ಬಳ್ಳಾರಿ(ಏ.11): ಕೊರೋನಾ ವೈರಸ್‌ ಸೋಂಕಿತ ವ್ಯಕ್ತಿ ಕಂಡು ಬಂದಿರುವ ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ಜನರ ಆರೋಗ್ಯ ತಪಾಸಣೆ ಕಾರ್ಯ ಮುಂದುವರಿದಿದೆ. ಸ್ಥಳೀಯವಾಗಿ ತೆರೆದಿರುವ ಫಿವರ್‌ ಕ್ಲಿನಿಕ್‌ನಲ್ಲಿ ಸ್ಥಳೀಯರಿಗೆ ತಪಾಸಣೆಯ ಸೌಕರ್ಯ ಕಲ್ಪಿಸಲಾಗಿದೆ. ವೈರಸ್‌ ಸೋಂಕಿತ ಪ್ರದೇಶ ಎಂದು ಘೋಷಣೆ ಮಾಡಿರುವ ಪ್ರದೇಶದ ಕಡೆ ಜಿಲ್ಲಾಡಳಿತ ಹೆಚ್ಚಿನ ನಿಗಾ ವಹಿಸಿದೆ.

ಏತನ್ಮಧ್ಯೆ ಗುಗ್ಗರಹಟ್ಟಿ ಪ್ರದೇಶದ ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ಸೋಂಕಿತ ವ್ಯಕ್ತಿಯ ಮೊಬೈಲ್‌ ಸಿಗ್ನಲ್‌ ಲೊಕೇಷನ್‌ ಪಡೆದು ಸೋಂಕಿತ ವ್ಯಕ್ತಿ ಓಡಾಡಿದ ಜಾಗಗಳ ಮಾಹಿತಿಯನ್ನು ಕಲೆ ಹಾಕುತ್ತಿದೆ. ಈ ಪ್ರದೇಶದಲ್ಲಿಯೇ ಹೆಚ್ಚು ಸೋಂಕು ಹರಡಿರಬಹುದು ಎಂಬ ಸಂಶಯ ಮೂಡಿದ್ದು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಆರೋಗ್ಯ ಸಮೀಕ್ಷೆಯನ್ನು ಮುಂದುವರಿಸಲಾಗಿದೆ. ಸೋಂಕಿತ ವ್ಯಕ್ತಿ ಓಡಾಡಿದ ಜಾಗಗಳು ಹಾಗೂ ದೆಹಲಿಯಿಂದ ಬಂದ ಬಳಿಕ ಯಾರಾರ‍ಯರ ಮನೆಗಳಿಗೆ ಭೇಟಿ ನೀಡಿದ್ದ ಎಂಬ ಮಾಹಿತಿಯನ್ನು ಕಲೆ ಹಾಕಲಾಗಿದ್ದು, ಈತನ ಸಂಪರ್ಕದಲ್ಲಿದ್ದ ಜನರ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಆದರೆ, ಅವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಯಾವುದೇ ಆರೋಗ್ಯ ಸಮಸ್ಯೆಯಾದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಕೊರೋನಾ ತೊಲಗಿದ ನಂತರ ವೈಯಕ್ತಿಕ ಕೆಲಸಕ್ಕೆ ರಜೆ: DySpಗೆ SP

ದೆಹಲಿಯಿಂದ ಬಂದಿರುವುದರಿಂದ ಈತನ ಮೇಲೆ ಹೆಚ್ಚು ನಿಗಾ ಇಟ್ಟಿದ್ದೇವೆ. ಇವರ ಕುಟುಂಬ ಸದಸ್ಯರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದ್ದು ಸಂಬಂಧಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ. ಗುಗ್ಗರಹಟ್ಟಿ ಪ್ರದೇಶದಲ್ಲಿ ಹೆಚ್ಚು ನಿಗಾ ವಹಿಸಿ ಕೆಲಸ ಮಾಡುತ್ತಿದ್ದೇವೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.