Asianet Suvarna News Asianet Suvarna News

Uttara Kannada: ನಿಧಿ ಪಡೆಯುವ ಆಸೆಯಿಂದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬಾವಿ ತೋಡಿದ ಅನ್ಯಕೋಮಿನ ಖದೀಮರು

ಅದು ಕಾಡು ಪ್ರಾಣಿಗಳು ಓಡಾಡುವಂತಹ ದಟ್ಟ ಕಾಡು. ರಿಸರ್ವ್ ಫಾರೆಸ್ಟ್ ಎಂದು ಗುರುತಿಸಲಾಗುತ್ತಿದ್ದ ಈ ಕಾಡಿನ ವ್ಯಾಪ್ತಿ ಬಳಿ ಓಡಾಡೋಕೆ ಸ್ಥಳೀಯರು ಕೂಡಾ ಹಿಂಜರಿಯುತ್ತಿದ್ರು. ಆದ್ರೆ, ಆ ಖದೀಮರು ಮಾತ್ರ ಕಳೆದೊಂದು ವಾರದಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಆ ಪ್ರದೇಶದಲ್ಲಿ ಒಂದೇ ಸವನೆ ಬಾವಿ ತೋಡಲು ಆರಂಭಿಸಿದ್ರು. 

Four Arrested For Illegally Digging The Well In The Forest at Karwar gvd
Author
First Published Dec 30, 2022, 11:29 PM IST

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಡಿ.30): ಅದು ಕಾಡು ಪ್ರಾಣಿಗಳು ಓಡಾಡುವಂತಹ ದಟ್ಟ ಕಾಡು. ರಿಸರ್ವ್ ಫಾರೆಸ್ಟ್ ಎಂದು ಗುರುತಿಸಲಾಗುತ್ತಿದ್ದ ಈ ಕಾಡಿನ ವ್ಯಾಪ್ತಿ ಬಳಿ ಓಡಾಡೋಕೆ ಸ್ಥಳೀಯರು ಕೂಡಾ ಹಿಂಜರಿಯುತ್ತಿದ್ರು. ಆದ್ರೆ, ಆ ಖದೀಮರು ಮಾತ್ರ ಕಳೆದೊಂದು ವಾರದಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಆ ಪ್ರದೇಶದಲ್ಲಿ ಒಂದೇ ಸವನೆ ಬಾವಿ ತೋಡಲು ಆರಂಭಿಸಿದ್ರು. ಬಾವಿಯೊಳಗೂ ಕೆಲವು ಗುರುತುಗಳನ್ನು ಮಾಡಿಕೊಂಡು ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಅಷ್ಟಕ್ಕೂ ಆ ದಟ್ಟ ಕಾಡಿನೊಳಗೆ ಅವರು ಬಾವಿ ತೋಡಿದ್ಯಾಕೆ..? ಅವರು ಹುಡುಕಾಟ ನಡೆಸಿದ್ದಾದ್ರೂ ಏನು ? ಅಂತಾ ತಿಳ್ಕೋಬೇಕಾದ್ರೆ ಈ ಸ್ಟೋರಿ ನೋಡಿ. 

ಕ್ರೂರ ಪ್ರಾಣಿಗಳು ಓಡಾಡುವಂತಹ ಆ ರಿಸರ್ವ್ ಫಾರೆಸ್ಟ್ ಪ್ರದೇಶದ ಬಳಿ ಸ್ಥಳೀಯರು ಕೂಡಾ ಸಾಕಷ್ಟು ಜಾಗ್ರತೆಯಲ್ಲಿ ಓಡಾಡುತ್ತಿದ್ದರು. ಆದರೆ, ಕಳೆದೊಂದು ವಾರದಿಂದ ಆ ಅರಣ್ಯದ ಗುಡ್ಡ ಪ್ರದೇಶದಲ್ಲಿ ಸೈಲೆಂಟಾಗಿ ಸಾಕಷ್ಟು ಕಾರ್ಯಾಚರಣೆಗಳು ನಡೆಯುತ್ತಿತ್ತು. ಅಲ್ಲಿಗೆ ಬಂದಿದ್ದ ಆ ನಾಲ್ವರು ಖದೀಮರು ಯಲ್ಲಾಪುರದಿಂದ ಅರ್ಚಕರೊಬ್ಬರನ್ನು ಕರೆಯಿಸಿ ಸ್ಥಳದಲ್ಲಿ ವಾಮ ಪೂಜೆಗಳನ್ನು ಮಾಡಿಸಿದ್ದರು.‌ ಹತ್ತಿರದಲ್ಲಿದ್ದ ನಾಗನ‌ ಹುತ್ತಕ್ಕೆ ಪೂಜೆ, ಸ್ಥಳದಲ್ಲಿ ಬಂಡೆ ಕಲ್ಲಿಗೆ ಹಳದಿ, ಕುಂಕುಮ, ನಿಂಬೆ ಹಣ್ಣಿನ ಮಾಲೆ, ಕೆಂಪು ಬಟ್ಟೆಯ ತುಂಡು, ಬಳೆ, ಮೊಳಕೆಯೊಡೆದ ತೆಂಗಿನ ಕಾಯಿ, ದೀಪಗಳನ್ನಿಟ್ಟು ವಾಮ ಮಾರ್ಗದಲ್ಲಿ ದೇವಿಯ ಆರಾಧನೆ ಮಾಡಲಾಗಿತ್ತು. 

