Asianet Suvarna News Asianet Suvarna News

Mangaluru: ಸರಣಿ ಸಾವಿನ ಬೆನ್ನಲ್ಲೇ ಒಂದಾದ ಜಾತ್ಯಾತೀತ ಪಕ್ಷಗಳು: ಡಿಸಿ ಭೇಟಿಯಾಗಿ ಮನವಿ

ಜಿಲ್ಲೆಯ ಅಹಿತಕರ ಘಟನೆ ಹಿನ್ನೆಲೆ ಸಮಾನ ಮನಸ್ಕ ಪಕ್ಷಗಳು ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಜಾತ್ಯಾತೀತ ಪಕ್ಷಗಳ ಒಕ್ಕೂಟ ಇಂದು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. 

Send plotters responsible for communal disharmony behind bars says ramanath rai at mangaluru gvd
Author
Bangalore, First Published Aug 19, 2022, 10:10 PM IST

ಭರತ್ ರಾಜ್, ಏಷ್ಯಾನೆಟ್ ‌ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು (ಆ.19): ಜಿಲ್ಲೆಯ ಅಹಿತಕರ ಘಟನೆ ಹಿನ್ನೆಲೆ ಸಮಾನ ಮನಸ್ಕ ಪಕ್ಷಗಳು ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಜಾತ್ಯಾತೀತ ಪಕ್ಷಗಳ ಒಕ್ಕೂಟ ಇಂದು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಡಿವೈಎಫ್ಐ, ದಲಿತ ಸಂಘಟನೆಗಳ‌ ನಿಯೋಗ ಜಿಲ್ಲೆಯ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಡಿಸಿಗೆ ಮನವಿ ಮಾಡಿದೆ. ‌ಮಾಜಿ ಸಚಿವ ರಮಾನಾಥ್ ರೈ ನೇತೃತ್ವದಲ್ಲಿ ಡಿಸಿ ಭೇಟಿಯಾದ ಸರ್ವಪಕ್ಷದ ಮುಖಂಡರು, ಅಹಿತಕರ ಘಟನೆಗಳ ಹಿಂದೆ ಇರುವ ಪಿತೂರಿದಾರರ ಬಂಧನಕ್ಕೆ ಆಗ್ರಹಿಸಿದ್ದಾರೆ. 

ಜನಸಾಮಾನ್ಯರಿಗೆ ಅವರು ಯಾರೆಂದು ಗೊತ್ತಿದೆ, ಸರ್ಕಾರ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು.‌ ಆಸ್ತಿ ಮುಟ್ಟುಗೋಲು ,ಎನ್‌ಐಎ ತನಿಖೆ ಎಲ್ಲಾ ಪ್ರಕರಣಗಳಲ್ಲೂ ಆಗಬೇಕು‌. ಕಾರ್ಯಾಂಗದ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕೋಮು ದ್ವೇಷ ಪರಾಕಷ್ಟೆಗೆ ತಲುಪಿದೆ ಅಂತ ಡಿಸಿಗೆ ಮನವಿ. ಇದನ್ನು ಈಗಲೇ ಮಟ್ಟ ಹಾಕದೇ ಇದ್ರೆ ಮುಂದಿನ ದಿನ ಸಂಕಷ್ಟವಿದೆ. ಹಿಜಾಬ್ ವಿವಾದ ಆರಂಭ ಆದಾಗಲೇ ಜಿಲ್ಲಾಡಳಿತವನ್ನು ಎಚ್ಚರಿಸಿದ್ದೆವು.‌ ಆದರೆ ಇದೇ ಘಟನೆ ಮುಂದುವರೆದು ಸರಣಿ ಕೊಲೆಗೆ ಕಾರಣವಾಗಿದೆ. 

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಂತೆ ಉಳಿದ ಪ್ರಕರಣವನ್ನೂ ಪರಿಗಣಿಸಬೇಕು. ಫಾಝಿಲ್ ಮತ್ತು ಮಸೂದ್ ಮನೆಗೆ ಜಿಲ್ಲಾಧಿಕಾರಿ ಭೇಟಿ ನೀಡಬೇಕು.‌ ಕೆಲ ಕೋಮು ಕ್ರಿಮಿನಲ್ ಗಳು ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕಾದ್ರೆ ಜಿಲ್ಲಾಡಳಿತ ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಒಕ್ಕೂಟದಿಂದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರಿಗೆ ಮನವಿ ಮಾಡಲಾಯ್ತು.‌ ಇನ್ನು ಈ ಬಗ್ಗೆ ಒಕ್ಕೂಟದ ಮುಖಂಡರಿಗೆ ಜಿಲ್ಲಾಧಿಕಾರಿ ಭರವಸೆ ನೀಡಿದರು.‌ ಯಾವುದೇ ರೀತಿಯ ಕೋಮು ಸೌಹಾರ್ದ ಕದಡದಂತೆ ಕ್ರಮ ವಹಿಸಲಾಗುತ್ತೆ. 

