Asianet Suvarna News Asianet Suvarna News

Hubballi: ರಾಷ್ಟ್ರಪತಿ ಪೌರಸನ್ಮಾನ; ಸಿಂಗಾರಗೊಂಡಿರುವ ನಗರ

  • ರಾಷ್ಟ್ರಪತಿಗೆ ಪೌರಸನ್ಮಾನ ಮದುವಣಗಿತ್ತಿಯಂತೆ ಸಿಂಗಾರ
  • ರಾಷ್ಟ್ರಪತಿ ಸಂಚರಿಸುವ ಮಾರ್ಗದ ರಾಜಕಾಲುವೆ, ಚರಂಡಿಗಳಿಗೆಲ್ಲ ಸುಣ್ಣ ಬಣ್ಣ
  • ಪೌರಸನ್ಮಾನ ಸ್ವೀಕರಿಸಲಿರುವ 2ನೇ ರಾಷ್ಟ್ರಪತಿ ದ್ರೌಪದಿ ಮುರ್ಮು
september 26 president draupadi murmu will arrive hubballi for campus inauguration rav
Author
First Published Sep 25, 2022, 7:57 AM IST

ಹುಬ್ಬಳ್ಳಿ (ಸೆ.25) : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಏರ್ಪಡಿಸಿರುವ ಪೌರಸನ್ಮಾನಕ್ಕೆ ಮಹಾನಗರ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಕಾರ್ಯಕ್ರಮದ ಬಹುತೇಕ ಸಿದ್ಧತೆಗಳೆಲ್ಲ ಪೂರ್ಣಗೊಂಡಿದ್ದು, ಅಂತಿಮ ಹಂತದ ತಯಾರಿ ನಡೆದಿದೆ. ಸಿದ್ಧಾರೂಢರ ಬೆಳ್ಳಿಮೂರ್ತಿ, ಚರಿತ್ರೆಯ ಕೃತಿಯೊಂದಿಗೆ ಪೌರಸನ್ಮಾನ ಸಲ್ಲಿಸಲಾಗುತ್ತಿದೆ. ಧಾರವಾಡ ಪೇಡೆಯನ್ನೂ ರಾಷ್ಟ್ರಪತಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ. ಪೌರಸನ್ಮಾನಕ್ಕಾಗಿ ಜಿಲ್ಲಾಡಳಿತ ಹಾಗೂ ಪಾಲಿಕೆ ಅಧಿಕಾರಿ ವರ್ಗ, ಸಿಬ್ಬಂದಿ ಹಗಲುರಾತ್ರಿಯೆನ್ನದೇ ಶ್ರಮಿಸುತ್ತಿದ್ದಾರೆ.

Hubballi: ರಾಷ್ಟ್ರಪತಿ ಪೌರಸನ್ಮಾನಕ್ಕೆ ಭರದಿಂದ ತಯಾರಿ

ಬೃಹತ್‌ ಪೆಂಡಾಲ್‌:

ಇಲ್ಲಿನ ಜಿಮ್‌ಖಾನ್‌ ಮೈದಾನದಲ್ಲಿ ಸೆ. 26ರಂದು ಬೆಳಗ್ಗೆ 12.20ರಿಂದ 12.50ರ ವರೆಗೆ ನಡೆಯಲಿರುವ ಕಾರ್ಯಕ್ರಮಕ್ಕಾಗಿ ಬೃಹತ್‌ ವೇದಿಕೆ ಸಿದ್ಧಪಡಿಸಲಾಗಿದೆ. 30 ಸಾವಿರ ಚದುರಡಿಯಲ್ಲಿ ಜರ್ಮನ್‌ ಟೆಕ್ನಿಕ್‌ ಬಳಸಿ ಪೆಂಡಾಲ್‌ ಹಾಕಲಾಗಿದೆ. ಮಳೆ, ಬಿಸಿಲು ಇದ್ದರೂ ಯಾವುದೇ ಸಮಸ್ಯೆಯಾಗದು. ಬರೋಬ್ಬರಿ 4 ಸಾವಿರ ಕುರ್ಚಿ ಹಾಕಿದ್ದು ಇನ್ನೂ ಒಂದು ಸಾವಿರ ಕುರ್ಚಿಯನ್ನು ಹೆಚ್ಚುವರಿಯಾಗಿ ಇಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರೆ ಕುಳಿತುಕೊಳ್ಳಲು ಹೆಚ್ಚುವರಿ ಕುರ್ಚಿಗಳನ್ನು ಪಕ್ಕಕ್ಕಿಡಲಾಗಿದೆ. ಈಗಾಗಲೇ 5 ಸಾವಿರ ಗಣ್ಯರಿಗೆ ಆಮಂತ್ರಣ ಪತ್ರಿಕೆ ಮುಟ್ಟಿಸಲಾಗಿದೆ. ಶಾಸಕರು, ಮಾಜಿ ಶಾಸಕರು, ಪಾಲಿಕೆಯ ಸದಸ್ಯರು, ಮಾಜಿ ಸದಸ್ಯರು, ಮಾಜಿ ಮೇಯರ್‌, ಉಪ ಮೇಯರ್‌, ಗಣ್ಯ ವೈದ್ಯರು, ಸಾಹಿತಿಗಳು, ವಕೀಲರು ಸೇರಿದಂತೆ ಗಣ್ಯರು ಕಾರ್ಯಕ್ರಮದ ಆಮಂತ್ರಿತರರಾಗಿದ್ದಾರೆ.

