ಮಂಡ್ಯ (ಜ.20):  ತಮ್ಮ ಪುತ್ರನ ಚಿತ್ರದ ಚಿತ್ರೀಕರಣಕ್ಕಾಗಿ ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಬಳಸಿಕೊಳ್ಳುವ ಮೂಲಕ ಸಂಸದೆ ಸುಮಲತಾ ಅಂಬರೀಶ್‌ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆರೋಪಿಸಿದೆ.

ಮೈಷುಗರ್‌ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುತ್ತಿರುವ ರಾಜ್ಯ ಸರ್ಕಾರ ನಿರ್ಧಾರ ಖಂಡಿಸಿ ರೈತ ಕುಟುಂಬಗಳು ಹೋರಾಟ ನಡೆಸುತ್ತಿವೆ. ಈ ಹೋರಾಟಕ್ಕೆ ಬೆಂಬಲವನ್ನು ನೀಡದೆ ಖಾಸಗೀಕರಣದ ಪರವಾಗಿ ನಿಂತಿರುವ ಸಂಸದರ ನಿಲುವನ್ನು ಖಂಡಿಸಿದೆ.

ಕಾರ್ಖಾನೆ ಖಾಸಗಿ ಆಸ್ತಿಯಲ್ಲ, ಅದು ಜಿಲ್ಲೆಯ ಜನರ ಆಸ್ತಿ. ಇದನ್ನು ಸಂಸದೆ ಸುಮಲತಾ ಅಂಬರೀಶ್‌ ಅರಿಯಬೇಕು. ತಮ್ಮ ಸ್ಥಾಪಿತ ಖಾಸಗಿ ಮನೋಭಾವವನ್ನು ಜಿಲ್ಲೆಯ ಜನರ ಮೇಲೆ ಹೇರುವುದು ಸರಿಯಲ್ಲ. ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿಯೇ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಿ ಪ್ರಾರಂಭಿಸುತ್ತೇನೆ ಎಂದು ಹೇಳುತ್ತಲೇ 40 ವರ್ಷಗಳ ಕಾಲ ಗುತ್ತಿಗೆ ನೀಡಿ ರೈತರಿಗೆ ಶಾಶ್ವತವಾಗಿ ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಿದೆ.

ಸೂರಿ ಸಿನಿಮಾ ಬ್ಯಾಡ್‌ ಮ್ಯಾನರ್ಸ್‌ ಮುಹೂರ್ತ; ಅಭಿಗೆ ಹಾರೈಸಿ ದರ್ಶನ್‌,ಸುಮಲತಾ! ..

ಸಂಸದರ ವರ್ತನೆಯನ್ನು ಜಿಲ್ಲೆಯ ರೈತರು ಅರ್ಥಮಾಡಿಕೊಳ್ಳಬೇಕು. ಚಿತ್ರೀಕರಣ ಸಂಬಂಧ ಜಿಲ್ಲಾಡಳಿತ ತನಿಖೆ ಮಾಡಬೇಕು. ಸಂಸತ್‌ನಲ್ಲಿ ರೈತ ವಿರೋಧಿ ಕಾಯ್ದೆ ಮಂಡನೆ ಸಂದರ್ಭದಲ್ಲಿ ಸಂಸ¨ರ ನಿಲುವಿನ ಉತ್ತರ ಮಂಡ್ಯ ಜಿಲ್ಲೆಯ ರೈತರಿಗೆ ಬೇಕಿದೆ. ಕಾರ್ಖಾನೆಗೆ ಯಾವುದೇ ರೀತಿಯ ಖಾಸಗೀತನ ಪ್ರವೇಶಿಸಲು ಜನರು ಅವಕಾಶ ಮಾಡದೆ ಹೋರಾಟಕ್ಕೆ ಬೆಂಬಲ ನೀಡುವಂತೆ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ, ರೈತ ಮುಖಂಡರಾದ ಸುನಂದಾ ಜಯರಾಂ, ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್‌, ಕೃಷ್ಣ ಪ್ರಕಾಶ್‌, ಮುದ್ದೇಗೌಡ, ಎಂ.ಬಿ.ಶ್ರೀನಿವಾಸ, ಕುಮಾರಿ ಕೋರಿದ್ದಾರೆ.