Raichur: ತುಂಗಭದ್ರಾ ಕಾಲುವೆಯಲ್ಲಿ ರಾತ್ರಿ ವೇಳೆ ನೀರು ಕಳ್ಳತನ: ಸುತ್ತಮುತ್ತ 144 ಸೆಕ್ಷನ್ ಜಾರಿ
ತುಂಗಭದ್ರಾ ಕಾಲುವೆ ನೀರಿಗಾಗಿ ಇಂದು ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ರೈತರು ಪಕ್ಷಬೇಧ ಮರೆತು ಪ್ರತಿಭಟನೆ ನಡೆಸಿದರು. ಕಳೆದ 15 ದಿನಗಳಿಂದ ಕಾಲುವೆ ನೀರಿಗಾಗಿ ರೈತರು ಪ್ರತಿಭಟನೆ ನಡೆಸಿದ್ರು ಅಧಿಕಾರಿಗಳು ಕೇರ್ ಮಾಡಿರಲಿಲ್ಲ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಡಿ.31): ತುಂಗಭದ್ರಾ ಕಾಲುವೆ ನೀರಿಗಾಗಿ ಇಂದು ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ರೈತರು ಪಕ್ಷಬೇಧ ಮರೆತು ಪ್ರತಿಭಟನೆ ನಡೆಸಿದರು. ಕಳೆದ 15 ದಿನಗಳಿಂದ ಕಾಲುವೆ ನೀರಿಗಾಗಿ ರೈತರು ಪ್ರತಿಭಟನೆ ನಡೆಸಿದ್ರು ಅಧಿಕಾರಿಗಳು ಕೇರ್ ಮಾಡಿರಲಿಲ್ಲ. ಹೀಗಾಗಿ ಇಂದು ಸಿರವಾರ ಪಟ್ಟಣದ ರಾಜ್ಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ಹೊರಹಾಕಿ, ರಕ್ತದಲ್ಲಿ ಪತ್ರ ಬರೆದು ಸಿಎಂಗೆ ರವಾನಿಸಿದ್ರು. ರೈತರ ಆಕ್ರೋಶ ಹೆಚ್ವಾಗುತ್ತಿರುವ ಹಿನ್ನೆಲೆಯಲ್ಲಿ ಈಗ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. 144 ಜಾರಿ ಇದ್ರೂ ತುಂಗಭದ್ರಾ ಎಡದಂಡೆಯ ಕಾಲುವೆಯಿಂದ ಆಗುತ್ತಿರುವ ನೀರಿನ ಕಳ್ಳತನವನ್ನ ತಪ್ಪಿಸಲು ಅಧಿಕಾರಿಗಳು ದಿಢೀರ್ ಭೇಟಿಗೆ ಮುಂದಾಗಿದ್ದಾರೆ.
ತುಂಗಭದ್ರಾ ಕಾಲುವೆಯ 104 ಮೈಲ್‌ಗೆ ಮಸ್ಕಿ ತಹಸೀಲ್ದಾರ್ ಭೇಟಿ: ತುಂಗಭದ್ರಾ ಕಾಲುವೆ ಮೇಲ್ಭಾಗದ ರಾಯಚೂರು ಜಿಲ್ಲೆಯ ಮಸ್ಕಿ, ಸಿಂಧನೂರು ಭಾಗದಲ್ಲಿ ನೀರು ಕಳ್ಳತನವಾಗುತ್ತೆ ಎಂಬ ಆರೋಪವಿದೆ. ಇದರಿಂದಾಗಿ ರಾಯಚೂರು ಜಿಲ್ಲಾಡಳಿತ ತುಂಗಭದ್ರಾ ಎಡದಂಡೆ ಕಾಲುವೆ ಸುತ್ತಮುತ್ತ 144 ಜಾರಿ ಮಾಡಿ ಕಾಲುವೆ ನೀರು ಬಿಡುಗಡೆ ಮಾಡುತ್ತಾರೆ. ಈ ವರ್ಷವೂ ಸಹ ಕಾಲುವೆ ಸುತ್ತಮುತ್ತ 144 ಜಾರಿ ಮಾಡಿದ್ದಾರೆ.