ಸರ್ಕಾರವನ್ನು ಕೋಮುವಾದಿಗಳ ಮತ್ತು ಗೂಂಡಾಗಳ ಕೈಗೆ ಕೊಡಲಾಗಿದೆ: ಖಾದರ್ ಆಕ್ರೋಶ

ಜಿಲ್ಲಾಡಳಿತ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ. ಕೆಲವೊಂದು ತಪ್ಪುಗಳಾಗಿದ್ರೆ ಅದನ್ನೂ ಜಿಲ್ಲಾಡಳಿತ ಸರಿಪಡಿಸಲಿದೆ. ಮಸೂದ್ ಹಾಗೂ ಫಾಝಿಲ್ ಕುಟುಂಬಕ್ಕೆ ಪರಿಹಾರ ವಿಚಾರ.‌ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಬಿಡುಗಡೆ ಆಗಬೇಕು. ಮನವಿ ಸಲ್ಲಿಸಿದ್ರೆ ಸರ್ಕಾರಕ್ಕೆ ಮನವಿಯನ್ನು ಕಳುಹಿಸಲಾಗುವುದು ಎಂದಿದ್ದಾರೆ. ನಿಯೋಗದಲ್ಲಿ ಕಾಂಗ್ರೆಸ್ ‌ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಮೊಯಿದ್ದೀನ್ ಬಾವಾ, ಅಭಯಚಂದ್ರ ಜೈನ್, ಡಿವೈಎಫ್, ಸಿಪಿಎಂ ಹಾಗೂ ಜೆಡಿಎಸ್ ಮುಖಂಡರು ಭಾಗಿಯಾಗಿದ್ದರು.

ಸರ್ವ ಪಕ್ಷಗಳ ಒಕ್ಕೂಟ ದ.ಕ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲೇನಿದೆ?: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮತೀಯ ಹಿಂಸೆಯ ಘಟನೆಗಳು ಸರಣಿಯಾಗಿ ನಡೆಯುತ್ತಿವೆ. ಇದು ಅತಿರೇಕಕ್ಕೆ ತಲುಪಿ ಮೂರು ಯುವಕರ ಕೊಲೆಗಳು ನಡೆದಿರುವುದು ಜಿಲ್ಲೆಯ ಜನರು ಬೆಚ್ಚಿಬೀಳುವಂತೆ ಮಾಡಿದೆ. ಹಿಜಾಬ್ ವಿವಾದ, ದ್ವೇಷ ಭಾಷಣಗಳು, ಅನೈತಿಕ ಪೊಲೀಸ್ ಗಿರಿಯಂತಹ ಮತೀಯ ಗೂಂಡಾಗಿರಿಗಳು ಪದೇ ಪದೇ ಸಂಭವಿಸುತ್ತಿರುವಾಗಲೇ ಇದು ಅತಿರೇಕಕ್ಕೆ ತಲುಪುವ ಬಗ್ಗೆ ಜಿಲ್ಲೆಯ ಪ್ರಜ್ಞಾವಂತರು, ಜಾತ್ಯಾತೀತ ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಬಲು ಹಿಂದೆಯೇ ತೀವ್ರ ಆತಂಕ ವ್ಯಕ್ತಪಡಿಸಿದ್ದವು. 