ಗುಜರಾತ್‌ ಭವನದ ಬಳಿಯಿರುವ ಪ್ರವೇಶ ದ್ವಾರದಿಂದ ಗಣ್ಯರಿಗೆ, ಸವಾಯಿ ಗಂಧರ್ವ ಹಾಲ್‌ ಬಳಿಯಿರುವ ಪ್ರವೇಶ ದ್ವಾರದಿಂದ ಸಾರ್ವಜನಿಕರಿಗೆ ಪ್ರವೇಶ ನೀಡಲಾಗುತ್ತಿದೆ. ಅಂದು ಬೆಳಗ್ಗೆ 10ರಿಂದಲೇ ಗುಜರಾತ್‌ ಭವನದ ರಸ್ತೆಯಲ್ಲಿ ಸಂಚಾರ ನಿಷೇಧಗೊಳ್ಳಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ಮಾತ್ರ ಸಂಚರಿಸಲು ಅವಕಾಶವಿರಲಿದೆ. ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಇನ್ನು ರಾಷ್ಟ್ರಪತಿ ಆಗಮಿಸುವ 15 ನಿಮಿಷ ಮುಂಚೆ ವಿಮಾನ ನಿಲ್ದಾಣದಿಂದ ಕಾರ್ಯಕ್ರಮದ ಸ್ಥಳದವರೆಗೆ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸುಣ್ಣ ಬಣ್ಣ:

ರಾಷ್ಟ್ರಪತಿ ಸಂಚರಿಸಲಿರುವ ಮಾರ್ಗದಲ್ಲಿರುವ ಬರುವ ಚರಂಡಿ, ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಿ ಸುಣ್ಣ ಬಣ್ಣ ಬಳಿಸಲಾಗುತ್ತಿದೆ. ಇನ್ನೂ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ಹಾಗೂ ಧೂಳುಮುಕ್ತ ರಸ್ತೆಗಳನ್ನಾಗಿ ಮಾಡುವ ಕಾರ್ಯ ಭರದಿಂದ ಸಾಗಿದೆ.

ಪರಿಶೀಲನೆ:

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಮೇಯರ್‌ ಈರೇಶ ಅಂಚಟಗೇರಿ, ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಸೇರಿದಂತೆ ಹಲವು ಗಣ್ಯರು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಕೆಲವೊಂದಿಷ್ಟುಸಲಹೆ ಸೂಚನೆ ನೀಡಿದರು.