ನಿಧಿ ಪಡೆಯುವ ಆಸೆಯಿಂದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬಾವಿ ತೋಡಿದ ಅನ್ಯಕೋಮಿನ ಖದೀಮರು
ಆದ್ರೂ ಕಾಲುವೆಯಲ್ಲಿ ನೀರಿನ ಕಳ್ಳತನ ತಡೆಯಲು ಆಗಿಲ್ಲ. ಹೀಗಾಗಿ ಕೆಳಭಾಗದ ರೈತರು ನಮ್ಮ ಬೆಳೆಗಳು ಒಣಗಿ ಹೋಗುತ್ತಿವೆ. ಕಾಲುವೆಯಲ್ಲಿ ನೀರು ಬರುತ್ತಿಲ್ಲವೆಂದು ಪ್ರತಿಭಟನೆ ನಡೆಸಿದರು. ಹೀಗಾಗಿ ಕಾಲುವೆ ನೀರಿನ ಮಟ್ಟ ಮತ್ತು ಕಳ್ಳತನ ತಪ್ಪಿಸಲು ಮಸ್ಕಿ ತಹಸೀಲ್ದಾರ್ ಕವಿತಾ ಮತ್ತು ಅಧಿಕಾರಿಗಳ ತಂಡ ರಾತ್ರಿ ವೇಳೆ ಕಾಲುವೆಯ 104 ಮೈಲ್ ಸುತ್ತಮುತ್ತ ಗಸ್ತು ತಿರುಗಿ ನೀರಿನ ಮಟ್ಟ ಪರಿಶೀಲನೆ ನಡೆಸಿದರು. ಅಷ್ಟೇ ಅಲ್ಲದೇ ಕಾಲುವೆಯ ಗಸ್ತಿಗಾಗಿ ನಿಯೋಜನೆಗೊಂಡ ಸಿಬ್ಬಂದಿಗೆ ನೀರಿನ ಕಳ್ಳತನ ಆಗದಂತೆ ಸೂಚನೆ ನೀಡಿದರು.
ರಾತ್ರಿ ವೇಳೆ ಕಾಲುವೆಗೆ ಭೇಟಿ ನೀಡಿದ ಮಸ್ಕಿ ತಹಸೀಲ್ದಾರ್ ಕವಿತಾ: ತುಂಗಭದ್ರಾ ಕಾಲುವೆ ನೀರಿಗಾಗಿ ರಾಯಚೂರು ಜಿಲ್ಲೆಯಲ್ಲಿ ರೈತರ ಹೋರಾಟ ಜೋರಾಗಿದ್ದು, ಕೆಳಭಾಗದ ರೈತರ ಕಾಲುವೆಗೆ ನೀರು ಹರಿಸಲು ಮೇಲ್ಭಾಗದ ನೀರಿನ ಕಳ್ಳತನ ತಪ್ಪಿಸಲು ಅಧಿಕಾರಿಗಳ ತಂಡ ನಾನಾ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿ ರಾತ್ರಿ ವೇಳೆ ಮಸ್ಕಿ ತಹಸೀಲ್ದಾರ್ ಕವಿತಾ ಕಾಲುವೆಗೆ ಭೇಟಿ ನೀಡಿ ಕಾಲುವೆಯಲ್ಲಿ ನೀರಿನ ಮಟ್ಟ ಪರಿಶೀಲನೆ ಮಾಡಿದ್ರು.
ಅಷ್ಟೇ ಅಲ್ಲದೇ ಕಾಲುವೆಯ ಸುತ್ತಮುತ್ತ ಓಡಾಟ ಮಾಡಿ ಗಸ್ತು ತಿರುಗುವ ಸಿಬ್ಬಂದಿ ಖಡಕ್ ಸೂಚನೆ ನೀಡಿದ್ರು. ಕಾಲುವೆಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗದಂತೆ ನೋಡಿಕೊಳ್ಳಬೇಕು. ಕಾಲುವೆಯ ನೀರು ಕಳ್ಳತನಕ್ಕೆ ಯಾರಾದರೂ ಯತ್ನಿಸಿದ್ರೆ ಅಂತವರನ್ನ ಬಂಧಿಸಿ ಅಂತ ಸೂಚನೆ ನೀಡಿದ್ರು. ಇನ್ನೂ ಕಾಲುವೆ ಬಳಿ ರಾತ್ರಿ ವೇಳೆ ಮಹಿಳಾ ಅಧಿಕಾರಿ ಬಂದಿರುವುದು ನೋಡಿ ಸಿಬ್ಬಂದಿ ಕೆಲಕಾಲ ಗಾಬರಿಗೊಂಡರು.
ಹನುಮಪ್ಪ-ಮುಲ್ಲಾಸಾಬ್ ನಡುವಿನ ಚುನಾವಣೆ: ಸಿ.ಟಿ.ರವಿ
ಒಟ್ಟಿನಲ್ಲಿ ತುಂಗಭದ್ರಾ ಕಾಲುವೆಯ ಮೇಲ್ಭಾಗದಲ್ಲಿ ನಡೆಯುವ ನೀರಿನ ಕಳ್ಳತನ ತಪ್ಪಿಸಿ, ಕೆಳಭಾಗದ ರೈತರಿಗೆ ನೀರು ತಲುಪಿಸಲು ರಾಯಚೂರು ಜಿಲ್ಲಾಡಳಿತ ನಾನಾ ಕಸರತ್ತು ನಡೆಸುತ್ತಿದೆ. ಆದ್ರೂ ಖದೀಮರು ಮಾತ್ರ ವಾಮಾಮಾರ್ಗದ ಮುಖಾಂತರ ನೀರಿಗೆ ಕನ್ನ ಹಾಕುವ ದಂಧೆ ಮಾತ್ರ ಬಿಡುತ್ತಿಲ್ಲ. ಹೀಗಾಗಿ ಕೆಳಭಾಗದ ತುಂಗಭದ್ರಾ ಎಡದಂಡೆಯ ಕಾಲುವೆ ರೈತರು ನೀರಿಗಾಗಿ ಪರದಾಟ ನಡೆಸಿದ್ದಾರೆ.