ಆ ಸಂದರ್ಭ ಸರಕಾರ, ಜಿಲ್ಲಾಡಳಿತ ನ್ಯಾಯ ಸಮ್ಮತ ಕ್ರಮಗಳನ್ನು ಸಂವಿಧಾನದ ಆಶಯದಂತೆ ಜಾತ್ಯಾತೀತ ಮತ್ತು ಸಾಮಾಜಿಕ ನ್ಯಾಯದ ನೆಲೆಯಲ್ಲಿ ಜರುಗಿಸಿದ್ದರೆ ಇಂದು ಇಂತಹ ಪ್ರಕ್ಷುಬ್ಧ ಪರಿಸ್ಥಿತಿ ನಮ್ಮ ಕರಾವಳಿಯಲ್ಲಿ ನಿರ್ಮಾಣವಾಗುವುದನ್ನು ತಡೆಯಬಹುದಿತ್ತು. ಕೋಮು ದ್ವೇಷದ ಸರಣಿ ಕೊಲೆಗಳ ಸಂದರ್ಭ ಉದ್ವಿಗ್ನ ಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳು ಪೊಲೀಸ್ ಬಲವನ್ನು ಮಾತ್ರ ನೆಚ್ಚಿಕೊಂಡಿರುವುದು ವಿಷಾದನೀಯ. ಕೊರೋನಾ ಲಾಕ್ ಡೌನ್ ಕಾಲದ ಮಾದರಿಯಲ್ಲಿ ಜನರ ಚಲನ ವಲನಗಳನ್ನು ಬಲವಂತದಿಂದ ನಿಗ್ರಹಿಸಿ ಉದ್ವಿಗ್ನತೆಯನ್ನು ತಣಿಸಲು ಯತ್ನಿಸಿರುವುದು ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮಾರಕವಾದ ಸರ್ವಾಧಿಕಾರಿ ಧೋರಣೆಯೆಂದೇ ಹೇಳಬೇಕಾಗಿದೆ.‌ 

ಅದೇ ಸಂದರ್ಭ ಭಿನ್ನ ಕೋಮುಗಳ ನಡುವೆ ಅಪನಂಬಿಕೆಯನ್ನು ತೊಡೆದು ಹಾಕಲು, ಪರಸ್ಪರ ವಿಶ್ವಾಸ, ಸೌಹಾರ್ದತೆಯನ್ನು ಮರು ಸ್ಥಾಪಿಸಲು ಜಿಲ್ಲಾಡಳಿತ ಯಾವುದೇ ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಿರುವುದು ಎದ್ದು ಕಾಣಿಸುತ್ತಿರುವ ಲೋಪವಾಗಿದೆ. ಜಿಲ್ಲಾಡಳಿತ ವತಿಯಿಂದ ನಡೆದ ಶಾಂತಿ ಸಭೆಯು ಕೇವಲ ಕಾಟಾಚಾರಕ್ಕೆ ಕಣ್ಣೊರೆಸುವ ತಂತ್ರ ಎಂಬಂತೆ ಹೆಸರಿಗೆ ಮಾತ್ರ ನಡೆಸಿರುವುದು, ರಾಜಕೀಯ ಪಕ್ಷಗಳನ್ನು ಆಹ್ವಾನಿಸದಿರುವುದು, ಉಸ್ತುವಾರಿ ಸಚಿವರ ಸಹಿತ ಸ್ಥಳೀಯ  ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸದಿರುವುದನ್ನು ನಾವು ಖಂಡಿಸುತ್ತೇವೆ. 

ಇದು ಶಾಂತಿ ಸಭೆಯನ್ನು ನಡೆಸುವ ಸರಿಯಾದ ವಿಧಾನವೇ ಅಲ್ಲವೆಂದು ಹೇಳಬೇಕಾಗಿದೆ. ಕ್ರಿಯೆ, ಪ್ರತಿಕ್ರಿಯೆಗಳ ಹೆಸರಿನಲ್ಲಿ ನಡೆದ ಧರ್ಮಾಧಾರಿತ ಮೂರೂ ಕೊಲೆಗಳ ತನಿಖೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ನೀಡಬೇಕಾದ ಸಾಂತ್ವನ ಹಾಗೂ ಪರಿಹಾರ ವಿತರಣೆಯಲ್ಲಿ ಕಣ್ಣಿಗೆ ರಾಚುವ  ಬಹಿರಂಗ ತಾರತಮ್ಯ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ವತಿಯಿಂದ ನಡೆದಿರುವುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಾತ್ಯಾತೀತ ಪಕ್ಷಗಳು, ನಾಗರಿಕ ಸಂಘಟನೆಗಳು ಒಕ್ಕೊರಲಿನಿಂದ ಖಂಡಿಸುತ್ತವೆ. ಈ ಧರ್ಮಾಧಾರಿತ ತಾರತಮ್ಯ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಮಾತ್ರವಲ್ಲ ಇದು ಜಿಲ್ಲೆಯ ನಾಗರಿಕ ಘನತೆ, ಗೌರವಕ್ಕೆ ಕೂಡಾ ಚ್ಯುತಿ ತಂದಿದೆ. 

