ಬೆಂಗಳೂರು(ಫೆ.11): ನಗರ ಪಾಲಿಕೆಗಳ ಆಸ್ತಿ ಸಂರಕ್ಷಣೆ ಹಾಗೂ ತೆರಿಗೆ ವಂಚಕರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಲು ‘ಪಾಲಿಕೆ ಭದ್ರತಾ ಪಡೆ’ ರಚಿಸುವ ವಿಚಾರ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

ಈ ಕುರಿತಂತೆ ನಿವೃತ್ತ ಸರ್ಕಾರಿ ಅಧಿಕಾರಿ ಜಿ.ಆರ್‌.ಗಾರ್ವಾಡ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಮತ್ತು ಬಿಬಿಎಂಪಿ ಆಯುಕ್ತರಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿತು.

27,000 ಜನರ ಮೇಲೆ ನಾಯಿ ದಾಳಿ, ಪರಿಹಾರ ಸಿಕ್ಕಿದ್ದು ಕೇವಲ 9 ಮಂದಿಗೆ!

ಕರ್ನಾಟಕ ಮುನ್ಸಿಪಲ್‌ ಕಾರ್ಪೋರೇಷನ್‌ ಕಾಯ್ದೆ-1976 (ಕೆಎಂಸಿ) ಸೆಕ್ಷನ್‌ 491 ಮತ್ತು 492 ಅನುಸಾರ ಎಲ್ಲ ನಗರ ಪಾಲಿಕೆಗಳ ಆಸ್ತಿ ಸಂರಕ್ಷಣೆಗೆ ಹಾಗೂ ತೆರಿಗೆ ವಂಚಕರ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಲು ಪಾಲಿಕೆ ಭದ್ರತಾ ಪಡೆ ರಚನೆ ಮಾಡಬೇಕು. ಪಡೆಯ ಅಧಿಕಾರಿಗಳಿಗೆ ಪೊಲೀಸರು ಹೊಂದಿರುವ ಅಧಿಕಾರ ನೀಡಬೇಕು. ಈ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕೆಎಂಸಿ ಕಾಯ್ದೆ ಜಾರಿಯಾಗಿ 44 ವರ್ಷ ಕಳೆದಿವೆ. ಆದರೆ, ಎಲ್ಲ ನಗರ ಪಾಲಿಕೆಗಳಲ್ಲಿ ಸೆಕ್ಷನ್‌ 491 ಮತ್ತು 492 ಹೇಳಿರುವಂತೆ ಪಾಲಿಕೆ ಭದ್ರತಾ ಪಡೆ ರಚನೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಪರಿಣಾಮ ನಗರ ಪಾಲಿಕೆಗಳ ಆಸ್ತಿ ಕಬಳಿಕದಾರರು ಮತ್ತು ತೆರಿಗೆ ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಅಲ್ಲದೆ, ಪಾಲಿಕೆ ಆಸ್ತಿ ಕಬಳಿಕೆ ಹಾಗೂ ತೆರಿಗೆ ವಂಚನೆಯ ಅಪರಾಧ ಕೃತ್ಯಗಳ ಸಂಬಂಧ ನಗರ ಪಾಲಿಕೆ ಅಧಿಕಾರಿಗಳು ಪೊಲೀಸ್‌ ಠಾಣೆಗಳಿಗೆ ದೂರು ನೀಡಬೇಕಾಗುತ್ತದೆ. ಈಗಾಗಲೇ ಆ ಪೊಲೀಸರ ಮೇಲೆ ಹೆಚ್ಚಿನ ಹೊರೆ ಮತ್ತು ಇಲಾಖೆಯಲ್ಲಿಸಿಬ್ಬಂದಿ ಕೊರತೆಯೂ ಇದೆ. ಇದರ ಪರಿಣಾಮ ಪಾಲಿಕೆ ಅಧಿಕಾರಿಗಳು ದಾಖಲಿಸುವ ದೂರುಗಳ ಬಗ್ಗೆ ಸರಿಯಾದ ತನಿಖೆ ನಡೆಯುತ್ತಿಲ್ಲ. ಆದ್ದರಿಂದ ಎಲ್ಲ ನಗರ ಪಾಲಿಕೆಗಳಲ್ಲಿ ಪಾಲಿಕೆ ಭದ್ರತಾ ಪಡೆ ರಚಿಸಲು ಮತ್ತದರ ಅಧಿಕಾರಿಗಳಿಗೆ ಪೊಲೀಸರು ಹೊಂದಿರುವ ಅಧಿಕಾರ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಪರ ವಕೀಲ ಎಸ್‌.ಉಮಾಪತಿ ವಾದ ಮಂಡಿಸಿದರು.