ ಮುಂದಾಲೋಚನೆ ಅಲ್ಲ ಇದು ಅವರ ದುರಾಲೋಚನೆ' ಎಂದು ತಿಳಿಸಿದ್ದಾರೆ‌. 

ಸಾವರ್ಕರ್‌ಗೂ ಬೆಳಗಾವಿಗೂ ಇದೇ ವಿಶೇಷ ನಂಟು: 
ಬೆಳಗಾವಿಗೂ ಸಾವರ್ಕರ್‌ಗೂ ವಿಶೇಷವಾದ ನಂಟಿದೆ. 1950ರಲ್ಲಿ ವಿನಾಯಕ ದಾಮೋದರ ಸಾವರ್ಕರ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ 100 ದಿನಗಳ ಕಾಲ ವಿಚಾರಣಾಧೀನ ಕೈದಿಯಾಗಿ ಬಂಧಿಯಾಗಿದ್ದರು. 1950ರಲ್ಲಿ ಅಂದಿನ ಪಾಕಿಸ್ತಾನ ಪ್ರಧಾನಿ ಲಿಯಾಕತ್ ಅಲಿ ಖಾನ್ ಭಾರತ ಭೇಟಿ‌ ವಿರೋಧಿಸಿದ್ದ ವಿನಾಯಕ್ ದಾಮೋದರ್ ಸಾವರ್ಕರ್‌ರನ್ನು ಮುಂಜಾಗ್ರತಾ ಕ್ರಮವಾಗಿ ಅಂದಿನ ಸರ್ಕಾರ ಸಾವರ್ಕರ್‌ರನ್ನು ಬಂಧಿಸಿತ್ತು. ಬಳಿಕ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ 100 ದಿನಗಳ ಕಾಲ ಇರಿಸಲಾಗಿತ್ತು.  ಈ ವೇಳೆ ಬಾಂಬೆ ಹೈಕೋರ್ಟ್‌ಗೆ ಸಾವರ್ಕರ್ ಪುತ್ರ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಬಳಿಕ 1950ರ ಜುಲೈ 13ರಂದು ಹಿಂಡಲಗಾ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು‌.

ಪ್ರತಿ ಗಲ್ಲಿಯ ಗಣೇಶೋತ್ಸವ ಮಂಡಳಿಗೆ ಸಾವರ್ಕರ್ ಫೋಟೋ ಕೊಡುತ್ತೇವೆ: 
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ, 'ಪ್ರತಿ ಗಣೇಶೋತ್ಸವ ಮಂಡಳಿಗಳಲ್ಲಿ ಖಂಡಿತ ಸಾವರ್ಕರ್ ಫೋಟೋ ಹಾಕ್ತೀವಿ. ಪ್ರತಿ ವಾರ್ಡ್‌, ಪ್ರತಿ ಗಲ್ಲಿಯ ಗಣೇಶ ಮಂಟಪಗಳಲ್ಲಿ ಸಾವರ್ಕರ್ ಫೋಟೋ ಹಾಕ್ತೀವಿ. ಸಾವರ್ಕರ್ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇದ್ದರು‌.75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಸಂದರ್ಭದಲ್ಲಿ ಅವರ ಇತಿಹಾಸ ತಿಳಿಸುವ ಪ್ರಯತ್ನ ಮಾಡ್ತೀವಿ‌. ದೇಶಕ್ಕಾಗಿ ತಮ್ಮ ಜೀವನ ಅರ್ಪಿಸಿದವರು ಸಾವರ್ಕರ್.‌ ಖಂಡಿತವಾಗಿ ಬರುವ ಕಾಲದಲ್ಲಿ ಅವರ ಫೋಟೋ ಹಾಕ್ತೀವಿ. ಸಾವರ್ಕರ್ ಫೋಟೋ ಹಾಕಿದ್ರೆ ಯಾರೂ ಆಬ್ಜೆಕ್ಷನ್ ಮಾಡಬಾರದು‌.

 ನನ್ನ ಕ್ಷೇತ್ರದ 252 ಗಣೇಶ ಮಂಟಪಗಳಿವೆ, ಎಲ್ಲರಿಗೂ ಸಾವರ್ಕರ್ ಫೋಟೋ ಕೊಡ್ತೇವೆ‌. ಅವರ ಫೋಟೋ ಜೊತೆ ಅವರ ಇತಿಹಾಸದ ಬಗ್ಗೆ ಬರಹವನ್ನು ಹಾಕುತ್ತೇವೆ. ಯಾರು ಹಾಕಲ್ಲ ಅಂತಾರೆ ಅವರ ಮನವೊಲಿಸಿ ಹಾಕಿಸುತ್ತೇವೆ' ಎಂದಿದ್ದಾರೆ‌. ಇನ್ನು ಸಾವರ್ಕರ್ ಬಗ್ಗೆ ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತಿಕ್ರಿಯಿಸಿರುವ ಶಾಸಕ ಅನಿಲ್ ಬೆನಕೆ, 'ಸಾವರ್ಕರ್ ಕಾಲಾಪಾನಿ ಶಿಕ್ಷೆ ಅನುಭವಿಸಿದವರು, ಎಷ್ಟೋ ವರ್ಷ ಜೈಲಿನಲ್ಲಿದ್ದವರು. ಸಾವರ್ಕರ್ ಬಗ್ಗೆ ಟೀಕೆ ಮಾಡುವವರು ದೇಶದ ಸಲುವಾಗಿ ಏನು ಮಾಡಿದ್ದಾರೆ. 