ಆರೂಢರ ಮೂರ್ತಿ, ಧಾರವಾಡ ಪೇಡೆ

ಹುಬ್ಬಳ್ಳಿಯೆಂದರೆ ಸಿದ್ಧಾರೂಢರು, ಸಿದ್ಧಾರೂಢರು ಎಂದರೆ ಹುಬ್ಬಳ್ಳಿ ಎಂಬ ಮಾತಿದೆ. ಅದರಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಿದ್ಧಾರೂಢರ ಮೂರ್ತಿಯನ್ನೇ ಸ್ಮರಣಿಕೆಯನ್ನಾಗಿ ನೀಡಿ ಗೌರವಿಸಲು ನಿರ್ಧರಿಸಿರುವುದು ವಿಶೇಷ. 850 ಗ್ರಾಂ ತೂಕದ ಬೆಳ್ಳಿಯ ಆರೂಢರ ಮೂರ್ತಿ ನೀಡಿ ಸನ್ಮಾನಿಸಲಾಗುತ್ತಿದೆ. ಮೂರ್ತಿ ತಳಭಾಗದಲ್ಲಿ ಸೀಸ್‌ಂ ಕಟ್ಟಿಗೆಯಿಂದ ಸ್ಟ್ಯಾಂಡ್‌ ತರಹ ವಿನ್ಯಾಸಗೊಳಿಸಲಾಗಿದೆ. ರಾಷ್ಟ್ರಪತಿ ಭವನದಲ್ಲಿ ಬೆಳ್ಳಿಮೂರ್ತಿ ಶಾಶ್ವತವಾಗಿ ಇರಲಿದೆ. ಈ ಮೂರ್ತಿ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಲಿದೆ. ಈ ಕಾರಣಕ್ಕಾಗಿ ಮೂರ್ತಿ ಮುಂದೆ ಹಾಳಾಗದಂತೆ ಅದನ್ನು ತಳಭಾಗಕ್ಕೆ ಕಟ್ಟಿಗೆಯಿಂದ ವಿನ್ಯಾಸಗೊಳಿಸಲಾಗಿದೆ.

ಇನ್ನೂ ಸಿದ್ಧಾರೂಢರ ಚರಿತ್ರೆಯ ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯ ಪುಸ್ತಕಗಳನ್ನು ನೀಡಲಾಗುತ್ತಿದೆ. ಜತೆಗೆ ಧಾರವಾಡ ಜಿಲ್ಲೆ ಸಿಹಿ ಖಾದ್ಯವಾಗಿರುವ ಪೇಡೆಗೆ ಫೇಮಸ್‌. ಈ ಹಿನ್ನೆಲೆಯಲ್ಲಿ ಪೇಡೆಯನ್ನು ಸಹ ರಾಷ್ಟ್ರಪತಿಗಳಿಗೆ ನೀಡಲಾಗುತ್ತಿದೆ. 

ಇನ್ನೂ ಪಾಲಿಕೆಯೂ ಈ ವರೆಗೆ ಐವರಿಗೆ ಪೌರಸನ್ಮಾನ ಗೌರವ ಸಲ್ಲಿಸಿದೆ. ವರನಟ ಡಾ. ರಾಜಕುಮಾರ, ಸಂಗೀತ ಸಾಮ್ರಾಜ್ಞೆ ಗಂಗೂಬಾಯಿ ಹಾನಗಲ್‌, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಹಾಗೂ ರಾಷ್ಟ್ರಪತಿ ಗ್ಯಾನಿಜೈಲ್‌ಸಿಂಗ್‌ ಅವರಿಗೆ ಪೌರಸನ್ಮಾನ ಮಾಡಿದ್ದುಂಟು. ಇದೀಗ ದ್ರೌಪದಿ ಮುರ್ಮು ಅವರಿಗೆ ಪೌರಸನ್ಮಾನ ಆಯೋಜಿಸಿದೆ. ಇದರಿಂದ ಪೌರಸನ್ಮಾನ ಸ್ವೀಕರಿಸಲಿರುವ ಗಣ್ಯಾತಿಗಣ್ಯರ ಪೈಕಿ 6ನೇ ಹಾಗೂ ರಾಷ್ಟ್ರಪತಿಗಳ ಪೈಕಿ 2ನೇ ರಾಷ್ಟ್ರಪತಿಗಳಾಗಿದ್ದಾರೆ.