Tumakuru: ಮಂತ್ರಿಸಿದ 123 ಕುಂಬಳಕಾಯಿಯಿಂದ ಎಚ್‌ಡಿಕೆಗೆ ದೃಷ್ಟಿ ತೆಗೆದ ಕಾರ‍್ಯಕರ್ತರು

ಹದ್ದಿನ ದೊಡ್ಡ ಪುಕ್ಕವನ್ನಿಟ್ಟು ಸ್ತಂಭನ ಮಂತ್ರದ ಪ್ರಯೋಗ ಮಾಡಲಾಗಿತ್ತು. ಅಲ್ಲದೇ, ಪಕ್ಕದಲ್ಲೇ ದೊಡ್ಡ ಬಾವಿಯನ್ನು ಕೂಡಾ ತೋಡಲಾಗಿತ್ತು. ಇವುಗಳನ್ನು ನೋಡಿದವರಿಗೆ ಮನಸ್ಸಿನ ಮೂಲೆಯಲ್ಲಿ ಒಮ್ಮೆಗೆ ಸಣ್ಣಗೆ ನಡುಕ ಕಾಣಿಸಿಕೊಂಡರೂ, ಇಲ್ಲಿ ಏನೋ ನಡೆದಿದೆ ಅನ್ನೋ ಅನುಮಾನಗಳು ಬರುವುದಂತೂ ಖಂಡಿತ. ಅಷ್ಟಕ್ಕೂ ಈ ದೃಶ್ಯಗಳು ಕಂಡು ಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೇಳೂರು ಸಂರಕ್ಷಿತ ಅರಣ್ಯ ಪ್ರದೇಶ ಜಾಂಬಾದಲ್ಲಿ. ಹೌದು, ಜಾಂಬಾದ ಈ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದ ಹಿಂದೆ ಅಮವಾಸ್ಯೆಯ ದಿನ ಅನ್ಯಕೋಮಿಗೆ ಸೇರಿರುವ ಹಿದಾಯತ್ ಅಬ್ದುಲ್ ಘನಿ (43), ರಸ್ತುಂ ರಜಾಕ್ ಸಾಬ್(53), ಹರ್ಷದ್ ಅಲಿ ಹೈದರ್ (21), ಸರ್ಫರಾಜ್ ಹಬೀಬುಲ್ಲಾ (25) ಸೇರಿಕೊಂಡು ನಿಧಿಗಾಗಿ ಬಾವಿ ತೋಡಿದ್ದರು. 

