Asianet Suvarna News Asianet Suvarna News

Hubballi: ರಾಷ್ಟ್ರಪತಿ ಪೌರಸನ್ಮಾನಕ್ಕೆ ಭರದಿಂದ ತಯಾರಿ

  • ರಾಷ್ಟ್ರಪತಿ ಪೌರಸನ್ಮಾನಕ್ಕೆ ಭರದಿಂದ ತಯಾರಿ
  • 26ಕ್ಕೆ ನಡೆಯಲಿದೆ ರಾಷ್ಟ್ರಪತಿಗಳ ಪೌರಸನ್ಮಾನ
  • 30 ನಿಮಿಷದ ಕಾರ್ಯಕ್ರಮ
Preparing for the Presidential Citizenship program rav
Author
First Published Sep 22, 2022, 8:13 AM IST

ಹುಬ್ಬಳ್ಳಿ (ಸೆ.22) : ರಾಷ್ಟ್ರಪತಿ ದ್ರೌಪದಿ ಮುರ್ಮ ಅವರಿಗೆ ಆಯೋಜಿಸಿರುವ ಪೌರಸನ್ಮಾನ ಕಾರ್ಯಕ್ರಮಕ್ಕಾಗಿ ನಗರದಲ್ಲಿ ಭರದಿಂದ ತಯಾರಿ ನಡೆದಿದೆ. ರಾಷ್ಟ್ರಪತಿಗಳು ಸಂಚರಿಸುವ ರಸ್ತೆಗಳ ದುರಸ್ತಿ ಕಾರ್ಯ ನಡೆದಿದೆ. ಇನ್ನು ಸನ್ಮಾನ ನಡೆಯುವ ಮೈದಾನದಲ್ಲಿ ದೊಡ್ಡ ಪೆಂಡಾಲ್‌ ಅಳವಡಿಸಲಾಗುತ್ತಿದೆ. ಈ ನಡುವೆ ರಾಷ್ಟ್ರಪತಿ ಅವರ ಕಾರ್ಯಕ್ರಮ 30 ನಿಮಿಷಗಳ ಕಾಲ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Queen Elizabeth II Funeral: ಬ್ರಿಟನ್‌ ರಾಣಿಗೆ ಕಣ್ಣೀರ ವಿದಾಯ; ದ್ರೌಪದಿ ಮುರ್ಮು ಸೇರಿ 2000 ಗಣ್ಯರು ಭಾಗಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೆ. 26ರಂದು ರಾಷ್ಟ್ರಪತಿ ಅವರಿಗೆ ಪೌರಸನ್ಮಾನ ಕಾರ್ಯಕ್ರಮ ಏರ್ಪಡಿಸಿದೆ. ಅಂದು ಬೆಳಗ್ಗೆ ಮೈಸೂರಲ್ಲಿ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡುವ ರಾಷ್ಟ್ರಪತಿಗಳು ಅಲ್ಲಿಂದ 11.05ಕ್ಕೆ ಹೊರಡಲಿದ್ದಾರೆ. 12ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 12.05ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೊರಟು ಅಲ್ಲಿಂದ 12.20ಕ್ಕೆ ಹುಬ್ಬಳ್ಳಿ ಜಿಮ್‌ಖಾನಾ ಕ್ಲಬ್‌ ಮೈದಾನಕ್ಕೆ ಆಗಮಿಸಲಿದ್ದಾರೆ. 12.20ರಿಂದ 12.50ರ ವರೆಗೆ ಪೌರಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳೊಂದಿಗೆ ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಸಚಿವರು ಸೇರಿದಂತೆ ಐವರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಆದರೆ ಯಾರೂ ಭಾಷಣ ಮಾಡುತ್ತಿಲ್ಲ. ಸನ್ಮಾನ ಸ್ವೀಕರಿಸಿ ರಾಷ್ಟ್ರಪತಿಗಳು ಮಾತ್ರ ಭಾಷಣ ಮಾಡಲಿದ್ದಾರೆ. ಸರಿಯಾಗಿ 12.50ಕ್ಕೆ ಇಲ್ಲಿಂದ ನೇರವಾಗಿ ಧಾರವಾಡದ ಐಐಐಟಿ ಕೇಂದ್ರಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

3 ಸಾವಿರ ಜನ: ಕಾರ್ಯಕ್ರಮದ ವೇದಿಕೆ ಮುಂಭಾಗ ಜರ್ಮನ್‌ ಟೆಂಟ್‌ ಶಾಮಿಯಾನ ಅಳವಡಿಸಲಾಗುತ್ತಿದೆ. 3 ಸಾವಿರ ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಮಾಡುವಂತಹ ಟೆಂಟ್‌ ಇದು. ಸವಾಯಿ ಗಂಧರ್ವ ಸಭಾಭವನದ ಬಲಗಡೆಯ ಗೇಟ್‌ನಿಂದ ಸಾರ್ವಜನಿಕರಿಗೆ ಹಾಗೂ ಗುಜರಾತ್‌ ಭವನದ ಬಳಿಯಿರುವ ಮುಖ್ಯದ್ವಾರದಿಂದ ಜನಪ್ರತಿನಿಧಿಗಳಿಗೆ ಪ್ರವೇಶ ನೀಡಲು ಉದ್ದೇಶಿಸಲಾಗಿದೆ.

