Asianet Suvarna News Asianet Suvarna News

ಬಳ್ಳಾರಿ: ಕುಡಿಯುವ ನೀರಿನ ಬವಣೆ ನೀಗುವುದು ಯಾವಾಗ?

ಜಿಲ್ಲೆಯ ಪೈಕಿ ಅರೆ ನೀರಾವರಿ ಹಾಗೂ ಹೆಚ್ಚು ಬರಗಾಲ ಪೀಡಿತ ಪ್ರದೇಶವನ್ನು ಹೊಂದಿರುವ ಗ್ರಾಮೀಣ ವಿಧಾನಸಭಾ ಕ್ಷೇತ್ರ ಮೂಲ ಸೌಕರ್ಯದಿಂದಲೂ ಹಿಂದುಳಿದಿರುವ ಕ್ಷೇತ್ರ. ಈ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳು ಎದುರಿಸುತ್ತಿರುವ ತೀವ್ರ ಸಮಸ್ಯೆಗಳ ಪೈಕಿ ಕುಡಿಯುವ ನೀರು ಹಾಗೂ ರೈತರ ಜಮೀನುಗಳಿಗೆ ನೀರು ಪೂರೈಕೆ ಸಾಧ್ಯವಾಗದಿರುವುದು ಈ ಭಾಗದ ಜನರನ್ನು ಹೆಚ್ಚು ಬಾಧಿಸಿದೆ.

Severe drinking water shortage in Bellary district rav
Author
First Published May 25, 2023, 5:48 AM IST

ಕೆ.ಎಂ. ಮಂಜುನಾಥ್‌

ಬಳ್ಳಾರಿ (ಮೇ.25) : ಜಿಲ್ಲೆಯ ಪೈಕಿ ಅರೆ ನೀರಾವರಿ ಹಾಗೂ ಹೆಚ್ಚು ಬರಗಾಲ ಪೀಡಿತ ಪ್ರದೇಶವನ್ನು ಹೊಂದಿರುವ ಗ್ರಾಮೀಣ ವಿಧಾನಸಭಾ ಕ್ಷೇತ್ರ ಮೂಲ ಸೌಕರ್ಯದಿಂದಲೂ ಹಿಂದುಳಿದಿರುವ ಕ್ಷೇತ್ರ. ಈ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳು ಎದುರಿಸುತ್ತಿರುವ ತೀವ್ರ ಸಮಸ್ಯೆಗಳ ಪೈಕಿ ಕುಡಿಯುವ ನೀರು ಹಾಗೂ ರೈತರ ಜಮೀನುಗಳಿಗೆ ನೀರು ಪೂರೈಕೆ ಸಾಧ್ಯವಾಗದಿರುವುದು ಈ ಭಾಗದ ಜನರನ್ನು ಹೆಚ್ಚು ಬಾಧಿಸಿದೆ.

ಗ್ರಾಮೀಣ ಕ್ಷೇತ್ರದಲ್ಲಿಯೇ ವೇದಾವತಿ ನದಿ ಹರಿಯುತ್ತದೆ. ಸನಿಹದಲ್ಲೇ ನದಿ ಹರಿದರೂ ನೀರಿಲ್ಲದೆ ಒದ್ದಾಡುವ ಜನರ ಪಾಡು ಹೇಳತೀರದು. ನೀರಿನ ಬಾಧೆ ನೀಗಿಸಲೆಂದೇ ಕೆರೆಗಳನ್ನು ನಿರ್ಮಿಸಲಾಗಿದೆ. ಆದರೆ, ನಾನಾ ತಾಂತ್ರಿಕ ಕಾರಣಗಳನ್ನೊಡ್ಡಿ ಕಾರ್ಯಗತವಾಗಿಲ್ಲ. ರೂಪನಗುಡಿಕೆರೆ, ಮಿಂಚೇರಿ ಕೆರೆಗಳ ನಿರ್ಮಾಣಕ್ಕೆ ಕೋಟ್ಯಂತರ ರು. ಖರ್ಚು ಮಾಡಿದರೂ ಜನರಿಗೆ ಉಪಯೋಗವಾಗಿಲ್ಲ. ಹರಗಿನಡೋಣಿ ಗ್ರಾಮಸ್ಥರು ಅನೇಕ ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದರೂ ಇಂದಿಗೂ ನೀರಿನ ಬವಣೆ ನೀಗಿಲ್ಲ.

ಉಡುಪಿ: ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬಂದರೂ ಕುಡಿಯುವ ನೀರಿಗೆ ತತ್ವಾರ

ಟ್ಯಾಂಕರ್‌ ನೀರಿನ ಪೂರೈಕೆ:

