ಮಾನ್ವಿ: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ, ತಹಸೀಲ್ದಾರ್ ವಿರುದ್ಧ ದೂರು
ತಹಸೀಲ್ದಾರ ವಿರುದ್ಧ ಲೈಂಗಿಕ ಕಿರುಕುಳ ಆರೋಪ| ನೊಂದ ಮಹಿಳಾ ಸಿಬ್ಬಂದಿ ನೀಡಿದ ದೂರನ್ನಾಧರಿಸಿ ವಿಚಾರಣೆ ನಡೆಸುವಂತೆ ಡಿಸಿ ಆದೇಶ| ರಾಯಚೂರು ಜಿಲ್ಲೆಯ ಮಾನ್ವಿ ತಹಸೀಲ್ ಕಚೇರಿಯಲ್ಲಿ ಶಿರಸ್ತಿದಾರರಾಗಿ ಕೆಲಸ ಮಾಡುತ್ತಿರುವ ಮಹಿಳಾಗೆ ಕಿರುಕುಳ|
ಮಾನ್ವಿ(ಸೆ.25): ಇಲ್ಲಿನ ತಹಸೀಲ್ದಾರ್ ಅಮರೇಶ ಬಿರಾದಾರ್ ಕಚೇರಿಯ ಮಹಿಳೆ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದ್ದು, ನೊಂದ ಮಹಿಳಾ ಸಿಬ್ಬಂದಿ ನೀಡಿದ ದೂರನ್ನಾಧರಿಸಿ ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಜಿಲ್ಲಾ ಮಟ್ಟದ ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ದೂರು ನಿವಾರಣಾ ಸಮಿತಿ ಅಧ್ಯಕ್ಷೆ ಹಾಗೂ ಬಿಇಒ ಆರ್.ಇಂದಿರಾ ಅವರಿಗೆ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.
ಮಾನ್ವಿ ತಹಸೀಲ್ ಕಚೇರಿಯಲ್ಲಿ ಶಿರಸ್ತಿದಾರರಾಗಿ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿಯಾದ ನನಗೆ ತಹಸೀಲ್ದಾರ ಅಮರೇಶ ಬಿರಾದಾರ್ ಅವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆ ಮಹಿಳೆ ಕಳೆದ ಸೆ.22 ರಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರಿಗೆ ಸಂಬಂಧಿಸಿದ ದಾಖಲೆ ಮತ್ತು ಸಿಡಿ ಸಮೇತ ದೂರನ್ನು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಸಿ ಸೆ.23 ರಂದು ಬಂದಿರುವ ದೂರನ್ನು ಪರಿಶೀಲನೆ ನಡಲು ತಿಳಿಸಿದ್ದಾರೆ.
ಕೆಲಸದ ಕಾರ್ಯಸ್ಥಳದಲ್ಲಿನ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ,ನಿಷೇಧ ಮತ್ತು ಪರಿಹಾರ) ಕಾಯ್ದೆ 2013 ಅನ್ವಯ ಅಮಿತಿಯ ಮೂಲಕ ವಿಚಾರಣೆ ನಡೆಸಿ, ಶೀಘ್ರದಲ್ಲಿಯೇ ವರದಿ ನೀಡುವಂತೆ ಡಿಸಿಯವರು ಸಮಿತಿ ಅಧ್ಯಕ್ಷೆ ಆರ್.ಇಂದಿರಾ ಅವರಿಗೆ ಆದೇಶಿಸಿದ್ದಾರೆ.
ರಾಯಚೂರು ಐಐಐಟಿಗೆ ಕೇಂದ್ರ ಅಸ್ತು: ಡಿಸಿಎಂ ಲಕ್ಷ್ಮಣ್ ಸವದಿ ಫುಲ್ ಖುಷ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಮಹಿಳಾ ಸಿಬ್ಬಂದಿಯನ್ನು ಗುರುವಾರದಂದು ಜಿಲ್ಲಾ ಲೈಂಗಿಕ ಕಿರುಕುಳ ದೂರು ನಿವಾರಣಾ ಸಮಿತಿಯು ತಮ್ಮ ಕಚೇರಿಗೆ ಕರೆಯಿಸಿಕೊಂಡು ವಿಚಾರಣೆ ನಡೆಸಿದ್ದು, ತದನಂತರ ತಹಸೀಲ್ದಾರ ಅಮರೇಶ ಬಿರಾದಾರ್ ಅವರನ್ನು ಸಹ ವಿಚಾರಣೆ ನಡೆಸುವ ಬಗ್ಗೆ ತಿಳಿದುಬಂದಿದೆ.