ಬೆಂಗಳೂರು(ಫೆ.11): ಕಳೆದ ನಾಲ್ಕು ವರ್ಷದಲ್ಲಿ ನಗರದಲ್ಲಿ ಬೀದಿ ನಾಯಿ ದಾಳಿಗೆ ಒಳಗಾದವರು ಬರೋಬ್ಬರಿ 27 ಸಾವಿರ ಮಂದಿ, ವಿಪರ್ಯಾಸವೆಂದರೆ ಈ ಪೈಕಿ ಬಿಬಿಎಂಪಿಯಿಂದ ಪರಿಹಾರ ಸಿಕ್ಕಿರುವುದು ಕೇವಲ ಒಂಬತ್ತು ಮಂದಿಗೆ!

ನಾಯಿ ಕಡಿತಕ್ಕೆ ಬಿಬಿಎಂಪಿ ಪರಿಹಾರ ನೀಡುವ ವಿಷಯ ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಬಿಬಿಎಂಪಿ ವಿಫಲವಾಗಿರುವುದು ಸಹ ಜನರು ನಾಯಿ ಕಡಿತಕ್ಕೆ ಪರಿಹಾರ ಪಡೆಯುವವರ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ.

ನಮಾಜ್‌ ವೇಳೆ ಮಿತಿ ಮೀರಿದ ಶಬ್ದ: ಲೈಸೆನ್ಸ್ ಕೇಳಿದ ಕೋರ್ಟ್

ಹೈಕೋರ್ಟ್‌ ನಿರ್ದೇಶನದ ಮೇರೆಗೆ ಬಿಬಿಎಂಪಿ 2015ರಲ್ಲಿ ಬಿಬಿಎಂಪಿ ಬೀದಿ ನಾಯಿ ಕಡಿತಕ್ಕೆ ಪರಿಹಾರ ವಿತರಣೆಗೆ ಪಾಲಿಕೆ ಕಾನೂನು ಕೋಶದ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ಮಾನದಂಡ ರೂಪಿಸಿ ಪರಿಹಾರ ಮೊತ್ತ ನಿಗದಿ ಪಡಿಸಿತ್ತು. ಮಾನದಂಡ ಹಾಗೂ ಪರಿಹಾರ ಮೊತ್ತ ನಿಗದಿಯಾದ ಬಳಿಕ 2016ರಿಂದ 2019ರ ವರೆಗೆ ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಬೀದಿ ನಾಯಿ ದಾಳಿಗೆ ಒಟ್ಟು 27,742 ಮಂದಿ ತುತ್ತಾಗಿದ್ದಾರೆ. ಅವರಲ್ಲಿ ಕೇವಲ ಒಂಬತ್ತು ಮಂದಿಗೆ ಈವರೆಗೆ ಪಾಲಿಕೆಯಿಂದ ಪರಿಹಾರ ಸಿಕ್ಕಿದೆ ಎಂಬ ಅಂಕಿ ಅಂಶ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಒಂಬತ್ತು ಮಂದಿಗೆ 10 ಲಕ್ಷ ಪರಿಹಾರ:

ಬಿಬಿಎಂಪಿ ನಾಯಿ ಕಡಿತಕ್ಕೆ ಮಾನದಂಡ ರೂಪಿಸಿದ ಬಳಿಕ 2016-17ರಲ್ಲಿ ಒಬ್ಬ ವ್ಯಕ್ತಿಗೆ ನಾಯಿ ಕಡಿತಕ್ಕೆ ಪರಿಹಾರ ಮೊತ್ತ ಹಾಗೂ ಚಿಕಿತ್ಸಾ ವೆಚ್ಚ ಸೇರಿ ಒಟ್ಟು .70,430 ನೀಡಿದೆ. 2017-18ರಲ್ಲಿ ಮೂರು ಮಂದಿಗೆ .60,645, 2018-19ರಲ್ಲಿ ವಿಭೂತಿಪುರದಲ್ಲಿ ಪ್ರವೀಣ್‌ ಎಂಬ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿಯಿಂದ ಸಾವನಪ್ಪಿದ್ದ. ಆ ಕುಟುಂಬಕ್ಕೆ ಪರಿಹಾರ ಮೊತ್ತ ಹಾಗೂ ಆಸ್ಪತ್ರೆಯ ವೆಚ್ಚ ಸೇರಿ .8,42,963, 2019-20ರ ಪ್ರಸಕ್ತ ಸಾಲಿನಲ್ಲಿ ಒಟ್ಟು 4 ಮಂದಿಗೆ .75,280 ಸೇರಿದಂತೆ ಈವರೆಗೆ ಬಿಬಿಎಂಪಿ .10.49 ಲಕ್ಷ ಪರಿಹಾರ ಹಾಗೂ ಚಿಕಿತ್ಸಾ ವೆಚ್ಚವನ್ನು ಪಾಲಿಕೆ ಭರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾಯಿ ಕಡಿತ ಪರಿಹಾರದ ಬಗ್ಗೆ ಮಾಹಿತಿ ಇಲ್ಲ:

