Asianet Suvarna News Asianet Suvarna News

500 ಕೇಜಿ ತೂಕದ ಗೇಟ್‌ ಬಿದ್ದು ಸೆಕ್ಯೂರಿಟಿ ಸಾವು

ಭಾರತೀಯ ವಿಜ್ಞಾನ ಸಂಸ್ಥೆಯ ದ್ವಾರದ 500 ಕೇಜಿ ತೂಕದ ಭಾರಿ ಗೇಟ್ ಮೈ ಮೇಲೆ ಬಿದ್ದು ಸೆಕ್ಯೂರಿಟಿ ಗಾರ್ಡ್ ಮೃತಪಟ್ಟ ದುರಂತ ಬೆಂಗಳೂರಿನಲ್ಲಿ ನಡೆದಿದೆ.

Security guard killed after 500KG gate falls on him
Author
Bengaluru, First Published Jul 1, 2019, 9:58 AM IST
  • Facebook
  • Twitter
  • Whatsapp

ಬೆಂಗಳೂರು [ಜು.1] :  ನಗರದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮುಖ್ಯ ದ್ವಾರದ ಗೇಟ್‌ ಬಿದ್ದು ಭದ್ರತಾ ಸಿಬ್ಬಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಭಾನುವಾರ ಸಂಭವಿಸಿದೆ.

ಒಡಿಶಾ ಮೂಲದ ಗೌತಮ್‌ ಬಿಸ್ವಾಲ್‌(24) ಮೃತ ಭದ್ರತಾ ಸಿಬ್ಬಂದಿ. ಘಟನೆಯಲ್ಲಿ ಬಿಹಾರ ಮೂಲದ ಅನಿಲ್‌ಕುಮಾರ್‌ ಹಾಗೂ ಒಡಿಶಾದ ವೈನಾಯಕ್‌ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಸಂಸ್ಥೆಯ ಎಂಜಿನಿಯರ್‌ ಹಾಗೂ ಗೇಟ್‌ ತಯಾರಿಸಿದ ವ್ಯಕ್ತಿಯ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಲಾಗುವುದು ಎಂದು ಸದಾಶಿವನಗರ ಠಾಣೆ ಪೊಲೀಸರು ಹೇಳಿದರು.

ಬಿಸ್ವಾಲ್‌ ಕಳೆದ ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಖಾಸಗಿ ಏಜೆನ್ಸಿ ಮೂಲಕ ಐಐಎಸ್ಸಿ ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದು, ಐಐಎಸ್ಸಿ ಸಮೀಪವೇ ಕೊಠಡಿಯೊಂದರಲ್ಲಿ ಉಳಿದುಕೊಂಡಿದ್ದರು. ಭಾನುವಾರ ಬೆಳಗ್ಗೆ 6 ಗಂಟೆಗೆ ಮೊದಲ ಪಾಳಿಯಲ್ಲಿ ಬಿಸ್ವಾಲ್‌ ಕೆಲಸಕ್ಕೆ ಬಂದಿದ್ದರು. ಮಧ್ಯಾಹ್ನ 1ರ ಸುಮಾರಿಗೆ ಐಐಎಸ್ಸಿಗೆ ವ್ಯಕ್ತಿಯೊಬ್ಬರು ಕಾರಿನಲ್ಲಿ ಬಂದಿದ್ದು, ಬಿಸ್ವಾಲ್‌ ಅವರು ಸ್ಲೈಡಿಂಗ್‌ ಗೇಟ್‌ ತೆಗೆಯಲು ಮುಂದಾಗಿದ್ದಾರೆ. ಬಳಿಕ ಗೇಟ್‌ ತೆಗೆಯುವಾಗ ಸುಮಾರು 500 ಕೆ.ಜಿ.ಯ ಗೇಟ್‌ ಏಕಾಏಕಿ ಬಿಸ್ವಾಲ್‌, ಅನಿಲ್‌ ಹಾಗೂ ವೈನಾಯಕ್‌ ಮೇಲೆ ಬಿದ್ದಿದೆ. ಅಲ್ಲಿಯೇ ಆಟೋ ನಿಲ್ದಾಣದಲ್ಲಿದ್ದ ಚಾಲಕರು ಕೂಡಲೇ ಬಂದು ಭದ್ರತಾ ಸಿಬ್ಬಂದಿ ಮೇಲೆ ಬಿದ್ದಿದ್ದ ಗೇಟ್‌ ತೆರವುಗೊಳಿಸಿದ್ದಾರೆ.