ಪೌರಸನ್ಮಾನ: ಎರಡನೆಯ ರಾಷ್ಟ್ರಪತಿ

ಈ ಹಿಂದೆ 1986-87ರಲ್ಲಿ ಗ್ಯಾನಿ ಜೈಲ್‌ಸಿಂಗ್‌ ಅವರು ರಾಷ್ಟ್ರಪತಿಗಳಾಗಿದ್ದಾಗ ಪಾಲಿಕೆ ಪೌರಸನ್ಮಾನ ಮಾಡಿತ್ತು. ಆಗ ಇಲ್ಲಿನ ರೈಲ್ವೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತಂತೆ. ಸರ್ವಪಲ್ಲಿ ರಾಧಾಕೃಷ್ಣನ್‌, ಡಾ. ಎಪಿಜೆ ಅಬ್ದುಲ್‌ ಕಲಾಂ, ಪ್ರಣವ ಮುಖರ್ಜಿ ಧಾರವಾಡ ಜಿಲ್ಲೆಗೆ ಭೇಟಿ ನೀಡಿದ್ದರು. ಆದರೆ ಇವರಾರ‍ಯರಿಗೂ ಪೌರಸನ್ಮಾನ ಮಾಡಿರಲಿಲ್ಲ. ಗ್ಯಾನಿಜೈಲ್‌ಸಿಂಗ್‌ ಅವರಿಗೆ ಮಾತ್ರ ಪೌರಸನ್ಮಾನ ಮಾಡಲಾಗಿತ್ತು. ಇವರನ್ನು ಹೊರತುಪಡಿಸಿ ಇದೀಗ ದ್ರೌಪದಿ ಮುರ್ಮ ಅವರಿಗೆ ಮಾಡಲಾಗುತ್ತಿದೆ.

ರಾಷ್ಟ್ರಪತಿ ಪೌರಸನ್ಮಾನ ಕಾರ್ಯಕ್ರಮ ಬೇರೆಡೆ ಸ್ಥಳಾಂತರಿಸಿ

ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಸೆ. 26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆಯಿಸಿ ಸನ್ಮಾನ ಮಾಡಲು ಉದ್ದೇಶಿಸಿರುವ ಹುಬ್ಬಳ್ಳಿ ಜಿಮ್‌ಖಾನ್‌ ಮೈದಾನ ವಿವಾದಿತ ಸ್ಥಳವಾಗಿದೆ. ಕೂಡಲೇ ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ರಾಷ್ಟ್ರಪತಿ ಕಾರ್ಯಕ್ರಮದ ಸ್ಥಳವನ್ನು ಬೇರೆಡೆ ಬದಲಾವಣೆ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಪಿ.ಎಚ್‌. ನೀರಲಕೇರಿ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜಾಗೆಯ ವ್ಯಾಜ್ಯ ಕೋರ್ಚ್‌ನಲ್ಲಿದೆ. ಅಲ್ಲಿರುವುದು ಕಾನೂನು ಬಾಹಿರ ಕಟ್ಟಡ. ರಾಷ್ಟ್ರಪತಿಗಳನ್ನು ಸನ್ಮಾನ ಕಾರ್ಯಕ್ರಮಕ್ಕೆ ಆಹ್ವಾನಿಸುವ ಜತೆಗೆ ಅವರು ಭಾಗವಹಿಸುವ ಅನಧಿಕೃತ ಕಟ್ಟಡವನ್ನು ಅಧಿಕೃತಗೊಳಿಸುವ ಹುನ್ನಾರ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಗೆ ಹೋಗುವ ರಸ್ತೆಯಲ್ಲಿಯೇ ಈ ಜಿಮ್‌ಖಾನ್‌ ಮೈದಾನವಿದ್ದು, ಅದು ಸಂಪೂರ್ಣ ಸರ್ಕಾರದ ಆಸ್ತಿಯಾಗಿದೆ. ಸರ್ಕಾರದ ಜಾಗವು ಸಾರ್ವಜನಿಕರ ಬಳಕೆಗೆ ಮೀಸಲಿಡುವ ಬದಲು ಕೆಲ ಸ್ಥಳೀಯ ಪಟ್ಟಭದ್ರ ಹಿತಾಸಕ್ತಿಗಳು ಆ ಸ್ಥಳದಲ್ಲಿ ಅಸೋಸಿಯೇಶನ್‌ ಮೂಲಕ ಕ್ಲಬ್‌ ಆರಂಭಿಸಿದ್ದಾರೆ ಎಂದು ಆರೋಪಿಸಿದರು.