ರಾಷ್ಟ್ರಪತಿ ಪೌರಸನ್ಮಾನ ಕಾರ್ಯಕ್ರಮ ಪಾದರ್ಶಕ

ನಗರದಲ್ಲಿ ಸೆ. 26ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ 850 ಗ್ರಾಮ ತೂಕದ ಬೆಳ್ಳಿಯ ಸಿದ್ಧಾರೂಢ ಸ್ವಾಮೀಜಿ ಮೂರ್ತಿ, ಧಾರವಾಡ ಠಾಕೂರ ಪೇಡೆ ನೀಡಿ ಪೌರ ಸನ್ಮಾನ ಮಾಡಲಾಗುವುದು ಎಂದು ತಿಳಿಸಿರುವ ಮೇಯರ್‌ ಈರೇಶ ಅಂಚಟಗೇರಿ, ಪೌರಸನ್ಮಾನ ಕಾರ್ಯಕ್ರಮದ ವಿಷಯದಲ್ಲಿ ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಎಲ್ಲವೂ ಪಾರದರ್ಶಕವಾಗಿಯೇ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರಸನ್ಮಾನಕ್ಕಾಗಿ ದೇಶಪಾಂಡೆ ನಗರದ ಜಿಮ್‌ಖಾನ್‌ ಮೈದಾನದಲ್ಲಿ ಬೃಹತ್‌ ಪೆಂಡಾಲ್‌ ಹಾಕಲಾಗಿದ್ದು, ಬಹುತೇಕ ಕೆಲಸ ಮುಕ್ತಾಯವಾಗಿದೆ. ಎನ್‌ಎಸ್‌ಜಿ ತಂಡ ಭೇಟಿ ನೀಡಿ ಕೆಲವಷ್ಟುಮಾರ್ಪಾಡು ಮಾಡಲು ಸೂಚಿಸಿದೆ ಎಂದು ತಿಳಿಸಿದರು.

ರಾಷ್ಟ್ರಪತಿ ಸನ್ಮಾನಿಸುವುದು ಮಹಾನಗರ ಜನತೆಯ ಬಹುದಿನಗಳ ಬೇಡಿಕೆಯಾಗಿತ್ತು. ನಮ್ಮ ಬೇಡಿಕೆಗೆ ಸ್ಪಂದಿಸಿ ರಾಷ್ಟ್ರಪತಿಗಳು ನಗರಕ್ಕೆ ಬರುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌, ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಪಾಲಿಕೆ ಸದಸ್ಯರು, ಮಾಜಿ ಪಾಲಿಕೆ ಸದಸ್ಯರು ಸೇರಿದಂತೆ ಮುಂತಾದ ಗಣ್ಯಮಾನ್ಯರಿಗೆ ಆಹ್ವಾನ ನೀಡಲಾಗಿದೆ. ಈಗಾಗಲೇ 5000 ಆಮಂತ್ರಣ ಪತ್ರಿಕೆ ತಲುಪಿಸುವ ಕೆಲಸ ಆಗಿದೆ ಎಂದರು.

ಖರ್ಚೆಷ್ಟು?:

ಪೌರ ಸನ್ಮಾನ ಕಾರ್ಯಕ್ರಮಕ್ಕೆ . 1.30 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಲಾಗಿದೆ. . 64 ಲಕ್ಷ ವೆಚ್ಚದಲ್ಲಿ ಪೆಂಡಾಲ್‌ ನಿರ್ಮಿಸಲಾಗಿದೆ. ತುರ್ತು ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಮೂಲಕ . 2 ಕೋಟಿ ವರೆಗೆ ವೆಚ್ಚ ಮಾಡಲು ಅವಕಾಶವಿದೆ. ಟೆಂಡರ್‌ ಕರೆದರೆ ಎಷ್ಟುವೆಚ್ಚವಾಗಬಹುದು ಎನ್ನುವ ನಿಟ್ಟಿನಲ್ಲಿ ಜಾಹೀರಾತು ನೀಡಲಾಗಿದೆ. ಎಲ್ಲವೂ ಪಾರದರ್ಶಕವಾಗಿಯೇ ನಡೆಯುತ್ತಿದೆ ಎಂದು ಮೇಯರ್‌ ತಿಳಿಸಿದರು.