ಎಲ್ಲರ ಆಗ್ರಹದ ಹೊರತಾಗಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜಧರ್ಮ ಮರೆತು ಪ್ರವೀಣ್ ನೆಟ್ಟಾರು ಮನೆಗೆ ಮಾತ್ರ ಭೇಟಿ ನೀಡಿ ಸಾಂತ್ವನ ಹೇಳಿದ್ದು, ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಮಾತ್ರ ಸರಕಾರದ ವತಿಯಿಂದ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರ ವಿತರಿಸಿರುವುದು ಮಸೂದ್ ಹಾಗೂ ಫಾಝಿಲ್ ಕುಟುಂಬಗಳನ್ನು ಕಡೆಗಣಿಸಿದ್ದು, ಕರ್ನಾಟಕದಲ್ಲಿ ಎಂದೂ ನಡೆಯದ ಖೇದಕರ ವಿದ್ಯಮಾನ. ಸ್ಥಳೀಯ ಸಂಸದ, ಶಾಸಕರುಗಳು ಇದೇ ವಿಧಾನವನ್ನು ಅನುಕರಿಸಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಂವಿಧಾನದ ಆಶಯದಂತೆ ಜಿಲ್ಲಾಡಳಿತದ ಯಂತ್ರ ಚಲಿಸುವಂತೆ ನೋಡಿಕೊಳ್ಳಬೇಕಾದ ಜಿಲ್ಲಾಧಿಕಾರಿಗಳೂ ಫಾಝಿಲ್ ಹಾಗೂ ಮಸೂದ್ ರ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡದಿರುವುದು.

ಕೋಮು ಹಿಂಸಾಚಾರದಲ್ಲಿ ಮೃತಪಟ್ಟವರಿಗೆ ಸರಕಾರದ ವತಿಯಿಂದ ದೊರಕಬೇಕಾದ ಪರಿಹಾರ ಒದಗಿಸಲು ಪ್ರಯತ್ನ ನಡೆಸದಿರುವುದು ಸಂತ್ರಸ್ತರಿಗೆ ಹಾಗೂ ನಾಗರಿಕರಿಗೆ ಅತೀವ ನೋವನ್ನುಂಟು ಮಾಡಿದೆ. ಈಗಲಾದರೂ ಸಂವಿಧಾನದ ಆಶಯದಂತೆ ನಡೆದು ಇಂತಹ  ತಾರತಮ್ಯವನ್ನು ನಿವಾರಿಸಲು ಜಿಲ್ಲಾಡಳಿತದ ವತಿಯಿಂದ ತಾವು ಮುಂದಾಗಬೇಕು, ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಅವರ ದೂರುಗಳನ್ನು ಆಲಿಸಬೇಕು. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರಕಾರದ ವತಿಯಿಂದ ದೊರಕಿದ ಪರಿಹಾರ ಉಳಿದಿಬ್ಬರ ಕುಟುಂಬಗಳಿಗೆ ಒದಗಿಸಿಕೊಡಲು ನಿಯಮ ಪ್ರಕಾರ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸಬೇಕು. 

ಈ ಕುರಿತು ನಮ್ಮ ಮನವಿಯನ್ನು ಸರಕಾರಕ್ಕೆ ತಲುಪಿಸಬೇಕು ಎಂದು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇವೆ. ಹಾಗೆಯೆ, ಮೂರೂ ಕೊಲೆಗಳು ಉಂಟು ಮಾಡಿರುವ ಸಾಮಾಜಿಕ ಪರಿಣಾಮಗಳು ಒಂದೇ ರೀತಿಯದ್ದು. ಆದರೆ ತನಿಖೆ ಹಾಗೂ ಕಾಯ್ದೆ ಅಳವಡಿಸುವುದರಲ್ಲಿ ಮಸೂದ್ ಹಾಗೂ ಫಾಝಿಲ್ ಕೊಲೆ ಪ್ರಕರಣವನ್ನು ಕಡೆಗಣಿಸಲಾಗುತ್ತಿದೆ. ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಯುಎಪಿಎ ಕಾಯ್ದೆ ಅನ್ವಯಿಸಿರುವುದು ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸಿರುವುದು ಸರಕಾರ ಈ ಪ್ರಕರಣವನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿರುವುದನ್ನು ಎತ್ತಿ ತೋರಿಸುತ್ತದೆ. ಜೊತೆಗೆ ನೆಟ್ಟಾರು ಪ್ರಕರಣದ ಆರೋಪಿಗಳ ಆಸ್ತಿ ಮುಟ್ಟುಗೋಲಿನ ಕುರಿತು ಮಾತುಗಳು ಕೇಳಿಬರುತ್ತಿವೆ. 