ಪ್ರತಿಬಾರಿ ಬೇಸಿಗೆಯಲ್ಲಿ ಟ್ಯಾಂಕರ್‌ ಮೂಲಕ ಹರಿಗಿನಡೋಣಿ ಸೇರಿದಂತೆ ಹಲವು ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ ಸ್ಥಿತಿ ಇದೆ. ಆದರೆ, ತೀರಾ ಸಮಸ್ಯೆಯಲ್ಲಿರುವ ಹಳ್ಳಿಗಳ ಜನರು ಎದುರಿಸುವ ನೀರಿನ ಸಂಕಷ್ಟನೀಗಿಸುವ ಕೆಲಸ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದಿಂದಾಗಿಲ್ಲ. ನೀರಿನ ಸಂಕಷ್ಟನಿವಾರಿಸಿದರೆ ಮಾತ್ರ ಈ ಬಾರಿ ಮತದಾನ ಮಾಡುವುದಾಗಿ ಹರಗಿನಡೋಣಿ ಗ್ರಾಮಸ್ಥರು ಎಚ್ಚರಿಸಿದ್ದರು. ಮತ ಬಹಿಷ್ಕಾರ ಹಾಕುವುದಾಗಿ ಹೇಳಿದ್ದರು. ಆದರೆ, ಜಿಲ್ಲಾಡಳಿತ ಗ್ರಾಮಸ್ಥರನ್ನು ಮನವೊಲಿಸಿ, ನೀರಿನ ಅಭಾವ ನೀಗಿಸುವ ಕೆಲಸ ಕೈಗೊಳ್ಳುವ ವಿಶ್ವಾಸ ಮೂಡಿಸಿತು. ಹರಗಿನಡೋಣಿ ಗ್ರಾಮದಂತೆಯೇ ಕ್ಷೇತ್ರದ ಹತ್ತಕ್ಕೂ ಹೆಚ್ಚು ಹಳ್ಳಿಗಳು ನೀರಿಗಾಗಿ ಬೇಸಿಗೆಯಲ್ಲಿ ಒದ್ದಾಡುತ್ತವೆ.

ರಸ್ತೆಗಳು ಸಂಚಾರಕ್ಕೆ ಯೋಗ್ಯವಿಲ್ಲ:

ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು, ಸಂಚಾರಕ್ಕೂ ಯೋಗ್ಯವಾಗಿಲ್ಲ. ಹಳ್ಳಿಗಳಲ್ಲೂ ರಸ್ತೆಗಳ ಸ್ಥಿತಿ ಭಿನ್ನವಾಗಿಲ್ಲ. ಕುಡಿಯುವ ನೀರು, ರಸ್ತೆ, ಚರಂಡಿ, ಆಸ್ಪತ್ರೆ ವ್ಯವಸ್ಥೆ ಸೇರಿದಂತೆ ಬಹುತೇಕ ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯಗಳು ಕೈಗೂಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಗಳು ಸಮರ್ಪಕ ಜಾರಿಯಾಗಿಲ್ಲವಾದ್ದರಿಂದ ಬಡಜನರು ಸ್ವಂತ ಸೂರಿಲ್ಲದೆ ಜೀವನ ನಡೆಸುವ ಚಿತ್ರಣ ಎಂದಿನಂತೆಯೇ ಇದೆ.

ರೂಪನಗುಡಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಜೋಳದರಾಶಿ, ಚೇಳ್ಳಗುರ್ಕಿ, ವೀರಾಪುರ, ಶಿಡಗಿನಮೊಳ, ಕಾರೇಕಲ್ಲು, ಮೀನಳ್ಳಿ, ಹರಗಿನಡೋಣಿ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಹಳ್ಳಿಗಳು ಸಂಪೂರ್ಣ ಮಳೆಯಾಶ್ರಿತವಾಗಿದ್ದು, ನೀರಾವರಿ ಯೋಜನೆಗಳ ಜಾರಿಯ ಕಾಳಜಿಯ ಕೆಲಸಗಳಾಗಿಲ್ಲ.

ನೂತನ ಶಾಸಕರ ಮೇಲೆ ಹೆಚ್ಚು ನಿರೀಕ್ಷೆ

ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರ ಮೇಲೆ ಕ್ಷೇತ್ರದ ಜನರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಳೆದ ಬಾರಿ ಶಾಸಕ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿದ್ದರೂ ಜನರ ನಿರೀಕ್ಷೆಯಂತೆ ಕೈಗೂಡಿಲ್ಲ. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಹೊಸದಾಗಿ ನೀರಾವರಿ ಯೋಜನೆಗಳು ಜಾರಿಯಾಗಿಲ್ಲ. ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಎದುರಿಸುವ ಹಳ್ಳಿ ಜನರ ಸಂಕಷ್ಟನಿವಾರಿಸುವ ಆದ್ಯತೆ ಮೊದಲಾಗಬೇಕಾಗಿದೆ. ನಾಗೇಂದ್ರ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಕ್ಷೇತ್ರದಲ್ಲಿ ಅನೇಕ ಯೋಜನೆಗಳ ಜಾರಿಗೆ ಅವಕಾಶವಾಗಲಿದೆ ಎಂಬ ನಿರೀಕ್ಷೆಗಳಿವೆ.

Hubballi Water Scarcity: ಹುಬ್ಬಳ್ಳಿ ಧಾರವಾಡದಲ್ಲಿ ಕುಡಿಯುವ ನೀರಿಗಾಗಿ ಪರದಾಟ!

ಗ್ರಾಮೀಣ ಕ್ಷೇತ್ರ ಪ್ರಮುಖವಾಗಿ ಕುಡಿಯುವ ನೀರು ಹಾಗೂ ಜಮೀನುಗಳಿಗೆ ನೀರಾವರಿ ಯೋಜನೆಗಳ ಸಮಸ್ಯೆ ಎದುರಿಸುತ್ತಿದೆ. ಅನೇಕ ಹಳ್ಳಿಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲ. ಜಿಲ್ಲಾಡಳಿತ ಹಾಗೂ ಚುನಾಯಿತ ಪ್ರತಿನಿಧಿಗಳು ಗಮನ ನೀಡಬೇಕು. ಹಳ್ಳಿಗಳತ್ತ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಅರಿಯಬೇಕು.

ಗಾದಿಲಿಂಗಪ್ಪ, ಮಹೇಶ್‌, ವಿಶ್ವನಾಥ, ರಾಮನಗೌಡ, ರೂಪನಗುಡಿ, ಕಮ್ಮರಚೇಡು ಗ್ರಾಮಸ್ಥರ

Follow Us:
Download App:
  • android
  • ios