2011ರಲ್ಲಿ . 200 ಕೋಟಿ ಬೆಲೆ ಬಾಳುವ ಮೈದಾನದಲ್ಲಿ ಕರ್ನಾಟಕ ಜಿಮ್‌ಖಾನಾ ಅಸೋಸಿಯೇಶನ್‌ ಎಂಬ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಕ್ಲಬ್‌ ತೆರೆದಿದೆ. ನಗರದ ಹೃದಯ ಭಾಗದಲ್ಲಿ ಇರುವ ಈ ಮೈದಾನವನ್ನು ಉಳಿಸಲು ಕೆಜಿಎ ವಿರುದ್ಧ 2012ರಿಂದ ನಾಗರಿಕರು ಗ್ರೌಂಡ್‌ ಬಚಾವೋ ಸಮಿತಿಯ ಅಡಿಯಲ್ಲಿ ಪ್ರತಿಭಟನೆ ನಡೆಸುತ್ತಾ ಬಂದಿದೆ. ಅಲ್ಲದೇ ನ್ಯಾಯಾಲಯದ ಮೊರೆ ಹೋಗಿತ್ತು. 2013-15ರಲ್ಲಿ ನಡುವೆ ನಡೆದ ಸತತ ಪ್ರತಿಭಟನೆಯ ಕಾರಣದಿಂದಾಗಿ ಸಾರ್ವಜನಿಕರಿಗೆ ಮೈದಾನದ ಒಳಗಡೆ ಬೆಳಗ್ಗೆ ಹಾಗೂ ಸಂಜೆ 5 ರಿಂದ 7 ಗಂಟೆ ವರೆಗೆ ವಾಕಿಂಗ್‌ ಹೋಗಲು ಅವಕಾಶ ನೀಡಲಾಗಿದೆ. ಕೋರ್ಚ್‌ನ ತಡೆಯಾಜ್ಞೆ ಇದ್ದರೂ ಈ ವಿವಾದಿತ ಸ್ಥಳದಲ್ಲಿ ರಾಷ್ಟ್ರಪತಿ ಅವರಿಗೆ ಪಾಲಿಕೆ ಮೇಯರ್‌ ಪೌರಸನ್ಮಾನ ಏರ್ಪಡಿಸಿದ್ದಾರೆ. ಕೂಡಲೇ ಸ್ಥಳ ಬದಲಾಯಿಸುವ ಮೂಲಕ ರಾಷ್ಟ್ರಪತಿ ಹುದ್ದೆಗೆ ಮೇಯರ್‌ ಗೌರವ ಸಲ್ಲಿಸಬೇಕು ಎಂದು ಆಗ್ರಹಿಸಿದರು.

Mysore Dasara 2022 ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಸಿಎಂ ಬೊಮ್ಮಾಯಿ ಘೋಷಣೆ!

ಬೆಂಗಳೂರಿನಲ್ಲಿ ನಾಲಾ ಕಬಳಿಸಿರುವ ಕಟ್ಟಡಗಳನ್ನು ನೆಲಸಮ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದಂತೆ ಹು-ಧಾ ಅವಳಿ ನಗರದಲ್ಲಿಯೂ ಅದನ್ನು ಜಾರಿಗೆ ತರಲಿ. ಬೊಮ್ಮಾಯಿ ಕೇವಲ ಪ್ರಚಾರಕ್ಕಾಗಿ ಮಾತ್ರ ಅನಧಿಕೃತ ಕಟ್ಟಡ ತೆರವುಗೊಳಿಸುವ ಹೇಳಿಕೆ ನೀಡುತ್ತಿದ್ದಾರೆ. ಹುಬ್ಬಳ್ಳಿಯ ತಮ್ಮದೆ ಮನೆಯ ರಸ್ತೆಯಲ್ಲಿನ ಜಿಮ್‌ಖಾನ್‌ ಮೈದಾನದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸುವ ಕೆಲಸ ಮಾಡಲಿ ಎಂದು ಸವಾಲು ಹಾಕಿದರು.

Follow Us:
Download App:
  • android
  • ios