ಬಿಸ್ವಾಲ್‌ನ ಹಣೆ ಮೇಲೆ ಗೇಟ್‌ ಬಲವಾಗಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಣ್ಣಪುಟ್ಟಗಾಯಗಳಾಗಿರುವ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿಸ್ವಾಲ್‌ ಅವಿವಾಹಿತನಾಗಿದ್ದು, ಒಡಿಶಾದಲ್ಲಿರುವ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ಆರು ತಿಂಗಳ ಹಿಂದೆ ಮುಖ್ಯದ್ವಾರದಲ್ಲಿದ್ದ ಹಳೇ ಗೇಟ್‌ನ್ನು ತೆರವುಗೊಳಿಸಿ ಅನಗತ್ಯವಾಗಿ ಸುಮಾರು ಆರು ಅಡಿ ಎತ್ತರ ಹಾಗೂ 12-15 ಅಡಿ ಉದ್ದದ 500 ಕೆ.ಜಿ.ಗೂ ಹೆಚ್ಚು ತೂಕದ ಕಬ್ಬಿಣದ ಗೇಟ್‌ ಅಳವಡಿಸಲಾಗಿದೆ. ಆದರೆ, ಅಳವಡಿಸುವ ವೇಳೆ ಕಳಪೆ ಕಾಮಗಾರಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೂಡ ಭದ್ರತಾ ಸಿಬ್ಬಂದಿಯಿಂದಲೇ ಕೇಳಿ ಬಂದಿದೆ. ಗೇಟ್‌ಗೆ ಸರಿಯಾದ ಲಾಕ್‌ ಸಿಸ್ಟಂ ಹಾಕಿಲ್ಲ. ಅಲ್ಲದೆ, ಕಾಮಗಾರಿ ಕೂಡ ಸಂಪೂರ್ಣವಾಗಿ ಮುಗಿದಿಲ್ಲ. ಒಟ್ಟಾರೆ ಕಳಪೆ ಕಾಮಗಾರಿಯಿಂದಲೇ ಗೇಟ್‌ ಬಿದ್ದಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಪ್ರತಿಭಟನೆ:

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಸ್ಥೆಯಲ್ಲಿದ್ದ ಕರ್ನಾಟಕ ಸೇರಿ ನೆರೆ ರಾಜ್ಯಗಳ ಭದ್ರತಾ ಸಿಬ್ಬಂದಿ ಸಂಸ್ಥೆಯ ಆವರಣದಲ್ಲಿರುವ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಯಾವುದೇ ಭದ್ರತೆ ಇಲ್ಲ. ನಮಗೆ ನ್ಯಾಯ ಕೊಡಿಸಬೇಕು ಎಂದು ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲದೆ, ಮೃತ ದೇಹವನ್ನು ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್‌ ತಡೆದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಸಂಸ್ಥೆಯ ಭದ್ರತಾ ಉಸ್ತುವಾರಿ ವಿಭಾಗದ ಹಿರಿಯ ಅಧಿಕಾರಿಗಳು ಸೆಕ್ಯೂರಿಟಿ ಗಾರ್ಡ್‌ಗಳ ಮನವೊಲಿಸಿ ಸ್ಥಳದಿಂದ ಕಳುಹಿಸಿದರು.

ಈ ಹಿಂದೆಯೂ ದುರಂತ

ಪ್ರತಿಷ್ಠಿತ ಐಐಎಸ್‌ಸಿಯಲ್ಲಿ 2018 ಡಿ.5ರಂದು ಸಂಸ್ಥೆಯ ಆವರಣದಲ್ಲಿರುವ ಲ್ಯಾಬೋರೇಟರಿ ಫಾರ್‌ ಹೈಪರ್‌ಸೋನಿಕ್‌ ಆ್ಯಂಡ್‌ ಶಾಕ್‌ ವೇವ್‌ ರಿಸಚ್‌ರ್‍ ವಿಭಾಗದಲ್ಲಿ ಬಾಹ್ಯಾಕಾಶದ ತರಂಗಾಂತರ ಕುರಿತು ಸಂಶೋಧನೆ ವೇಳೆ ಹೈಡ್ರೋಜನ್‌ ಅನಿಲ ತುಂಬಿದ ಸಿಲಿಂಡರ್‌ ಸ್ಫೋಟಗೊಂಡು ಒಬ್ಬ ಯುವ ವಿಜ್ಞಾನಿ ಮೃತಪಟ್ಟಿದ್ದರು. ಘಟನೆಯಲ್ಲಿ ಮೂವರು ಗಾಯಗೊಂಡಿದ್ದರು. ಮೈಸೂರು ಮೂಲದ ಯುವ ವಿಜ್ಞಾನಿ ಎಂಟೆಕ್‌ ಪದವಿಧರ ಮನೋಜ್‌ ಕುಮಾರ್‌ ಮೃತಪಟ್ಟಿದ್ದರು. ಕಾರ್ತಿಕ್‌ ಶೆಣೈ, ನರೇಶ್‌ ಕುಮಾರ್‌ ಮತ್ತು ಅತುಲ್ಯ ಎಂಬುವರು ಗಾಯಗೊಂಡಿದ್ದರು.

Follow Us:
Download App:
  • android
  • ios