ಬಳ್ಳಾರಿ(ಏ.11): ಕೊರೋನಾ ವೈರಸ್‌ ಹರಡುತ್ತಿರುವ ಭೀತಿಯಿಂದಾಗಿ ಸಾರ್ವಜನಿಕರು ಜಾಗೃತರಾಗುತ್ತಿದ್ದು, ಹೊರಗಿನವರ ಪ್ರವೇಶಕ್ಕೆ ಅವಕಾಶವಿಲ್ಲದಂತೆ ಆಯಾ ವಾರ್ಡ್‌, ರಸ್ತೆಗಳಲ್ಲಿ ಸ್ವಯಂ ನಿರ್ಬಂಧ ಹಾಕಿಕೊಳ್ಳುತ್ತಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಸ್ವಯಂ ನಿರ್ಬಂಧ ಹಾಕುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

ನಗರದ ವಡ್ಡರಬಂಡೆ, ಪಾರ್ವತಿನಗರ, ಬಸವೇಶ್ವರನಗರ, ಹವಾಂಭಾವಿ, ಕುರಿಹಟ್ಟಿ, ಕೌಲ್‌ಬಜಾರ, ರೇಡಿಯೋ ಪಾರ್ಕ್, ವಾಜಪೇಯಿ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಸಾರ್ವಜನಿಕರೇ ತಮ್ಮ ಪ್ರದೇಶಗಳಲ್ಲಿ ಕಲ್ಲುಗಳನ್ನು ಅಡ್ಡಲಾಗಿ ಇಟ್ಟು ಜನರ ಪ್ರವೇಶಕ್ಕೆ ಕಡಿವಾಣ ಹಾಕಿದ್ದಾರೆ. ನಗರದ ವಿವಿಧೆಡೆಗಳಲ್ಲಿ ಸಾರ್ವಜನಿಕರು ಜನರ ಓಡಾಟಕ್ಕೆ ನಿಯಂತ್ರಣಕ್ಕೆ ಹಾಕಿರುವ ದೃಶ್ಯಗಳು ಕನ್ನಡಪ್ರಭಕ್ಕೆ ಕಂಡು ಬಂದವು.

ಕೊರೋನಾ ಸೋಂಕಿತ ವ್ಯಕ್ತಿಯ ಹಿಂದೆ ಬಿದ್ದ ಜಿಲ್ಲಾಡಳಿತ

ಹಳ್ಳಿಯಲ್ಲಿ ಹೆಚ್ಚಿದ ಅರಿವು

ಗ್ರಾಮೀಣ ಭಾಗಗಳಲ್ಲೂ ವೈರಸ್‌ ಕುರಿತಾದ ಜಾಗೃತಿ ಹೆಚ್ಚುತ್ತಿದ್ದು, ಹೊರಗಿನವರಿಗೆ ಊರೊಳಗೆ ಪ್ರವೇಶವಿಲ್ಲ ಎಂದು ನಾಮಫಲಕ ಹಾಕುವ ಮೂಲಕ ಜನರಿಂದ ದೂರ ಇಡುತ್ತಿದ್ದಾರೆ. ಊರ ಪ್ರವೇಶ ದ್ವಾರದ ಬಳಿಯೇ ಗ್ರಾಮಸ್ಥರೇ ಬ್ಯಾರಿಕೇಡ್‌ (ಪ್ರವೇಶ ದ್ವಾರದಲ್ಲಿ ಅಡ್ಡಲಾಗಿ ಬೊಂಬು ಕಟ್ಟುವುದು) ನಿರ್ಮಿಸಿಕೊಂಡಿದ್ದು, ಗ್ರಾಮದ ಯುವಕರು ಕಾವಲು ಕಾಯುತ್ತಿದ್ದಾರೆ. ಗ್ರಾಮದಲ್ಲಿ ಹೊಸ ಮುಖಗಳು ಕಂಡು ಬಂದರೆ ಕೂಡಲೇ ಅವರನ್ನು ವಿಚಾರಿಸಲಾಗುತ್ತಿದೆ. ಊರಿಂದ ಹೊರ ಹೋಗುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡುತ್ತಿದ್ದಾರೆ. ಹಳ್ಳಿಗಳಲ್ಲಿ ಸ್ವಯಂ ನಿರ್ಬಂಧಕ್ಕೆ ಜನರು ಮುಂದಾಗಿರುವುದರಿಂದ ಭಿಕ್ಷುಕ​ರೂ ಊರಲ್ಲಿ ಸುಳಿಯಲು ಸಾಧ್ಯವಿಲ್ಲದಂತಾಗಿದೆ. ಏತನ್ಮಧ್ಯೆಯೂ ನಗರ ಪ್ರದೇಶಗಳ ಅಲ್ಲಲ್ಲಿ ಜನರ ವಿನಾಕಾರಣದ ಓಡಾಟ ಕಂಡು ಬಂದಿದ್ದು, ಇವರ ಪ್ರಮಾಣ ತೀರಾ ಕಡಿಮೆ ಎಂಬುದಷ್ಟೇ ಸಮಾಧಾನ.

ಲಾಕ್‌ಡೌನ್‌ ಮತ್ತಷ್ಟು ಬಿಗಿ

ಜಿಲ್ಲೆಯಲ್ಲಿ ಲಾಕ್‌ಡೌನ್‌ ಮತ್ತಷ್ಟು ಬಿಗಿ ಮಾಡಲಾಗುತ್ತಿದೆ. ಅನಾರೋಗ್ಯದಿಂದಾಗಿ ನಗರದ ಚಿಕಿತ್ಸಾ ಕೇಂದ್ರಗಳಿಗೆ ಬರುವವರಿಗೆ ಓಡಾಡಲು ಒಂದಷ್ಟು ವಿನಾಯಿತಿ ಸಿಗುತ್ತಿರುವುದು ಬಿಟ್ಟರೆ ಜನರ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಹೊರ ರಾಜ್ಯಗಳಿಂದ ಬರುವವರನ್ನು ನಿಯಂತ್ರಿಸಲು ಅಂತಾರಾಜ್ಯ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿದ್ದು, ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಒನ್‌ ವೇ ಮಾಡಲಾಗಿದ್ದು ನಗರಕ್ಕೆ ಸಂಪರ್ಕ ಕಲ್ಪಿಸುವ ಗಡಗಿಚನ್ನಪ್ಪ ವೃತ್ತದ ನಾಲ್ಕು ಕಡೆಗಳಲ್ಲಿ ಬಂದ್‌ ಮಾಡಲಾಗಿದ್ದು ಓಡಾಟ ಸಂಪೂರ್ಣ ನಿಯಂತ್ರಿಸುವ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.