ಹೈಕೋರ್ಟ್‌ ನಿರ್ದೇಶನದ ಮೇರೆಗೆ ಬಿಬಿಎಂಪಿ ನಾಯಿ ಕಡಿತಕ್ಕೆ ಪರಿಹಾರ ನೀಡುವುದಕ್ಕೆ ಮಾರ್ಗಸೂಚಿ ಸಿದ್ಧಪಡಿಸಿತ್ತು. ಆದರೆ, ಸಾರ್ವಜನಿಕರಿಗೆ ನಾಯಿ ಕಡಿತಕ್ಕೆ ಬಿಬಿಎಂಪಿ ಪರಿಹಾರ ನೀಡಲಿದೆ ಎಂಬ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ. ಹಾಗಾಗಿ, ಹೆಚ್ಚಿನ ನಾಯಿ ಕಡಿತ ಪ್ರಕರಣ ದಾಖಲಾದರೂ ಪರಿಹಾರ ಪಡೆದವರ ಸಂಖ್ಯೆತೀರಾ ಕಡಿಮೆಯಾಗಿದೆ. ಪಾಲಿಕೆ ಅಧಿಕಾರಿಗಳು ನಾಯಿ ಕಡಿತಕ್ಕೆ ಪರಿಹಾರ ನೀಡಲಿದೆ ಎಂಬುದರ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಆದರೆ, ಆ ಕಾರ್ಯವನ್ನು ಮಾಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

1 ಲಕ್ಷ ವರೆಗೆ ಪರಿಹಾರ:

ನಾಯಿ ಕಡಿತದಿಂದ ತರಚಿದ ಗಾಯವಾದರೆ ಪ್ರತಿ ಗಾಯಕ್ಕೆ .2 ಸಾವಿರ, ಆಳವಾದ ಗಾಯವಾದ ಗಾಯಕ್ಕೆ .3 ಸಾವಿರ, ಗಾಯಗಳ ಸಂಖ್ಯೆ ಹೆಚ್ಚಾಗಿದ್ದರೆ .10 ಸಾವಿರ ಪರಿಹಾರ ಹಾಗೂ ಬಿಬಿಎಂಪಿಯೇ ಚಿಕಿತ್ಸಾ ವೆಚ್ಚ ಭರಿಸುವುದು. ಒಂದು ವೇಳೆ ನಾಯಿ ಕಚ್ಚಿ ಮಕ್ಕಳು ಅಸುನೀಗಿದರೆ .50 ಸಾವಿರ ಹಾಗೂ ವ್ಯಕ್ತಿ ಸಾವನಪ್ಪಿದರೆ .1 ಲಕ್ಷ ಪರಿಹಾರ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಪ್ರಕಟಿಸಿತ್ತು.

ಪರಿಹಾರ ಪಡೆಯುವ ವಿಧಾನ

ಬೀದಿ ನಾಯಿ ದಾಳಿಗೆ ಒಳಗಾದ ಸಂತ್ರಸ್ತರಿಗೆ ಮಾತ್ರ ಬಿಬಿಎಂಪಿ ಪರಿಹಾರ ನೀಡಲಿದೆ. ನಿರ್ದಿಷ್ಟಅರ್ಜಿ ನಮೂನೆಯನ್ನು ಭರ್ತಿ ಮಾಡಿ ಬಿಬಿಎಂಪಿ ಪಶುಪಾಲನಾ ವಿಭಾಗಕ್ಕೆ ಸಲ್ಲಿಸಬೇಕು. ಅರ್ಜಿಯಲ್ಲಿ ಹೆಸರು, ವಯಸ್ಸು, ಫೋಟೋ, ವಿಳಾಸ, ನಾಯಿ ದಾಳಿ ನಡೆದ ಸ್ಥಳ, ವೈದ್ಯಕೀಯ ಚಿಕಿತ್ಸೆಯ ಸಂಪೂರ್ಣ ದಾಖಲೆಗಳ ವಿವರವನ್ನು ನಿಗದಿತ ಅವಧಿಯಲ್ಲಿ ನೀಡಬೇಕು. ಬಳಿಕ ಪಶುಪಾಲನಾ ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ನೀಡಲಿದ್ದಾರೆ. ಅರ್ಜಿ ನಮೂನೆ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ನಾಯಿ ಕಡಿತ ವಿವರ

ವರ್ಷ ನಾಯಿ ಕಡಿತ ಸಂಖ್ಯೆ

2016 7,905

2017 7,564

2018 5,988

2019 5,785

ಒಟ್ಟು 27,742

ಪಾಲಿಕೆಯಿಂದ ನಾಯಿ ಕಡಿತಕ್ಕೆ ಪರಿಹಾರ ಪಡೆದ ವಿವರ

ವರ್ಷ ನಾಯಿ ಕಡಿತ ಸಂಖ್ಯೆ ಪರಿಹಾರ, ಚಿಕಿತ್ಸಾ ವೆಚ್ಚ(ರು.)

2016-17 01 70,430

2017-18 03 60,645

2018-19 01 8,42,963

2019-20 04 75,280

ಒಟ್ಟು 09 10,49,318

ನಾಯಿ ಕಡಿತಕ್ಕೆ ಒಳಗಾದ ಕೆಲವೇ ಸಂತ್ರಸ್ತರಿಗೆ ಮಾತ್ರ ಬಿಬಿಎಂಪಿಯಿಂದ ಪರಿಹಾರ ಸಿಕ್ಕಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

-ವಿಶ್ವನಾಥ ಮಲೇಬೆನ್ನೂರು