ಬೆಂಗಳೂರು [ಜ.31]:  ನಗರದ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ತೆರೆದಿರುವ ಪ್ರತ್ಯೇಕ ಐಸೋಲೇಷನ್‌ ವಾರ್ಡ್‌ನಲ್ಲಿನ ಮೂಲ ಸೌಕರ್ಯ ಹಾಗೂ ಸ್ವಚ್ಛತೆ ಕೊರತೆ ಬಗ್ಗೆ ರೋಗಿ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಶಂಕಿತರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಸ್ನಾನದ ಬಕೆಟ್‌, ಸೋಪು ಸೇರಿದಂತೆ ಪ್ರತ್ಯೇಕ ಸಾಮಗ್ರಿಗಳನ್ನು ನೀಡುತ್ತಿಲ್ಲ. ಇದರಿಂದ ಸೋಂಕು ಹರಡುವ ಭೀತಿ ಎದುರಾಗಿದೆ. ಇದಲ್ಲದೆ ವಾರ್ಡ್‌ನಲ್ಲಿ ಸೊಳ್ಳೆ, ಜಿರಳೆ, ಹಲ್ಲಿಗಳ ಕಾಟ ಸಹ ಇದೆ ಎಂದು ದೂರಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜ್‌, ಡಬ್ಲ್ಯೂಎಚ್‌ಒ ನಿಯಮಾನುಸಾರ ಶಂಕಿತ ಆರೈಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಅವರು ಬಯಸಿದಂತೆ ಪ್ರತ್ಯೇಕ ವಾರ್ಡ್‌ ವ್ಯವಸ್ಥೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಪ್ರತ್ಯೇಕ ವಾರ್ಡ್‌ ಸೌಲಭ್ಯ ಬಯಸಿದ ಶಂಕಿತ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊರೋನಾ ವೈರಸ್‌ನಿಂದ ಪಾರಾಗಲು ನಮ್ಮ ಬಳಿ ಇದೆ ಉಪಾಯ!...

ವುಹಾನ್‌ ನಗರಕ್ಕೆ ಭೇಟಿ ನೀಡದ ಆರು ಶಂಕಿತರನ್ನು ಮನೆಗೆ ಕಳುಹಿಸಲಾಗಿದೆ. ಅವರನ್ನು ಮನೆಯಲ್ಲಿ ಪ್ರತ್ಯೇಕಿಸಿ ಅವರ ಅರೋಗ್ಯದ ಬಗ್ಗೆ ವಿಶೇಷ ನಿಗಾ ವಹಿಸಲಾಗುವುದು. ಉಳಿದ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದ್ದು, ಇವರಲ್ಲಿ ಒಬ್ಬರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

- ಡಾ. ನಾಗರಾಜ್‌, ನಿರ್ದೇಶಕರು, ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆ

ಬೆಂಗಳೂರಿನಲ್ಲೇ ಮಾದರಿ ಪರೀಕ್ಷೆಗೆ ವ್ಯವಸ್ಥೆ

"

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿಯನ ವೈರಲ್‌ ರಿಸರ್ಚ್ ಮತ್ತು ಡಯಾಗ್ನೋಸ್ಟಿಕ್‌ ಲ್ಯಾಬೊರೇಟರಿಯಲ್ಲಿಯೇ ಶಂಕಿತರ ರಕ್ತದ ಮಾದರಿ ಪರೀಕ್ಷೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.

- ಡಾ. ಬಿ.ಜಿ. ಪ್ರಕಾಶ್‌ ಕುಮಾರ್‌, ಸಹ ನಿರ್ದೇಶಕರು, (ಸಿಎಂಡಿ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