ಅನಧಿಕೃತ ಫ್ಲೆಕ್ಸ್ ‌ನಿರ್ದಾಕ್ಷಿಣ್ಯ ತೆರವಿಗೆ ದಕ್ಷಿಣ ಕ‌ನ್ನಡ ಡಿಸಿ ಸೂಚನೆ

ಕೋಮು ಹಿಂಸಾಚಾರ ಮರುಕಳಿಸದಂತೆ ಮಾಡಲು ಇಂತಹ ದೃಢ ಕ್ರಮಗಳು ಅಗತ್ಯ ಎಂದು ಸರಕಾರ ಭಾವಿಸುವುದಾದರೆ ನಾವದನ್ನು ಸ್ವಾಗತಿಸುತ್ತೇವೆ. ಆದರೆ ಅದೇ ಸಂದರ್ಭ ಮಸೂದ್ ಹಾಗೂ ಫಾಝಿಲ್ ಕೊಲೆ ಪ್ರಕರಣವನ್ನು ಅತಿ ಸಾಮಾನ್ಯ ಪ್ರಕರಣವಾಗಿ ಪರಿಗಣಿಸಿರುವುದು ಮತ್ತು ಕಡೆಗಣಿಸಿರುವುದು  ನ್ಯಾಯೋಚಿತವಲ್ಲ. ಈ ಮೂರೂ ಕೊಲೆಗಳು ಜಿಲ್ಲೆಯ ಮತೀಯ ಸೌಹಾರ್ದಕ್ಕೆ, ಸಹಜ ಜನ ಜೀವನಕ್ಕೆ ಸಮ ಪ್ರಮಾಣದ ಘಾಸಿಯನ್ನುಂಟು ಮಾಡಿದೆ. ಫಾಝಿಲ್ ಕೊಲೆ ಪ್ರಕರಣವಂತೂ ರಾಜಕೀಯ ಬೆಂಬಲ ಪಡೆದ ಪ್ರತೀಕಾರದ ಕೊಲೆ ಎಂಬ ಮಾತುಗಳು ಕೇಳಿ ಬರುತ್ತಿದೆ. 

ಪ್ರಕರಣದಲ್ಲಿ ಬಂಧಿತರಾದವರ ಹಿನ್ನಲೆಯೂ ಅದನ್ನೇ ವ್ಯಕ್ತಪಡಿಸುತ್ತದೆ. ಪ್ರವೀಣ್ ನೆಟ್ಯಾರು ಪ್ರಕರಣದಂತೆ ಮಸೂದ್ ಹಾಗೂ ಫಾಝಿಲ್ ಕೊಲೆ ಪ್ರಕರಣದಲ್ಲೂ ಯುಎಪಿಎ ಕಾಯ್ದೆ ಅನ್ವಯಿಸಬೇಕು, ಒಟ್ಟು ಮೂರೂ ಪ್ರಕರಣವನ್ನೂ ಎನ್ಐಎ ತನಿಖೆಗೆ ಹಸ್ತಾಂತರಿಸಬೇಕು. ಆ ಮೂಲಕ ಸರಕಾರ ಕೋಮು‌ಹಿಂಸಾಚಾರದ ಪ್ರಕರಣದಲ್ಲಿ ತಾರತಮ್ಯ ಎಸಗುವುದಿಲ್ಲ ಮತ್ತು ಕೋಮು ಹಿಂಸಾಚಾರಗಳನ್ನು ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ ಎಂಬ ಸ್ಪಷ್ಟ ಸಂದೇಶ ಸಾರಬೇಕೆಂದೂ  ದಕ್ಷಿಣ ಕನ್ನಡ ಜಿಲ್ಲೆಯ ಸರ್ವ ನಾಗರಿಕರ ಪರವಾಗಿ ನಮ್ಮ ಒಕ್ಕೊರಲ ಆಗ್ರಹ. ಈ ಕುರಿತು ನಮ್ಮ ಈ ಅಭಿಪ್ರಾಯ ಹಾಗೂ ಮನವಿಯನ್ನು ರಾಜ್ಯ ಸರಕಾರಕ್ಕೆ ತಲುಪಿಸಬೇಕೆಂದು ತಮ್ಮಲ್ಲಿ ಕಳಕಳಿಯಿಂದ ವಿನಂತಿಸುತ್ತಿದ್ದೇವೆ.

Follow Us:
Download App:
  • android
  • ios