ಗೌರೀಶ್ ಅಕ್ಕಿ ಹಾಗೂ ವಿದ್ವಾನ್ ಜಗದೀಶ ಶರ್ಮಾ ಸಂಪ ಅವರ ಸಂವಾದದಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮ 200 ಸಂಚಿಕೆಗಳ ಮೈಲಿಗಲ್ಲನ್ನು ತಲುಪುವ ಮೂಲಕ ಯೂಟ್ಯೂಬ್ ಇತಿಹಾಸದಲ್ಲೇ ಒಂದು ಅಪೂರ್ವ ದಾಖಲೆ ನಿರ್ಮಿಸಿದೆ. 

ಬೆಂಗಳೂರು(ಫೆ.25): ಹಿರಿಯ ಪತ್ರಕರ್ತ- ಸುದ್ದಿ ನಿರೂಪಕ ಗೌರೀಶ್ ಅಕ್ಕಿ ನೇತೃತ್ವದ ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ "ಮಹಾಭಾರತದ ರಹಸ್ಯಗಳು"- ಮಹಾಭಾರತವನ್ನು ಕುರಿತ ಜನಪ್ರಿಯ ಸರಣಿ ಕಾರ್ಯಕ್ರಮದ 200ನೇ ಸಂಚಿಕೆಯ ವಿಶೇಷ ಸಂವಾದ ಕಾರ್ಯಕ್ರಮ ಇಂದು(ಶನಿವಾರ) ಆಲ್ಮಾ ಮೀಡಿಯಾ ಸ್ಕೂಲ್, ಜಯನಗರ ಬೆಂಗಳೂರಿನಲ್ಲಿ ನಡೆಯಿತು.

ಗೌರೀಶ್ ಅಕ್ಕಿ ಹಾಗೂ ವಿದ್ವಾನ್ ಜಗದೀಶ ಶರ್ಮಾ ಸಂಪ ಅವರ ಸಂವಾದದಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮ 200 ಸಂಚಿಕೆಗಳ ಮೈಲಿಗಲ್ಲನ್ನು ತಲುಪುವ ಮೂಲಕ ಯೂಟ್ಯೂಬ್ ಇತಿಹಾಸದಲ್ಲೇ ಒಂದು ಅಪೂರ್ವ ದಾಖಲೆ ನಿರ್ಮಿಸಿದೆ ಎನ್ನಬಹುದು. ಸರಣಿ ಕಾರ್ಯಕ್ರಮವೊಂದು ಇನ್ನೂರು ಸಂಚಿಕೆಗಳ ಗಡಿ ದಾಟಿರುವುದು ವಿರಳ. ಗೌರೀಶ್ ಅಕ್ಕಿ ಸ್ಟುಡಿಯೋಗೆ ಇದೊಂದು ಹೆಗ್ಗಳಿಕೆ. ಹೆಮ್ಮೆಯ ಸಂಗತಿ.

ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಪತ್ರಕರ್ತ, ಅಂಕಣಕಾರ, ಪ್ರಸ್ತುತ ವಿಸ್ತಾರ ನ್ಯೂಸ್‌ನ ಸುದ್ದಿ ಸಂಪಾದಕರಾದ ಶ್ರೀ ಹರೀಶ್ ಕೇರ ಆಗಮಿಸಿದ್ದರು. ವಿದ್ವಾನ್ ಜಗದೀಶ ಶರ್ಮಾ ಸಂಪ, ಪತ್ರಕರ್ತ ಗೌರೀಶ್ ಅಕ್ಕಿ, ಆಲ್ಮಾ ಮೀಡಿಯಾ ಸ್ಕೂಲ್‌ನ ಪ್ರಾಧ್ಯಾಪಕಿ ಮಾಲತಿ ಗೌರೀಶ್ ಉಪಸ್ಥಿತರಿದ್ದರು.

ಕರ್ನಾಟಕದ 7 ಅದ್ಭುತಗಳ ಅಧಿಕೃತ ಪಟ್ಟಿ ಬಿಡುಗಡೆ, ಇಲ್ಲಿದೆ ಸಪ್ತ ತಾಣಗಳ ಸುಂದರ ಲೋಕ!