ಮೂಲತಃ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯವರಾಗಿರುವ ಈ ಖದೀಮರು, ಕಳೆದ ಹಲವು ವರ್ಷಗಳಿಂದ ಗುಜರಿ ಮಾರಿಕೊಂಡು ಕಾರವಾರದ ಶಿರವಾಡದಲ್ಲಿ ನೆಲೆಸಿದ್ದರು. ಆದರೆ, ಇತ್ತೀಚೆಗೆ ಮಾತ್ರ ಜಾಂಬಾಕ್ಕೆ ಬೈಕ್ ಮೂಲಕ ತೆರಳುತ್ತಿದ್ದ ಈ ಆರೋಪಿಗಳು ಇಲ್ಲಿನ ಗುಡ್ಡದ ಮೇಲೆ ಹತ್ತಿ ಭರಣಿ ಮರದ ಬಳಿ ಬಂಡೆ ಕಲ್ಲಿಗೆ ಹೋಮ‌ ಹವನ ಹಾಕಿಸಿ ದೊಡ್ಡ ಪೂಜೆ ಮಾಡಿದ್ದಾರೆ. ನಂತರ ಈ ಮರದ ಅಡಿಯಲ್ಲೇ ಸುಮಾರು ‌15 ರಿಂದ 20 ಅಡಿ ಆಳದ ಬಾವಿ ತೋಡಿದ್ದಾರೆ. ಹಲವು ದಿನಗಳಿಂದ ಗುಡ್ಡದ ತಳಭಾಗದಲ್ಲಿ ಬೈಕ್ ನಿಂತಿರುವುದನ್ನು ಕಂಡ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

ಮಾಹಿತಿ ಆಧರಿಸಿ ಗುಡ್ಡದಲ್ಲಿ ಹುಡುಕಾಡಿಕೊಂಡು ತೆರಳಿದ ಅಧಿಕಾರಿಗಳಿಗೆ ಈ ಖದೀಮರು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಸ್ಥಳ ಪರೀಕ್ಷಣೆ ನಡೆಸಿದಾಗ ಬಂಡೆ ಮೇಲೆ ಹದ್ದಿನ ರೆಕ್ಕೆಯಿಟ್ಟು ಪೂಜೆ, ಬಾವಿ ಪಕ್ಕದಲ್ಲಿ ಹಾವಿನ ಹುತ್ತಕ್ಕೆ ಪೂಜೆ, ಗಿಡದ ಬೇರೊಂದಕ್ಕೆ ಪೂಜೆ ಮಾಡಿರುವುದು ಹಾಗೂ ಇಲ್ಲಿ ದೊಡ್ಡ ಬಾವಿ ತೋಡಿರುವುದು ಕಂಡು ಬಂದಿದೆ. ಇದರಿಂದ ಇದು ನಿಧಿಗಾಗಿಯೇ ನಡೆಸಿದ ಕೃತ್ಯ ಎಂದು ಅಧಿಕಾರಿಗಳಿಗೆ ಅನುಮಾನ ಮೂಡಿದೆ. ರೆಡ್ ಹ್ಯಾಂಡಾಗಿ ಸಿಕ್ಕಿದ ಖದೀಮರನ್ನು ತನಿಖೆ ಮಾಡಿದಾಗ ರುಸ್ತುಂ ಎಂಬಾತ ತನ್ನ ಮೈ ಮೇಲೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವಿ ಬರುತ್ತಾಳೆ ಎಂದು ತಿಳಿಸಿದ್ದಾನೆ. 

ಆ ದೇವಿಯು ಇವನ ಕನಸಲ್ಲಿ ಬಂದು ಈ ಜಾಗದಲ್ಲಿ ನಾನು ನೆಲೆಸಿದ್ದೇನೆ. ನೀನು ಬಂದು ಇಲ್ಲಿ ಬಾವಿ ತೋಡು ಅಲ್ಲಿ ಪವಿತ್ರ ಗಂಗಾಜಲ ಸಿಗುತ್ತೆ. ಅದನ್ನು ಪೂಜೆ ಮಾಡಿದ ಕಲ್ಲಿಗೆ ಸಿಂಪಡನೆ ಮಾಡು. ನಂತರದಲ್ಲಿ ಈ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಈ ಜಲವನ್ನು ಅವರ ಮೇಲೆ ಹಾಕಿದರೆ ಸಾಕು ಅವರ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ. ಮುಂದೆ ಈ ಕ್ಷೇತ್ರದ ಧಾರ್ಮಿಕ ಕ್ಷೇತ್ರವಾಗಿ ಬೆಳೆಯುತ್ತದೆ ಎಂದು ಕನಸು ಬಿದ್ದಿದೆ‌. ಅದಕ್ಕಾಗಿ ಬಾವಿ ತೋಡುತ್ತಿದ್ದೇವೆ. ಯಾವುದೇ ಮರಗಿಡಗಳನ್ನು ತುಂಡು ಮಾಡಿಲ್ಲ ಎಂದು ಕಥೆ ಕಟ್ಟಿ ಅಧಿಕಾರಿಗಳ ಮುಂದೆ ತಿಳಿಸಿದ್ದಾನೆ. 