ಸಾವರ್ಕರ್ ದೇಶ ಭಕ್ತಿಯ ಎಷ್ಟೋ ಕವಿತೆಗಳನ್ನು ಬರೆದಿದ್ದಾರೆ, ಇವರು ಓದಿಲ್ಲ‌‌‌. ರಾಜಕಾರಣ ಮಾಡುವವರು ಮಾಡೋರೆ. ಅವರು ಟಿಪ್ಪು ಸುಲ್ತಾನ್‌ಗೆ ಜೈ ಅನ್ನೋರು ಅದಕ್ಕೆ ಏನ್ ಮಾಡಕ್ಕಾಗಲ್ಲ‌.‌ ಟಿಪ್ಪು ಸುಲ್ತಾನ್ ಏನ್ ಮಾಡಿದಾರೆ ನಮಗೆ, ಜನರಿಗೆ ಗೊತ್ತಿದೆ' ಎಂದಿದ್ದಾರೆ. ಇನ್ನು ಟಿಪ್ಪು ಸುಲ್ತಾನ್ ಬಗ್ಗೆ ಪಠ್ಯದಲ್ಲಿ ಪಾಠಗಳು ಇದ್ದ ವಿಚಾರವಾಗಿ ಪ್ರತಿಕ್ರಿಯಿಸಿದ ಅನಿಲ್ ಬೆನಕೆ, 'ಇತಿಹಾಸ ನಮಗೆ ಹೇಳಿದ್ದೆ ಬೇರೆ, ಇತಿಹಾಸ ಇರೋದೆ ಬೇರೆ.‌ ಇತಿಹಾಸ ಬರೆದುಕೊಟ್ಟಿದ್ದನ್ನು ಓದಿದ್ದೇವೆ' ಎಂದಿದ್ದಾರೆ.

ಐತಿಹಾಸಿಕ ಬೆಳಗಾವಿ ಗಣೇಶೋತ್ಸವದಲ್ಲಿ ಈ ಬಾರಿ ವೀರ್ ಸಾವರ್ಕರ್ ಹವಾ..!

ಇನ್ನು ಟಿಪ್ಪು ನೈಜ ಇತಿಹಾಸ ಪಠ್ಯದಲ್ಲಿ ಬರೆಯಬಹುದಲ್ಲಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, 'ಅದನ್ನು ಬರೆಯುತ್ತೇವೆ, ಅದಕ್ಕಾಗಿ ಸಾವರ್ಕರ್ ಫೋಟೋ ಹಾಕುತ್ತಿದ್ದೇವೆ, ಪುಸ್ತಕಗಳಲ್ಲಿ ಬರೆಯುತ್ತಿದ್ದೇವೆ.‌ ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಎಲ್ಲ ತರುತ್ತೇವೆ.‌ ಪಠ್ಯದಲ್ಲೂ ಈ ಬಗ್ಗೆ ಹಾಕುತ್ತೇವೆ‌‌‌. ಕಾಂಗ್ರೆಸ್ ಪಕ್ಷದವರೂ ಕೇವಲ ರಾಜಕಾರಣ ಮಾಡುತ್ತಾ ಬಂದಿದ್ದಾರೆ' ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗಣೇಶ ಚತುರ್ಥಿ 2022: ಮೂರ್ತಿ ಪ್ರತಿಷ್ಠಾಪನೆ ಸಮಯ ಈ ತಪ್ಪು ಖಂಡಿತಾ ಮಾಡ್ಬೇಡಿ!

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಬಿಜೆಪಿ ಮಧ್ಯೆ ಸಾವರ್ಕರ್ ಕಿಚ್ಚು ಹೊತ್ತಿ ಉರಿಯುತ್ತಿದೆ. ಇದನ್ನೇ ರಾಜಕೀಯ ಅಸ್ತ್ರವಾಗಿಸಿಕೊಳ್ಳಲು ಬೆಳಗಾವಿ ಬಿಜೆಪಿ ಶಾಸಕದ್ವಯರು ಮುಂದಾಗಿದ್ದಾರೆ ಎಂಬ ಮಾತುಗಳು ಬೆಳಗಾವಿ ಜಿಲ್ಲಾ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಬೆಳಗಾವಿಯ ಐತಿಹಾಸಿಕ ಗಣೇಶೋತ್ಸವದಲ್ಲಿ ಸಾವರ್ಕರ್ ಹವಾ ಯಾವ ರೀತಿ ಇರಲಿದೆ ಎಂಬುದನ್ನು ಕಾದು ನೋಡಬೇಕು.

Latest Videos
Follow Us:
Download App:
  • android
  • ios