ರಾಷ್ಟ್ರಪತಿಗಳ ಹುಬ್ಬಳ್ಳಿ ಕಾರ್ಯಕ್ರಮದ ಸಿದ್ಧತೆಗೆ ಸಂಬಂಧಿಸಿದಂತೆ ಯಾವುದೇ ಅಕ್ರಮ ಅವ್ಯವಹಾರಕ್ಕೆ ಆಸ್ಪದ ನೀಡುವುದಿಲ್ಲ. ಪ್ರತಿ ವ್ಯವಹಾರವನ್ನು ಚೆಕ್‌ ಮೂಲಕವೇ ನಡೆಸಲಾಗುತ್ತಿದೆ. ಸಿದ್ಧತೆ ಕಾಮಗಾರಿ ಆರಂಭಿಸಿದ ನಂತರ ಕೊಟೇಶನ್‌ ಆಹ್ವಾನ ಮಾಡಿರುವ ಹಿಂದೆ ಯಾವುದೇ ದುರುದ್ದೇಶವಿಲ್ಲ. ಜಿಲ್ಲಾಡಳಿತ ನಿಯಂತ್ರಣದ ನಿರ್ಮಿತಿ ಕೇಂದ್ರಕ್ಕೆ . 2 ಕೋಟಿ ಒಳಗೆ ಖರ್ಚು ಮಾಡಲು ವಿನಾಯತಿ ಇದ್ದು, ಆ ಮೂಲಕ ಸಿದ್ಧತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ರಾಷ್ಟ್ರಪತಿಗಳ ಮೈಸೂರು ಕಾರ್ಯಕ್ರಮದ ಸಿದ್ಧತೆಯಂತೆ ಹುಬ್ಬಳ್ಳಿ ಕಾರ್ಯಕ್ರಮದಲ್ಲೂ ಮಾಡಲಾಗುತ್ತಿದೆ. ಅಲ್ಲಿನ ಕಮಿಷನರ್‌ ಹಾಗೂ ನಮ್ಮ ಕಮಿಷನರ್‌ ಕಾರ್ಯಕ್ರಮ ಸಿದ್ಧತೆ ಕಾಮಗಾರಿ ಬಗ್ಗೆ ಚರ್ಚಿಸಿದ್ದಾರೆ ಎಂದರು.ಉಪ ಮೇಯರ್‌ ಉಮಾ ಮುಕುಂದ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸಂತೋಷ ಚವ್ಹಾಣ, ರೂಪಾ ಶೆಟ್ಟಿ, ತಿಪ್ಪಣ್ಣ ಮಜ್ಜಗಿ, ನಜೀರ ಅಹ್ಮದ ಹೊನ್ಯಾಳ ಸೇರಿದಂತೆ ಹಲವರಿದ್ದರು.

Queen Elizabeth II Funeral: ಬ್ರಿಟನ್‌ ರಾಣಿಗೆ ಕಣ್ಣೀರ ವಿದಾಯ; ದ್ರೌಪದಿ ಮುರ್ಮು ಸೇರಿ 2000 ಗಣ್ಯರು ಭಾಗಿ

ಗೌನ್‌ ಧರಿಸಲ್ಲ: ಮೇಯರ್‌

ಕಳೆದ ಹದಿನೈದು ದಿನಗಳಿಂದ ಗಣ್ಯರು ಬಂದಾಗ ಗೌನ್‌ ಧರಿಸುವುದನ್ನು ಬಿಟ್ಟಿರುವ ಮೇಯರ್‌ ಈರೇಶ ಅಂಚಟಗೇರಿ, ರಾಷ್ಟ್ರಪತಿ ಕಾರ್ಯಕ್ರಮಕ್ಕೂ ಗೌನ್‌ ಧರಿಸುವುದಿಲ್ಲವಂತೆ. ಮೇಯರ್‌ ಗೌನ್‌ ಧರಿಸುವುದು ವಾಡಿಕೆ. ಆದರೆ ಇದು ಬ್ರಿಟಿಷ್‌ ಸರ್ಕಾರದ ಪದ್ಧತಿ. ಹೀಗಾಗಿ ಈ ಗೌನ್‌ ಧರಿಸುವುದಿಲ್ಲ. ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದಾಗ ಗೌನ್‌ ಧರಿಸದೇ ಸ್ವಾಗತ ಕೋರಿದ್ದರು. ಇದೀಗ ರಾಷ್ಟ್ರಪತಿಗಳಿಗೂ ಗೌನ್‌ ಧರಿಸದೇ ಸ್ವಾಗತಿಸಲು ಮೇಯರ್‌ ನಿರ್ಧರಿಸಿದ್ದಾರೆ. ಕಾರ್ಯಕ್ರಮದಲ್ಲೂ ಗೌನ್‌ ಧರಿಸುವುದಿಲ್ಲ ಎಂದು ಅಂಚಟಗೇರಿ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಸರ್ಕಾರದಿಂದ ಏನಾದರೂ ಸೂಚನೆ ಬಂದರೆ ಮಾತ್ರ ಗೌನ್‌ ಧರಿಸುವುದಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Follow Us:
Download App:
  • android
  • ios