ಶಾಲೆ ಕೌಂಪೌಂಡ್‌ನಲ್ಲೇ ತಂಬಾಕು ಮಾರಿದ್ರೂ ಕೇಳೋರಿಲ್ಲ, ಹೇಳೋರಿಲ್ಲ..!
ಶಾಲಾ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಕಡ್ಡಾಯವಾಗಿ ನಿಷೇಧಿಸಿದ್ದರೂ ಶಾಲೆಯ ಆವರಣದಲ್ಲೇ ತಂಬಾಕು ಉತ್ಪನ್ನ ಮಾರಾಟ ಮಾಡುವುದು ತಿಳಿದುಬಂದಿದೆ. ಶಿವಮೊಗ್ಗದ ಭದ್ರವಾತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಕೌಂಪೌಂಡ್ ಒಡೆದು ಅಲ್ಲಿಯೇ ಅಂಗಡಿ ನಿರ್ಮಿಸಿ ತಂಬಾಕು ಉತ್ಪನ್ನ ಮಾರಲಾಗುತ್ತಿದೆ.
ಶಿವಮೊಗ್ಗ(ಆ.29): ಭದ್ರಾವತಿಯಲ್ಲಿ ಶಾಲೆಯ ಆವರಣದಲ್ಲಿಯೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಬೆಳಕಿಗೆ ಬಂದಿದೆ. ಶಾಲೆಯ ಆವರಣ ಗೋಡೆ ಒಡೆದು ಅಲ್ಲಿಯೇ ಅಂಗಡಿ ನಿರ್ಮಿಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.
ಭದ್ರಾವತಿಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ತಾಲೂಕಿನ ಅಂತರಗಂಗೆ ಗ್ರಾಪಂ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳ 100 ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಿದ್ದರು.
ಆದರೆ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಕಾಂಪೌಂಡ್ ಅಕ್ರಮವಾಗಿ ಕಬಳಿಸಿಕೊಂಡು ಆ ಜಾಗದಲ್ಲಿ ಗೂಡಂಗಡಿ ನಿರ್ಮಿಸಿಕೊಂಡು ತಂಬಾಕು ಉತ್ಪನ್ನ ಮಾರಾಟ ಮಾಡಲಾಗುತ್ತಿದೆ. ಆದರೂ ಸಹ ಸಂಬಂಧಪಟ್ಟಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಯಾವುದೇ ಕ್ರಮ ವಹಿಸಿಲ್ಲ:
ತಾಲೂಕಿನ ತಡಸ ಗ್ರಾಮದಲ್ಲಿ ಬೇಸಿಗೆ ರಜಾ ದಿನಗಳಲ್ಲಿ ಜಿ.ಕೆ ಸರ್ಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆಯ ಕಾಂಪೌಂಡ್ ಒಡೆದು ಶಾಲೆಯ ಶೌಚಾಲಯದ ಗುಂಡಿಯನ್ನು ಮುಚ್ಚಿ ಹಾಕುವ ಮೂಲಕ ಆ ಸ್ಥಳದಲ್ಲಿ ಗೂಡಂಗಡಿ ನಿರ್ಮಿಸಿಕೊಂಡಿದ್ದಾರೆ. ಈ ಸಂಬಂಧ ಶಾಲೆಯ ಮುಖ್ಯೋಪಾಧ್ಯಾಯರು ಗ್ರಾಪಂ ಅಧ್ಯಕ್ಷರಿಗೆ, ಅಭಿವೃದ್ಧಿ ಅಧಿಕಾರಿಗಳಿಗೆ ಜು.14, 2017, ಡಿ.11, 2017 ಮತ್ತು ಅ.25, 2018ರಂದು ಮನವಿ ಸಲ್ಲಿಸಿದ್ದಾರೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರಿಗೆ ಪತ್ರ ಬರೆದಿದ್ದರೂ ಸಮಸ್ಯೆ ಬಗೆಹರಿದಿಲ್ಲ.
ಶಿವಮೊಗ್ಗ: RTI ಅಡಿಯಲ್ಲಿ ಮಾಹಿತಿ ನೀಡದ ಅಧಿಕಾರಿಗೆ ದಂಡ
ಈ ನಡುವೆ ಆಮ್ ಆದ್ಮಿ ಪಾರ್ಟಿ ಸಹ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ ಆನಂದ್ ಅವರಿಗೆ ಮನವಿ ಸಲ್ಲಿಸಿದ್ದು, ಅಕ್ರಮವಾಗಿ ಕಾಂಪೌಂಡ್ ಒಡೆದು ಹಾಕಿ ಗೂಡಂಗಡಿ ನಿರ್ಮಿಸಿಕೊಂಡು ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಶುಕ್ರವಾರ ಮನವಿ ಸಲ್ಲಿಸಿದ್ದು, ತಪ್ಪಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.