ಆದರೆ, ಸ್ಥಳದಲ್ಲಿರುವ ದೃಶ್ಯಗಳು ಸಂಪೂರ್ಣವಾಗಿ ವಿರುದ್ಧವಾಗಿದ್ದು, ಕಲ್ಲಿಗೆ ಪೂಜೆ, ನಾಗಪೂಜೆ, ತೋಡಿದ ಬಾವಿಯಲ್ಲಿ ಪ್ರತಿ ಐದು ಅಡಿಗೆ ದೀಪ ಇಟ್ಟು ಪೂಜೆ, ಅನ್ಯಕೋಮಿನವರ ಹುಡುಕಾಟದಲ್ಲಿ ಹಿಂದೂ ಅರ್ಚಕರ ಪೂಜೆ ಮುಂತಾದವುಗಳು ಇದು ನಿಧಿಗಾಗಿ ನಡೆಸಿದ ಹುಡುಕಾಟವೇ ಎಂದು ಸಾಭೀತುಪಡಿಸುವಂತಿದೆ. ಮೀಸಲು ಅರಣ್ಯಕ್ಕೆ ಅಕ್ರಮ ಪ್ರವೇಶ, ಗಿಡಗಳ ನಾಶ ಹಾಗೂ ಬಾವಿ ತೋಡಿರುವ ಹಿನ್ನೆಲೆ ಆರೋಪಿಗಳನ್ನು ವಶಕ್ಕೆ ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ, ಯಲ್ಲಾಪುರದ ಅರ್ಚಕರು ಅರಣ್ಯಾಧಿಕಾರಿಗಳ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದು, ಆತನಿಗಾಗಿಯೂ  ಹುಡುಕಾಟ ಮುಂದುವರಿದಿದೆ. ಆದರೆ, ಈ ಪ್ರಕರಣ ಸಾಕಷ್ಟು ಸಂಶಯಗಳಿಗೆ ಕಾರಣವಾಗಿದೆ. ಸ್ಥಳದಲ್ಲಿ ಈ ಹಿಂದೆ ಪ್ರಾಣಿ ಬಲಿ ನೀಡಿದ್ದಾರಾ...? 

ಸಮುದಾಯವನ್ನು ಮಂಗ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ: ಎಚ್‌.ಡಿ.ಕುಮಾರಸ್ವಾಮಿ

ಈ ನಾಲ್ವರ ಜತೆ ಇನ್ನಷ್ಟು ಜನರ ಗ್ಯಾಂಗ್ ಕೂಡಾ ಸೇರಿಕೊಂಡಿದ್ಯಾ? ಮುಂತಾದ ಹಲವು ಪ್ರಶ್ನೆಗಳು ಅಧಿಕಾರಿಗಳ ಹಾಗೂ ಜನರ ಮುಂದಿದ್ದು, ಪ್ರಕರಣವನ್ನು ಇನ್ನಷ್ಟು ಆಳವಾಗಿ ತನಿಖೆ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಜಾಂಬಾ ಕಾಡಿನಲ್ಲಿ ಪೂಜೆ ನಡೆಸಿ ಬಾವಿ ತೋಡಿದ ಪ್ರಕರಣ ಹಲವು ಪ್ರಶ್ನೆಗಳಿಗೆ ಕಾರಣವಾಗಿದ್ದು, ಜನರಲ್ಲಿ ರೆಕ್ಕೆ ಪುಕ್ಕ ಸೇರಿಕೊಂಡು ಬೇರೆ ಬೇರೆ ಕಥೆಗಳಾಗಿ ಮೂಡಿಬರುತ್ತಿವೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಈ ಪ್ರಕರಣವನ್ನು ಇನ್ನಷ್ಟು ಆಳವಾಗಿ ತನಿಖೆ ಮಾಡಬೇಕಾಗಿದ್ದು, ಕೃತ್ಯದಲ್ಲಿ  ಈ ನಾಲ್ವರ ಕೈವಾಡ ಮಾತ್ರವೇ ? ಅಥವಾ ಇವರಲ್ಲೊಂದು ಗ್ಯಾಂಗ್ ಇದೆಯೇ ? ಎಂದು ತನಿಖೆಯ ಮೂಲಕವೇ ತಿಳಿಯಬೇಕಷ್ಟೇ.

Follow Us:
Download App:
  • android
  • ios