ಇದೇ ವೇಳೆ ಮಾತನಾಡಿದ ಗೌರೀಶ್ ಅಕ್ಕಿ, ಮಹಾಭಾರತದ ರಹಸ್ಯಗಳು ಕಾರ್ಯಕ್ರಮದ ಎಲ್ಲಾ ಯಶಸ್ಸು ವಿದ್ವಾನ್ ಜಗದೀಶ ಶರ್ಮಾರಿಗೆ ಮತ್ತು ಸರಣಿಯನ್ನು ಅತ್ಯಂತ ಮೆಚ್ಚಿ ಪ್ರೋತ್ಸಾಹಿಸುತ್ತಿರುವ ವೀಕ್ಷಕರಿಗೆ ಸಲ್ಲಬೇಕು. ಈ ಕಾರ್ಯಕ್ರಮ ಶುರು ಮಾಡುವಾಗ ಇದು ಇಷ್ಟೊಂದು ಯಶಸ್ಸು ಗಳಿಸುವುದೆಂದು ನಾನು ಖಂಡಿತ ಊಹಿಸಿರಲಿಲ್ಲ, ನಮ್ಮ ಪ್ರಯತ್ನ ನಿಜಕ್ಕೂ ಸಾರ್ಥಕವಾಯ್ತು ಎಂಬ ಮಾತುಗಳನ್ನು ಹಂಚಿಕೊಂಡರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹರೀಶ್ ಕೇರ, 'ಮಹಾಭಾರತದ ರಹಸ್ಯಗಳು' ಯೂಟ್ಯೂಬ್‌ಲ್ಲಿ ನಾನು ಆಗಾಗ ವೀಕ್ಷಿಸುವ ನನ್ನ ನೆಚ್ಚಿನ ಕಾರ್ಯಕ್ರಮ; ಮೂಲ ಮಹಾಭಾರತವನ್ನು ಮನಮುಟ್ಟುವಂತೆ ಪ್ರಸ್ತುತ ಪಡಿಸುತ್ತಿರುವ ವಿದ್ವಾನ್ ಜಗದೀಶ ಶರ್ಮಾರು ನಿಜಕ್ಕೂ ವ್ಯಾಸರ ಪುತ್ರರೇ ಸರಿ. ವ್ಯಾಸರಿಗೆ ಹತ್ತಿರವಾದವರಿಗೆ ಮತ್ತು ವ್ಯಾಸರನ್ನು ಸಂಪೂರ್ಣ ಓದಿ ಅರಿತುಕೊಂಡವರಿಗೆ ಮಾತ್ರ ಈ ರೀತಿ ಕಥೆ ಹೇಳಲು ಸಾಧ್ಯ ಎಂಬ ಮಾತನ್ನು ವ್ಯಕ್ತಪಡಿಸಿದರು. ಮಹಾಭಾರತವನ್ನು ಕುರಿತ ಅನೇಕ ಒಳನೋಟಗಳನ್ನು ವೀಕ್ಷಕರಿಗೆ ಈ ಸಂದರ್ಭದಲ್ಲಿ ತಿಳಿಸಿದರು.

"ಮಹಾಭಾರತದ ರಹಸ್ಯಗಳು ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿ, ಮೂಲ ಮಹಾಭಾರತವನ್ನು ವೀಕ್ಷಕರೆದುರು ತೆರೆದಿಡಲು ಅವಕಾಶ ಮಾಡಿಕೊಟ್ಟ ಗೌರೀಶ್ ಅಕ್ಕಿ ಅವರಿಗೆ ನಾವೆಲ್ಲ ಕೃತಜ್ಞರಾಗಿರಬೇಕು. ಟಿಆರ್‌ಪಿ ಯುಗದಲ್ಲಿ ಇಂಥದ್ದೊಂದು ಕಾರ್ಯಕ್ರಮಕ್ಕೆ ವೇದಿಕೆಯಾಗಿ ನಡೆಸಿಕೊಂಡು ಹೋಗುತ್ತಿರುವುದು ಸುಲಭದ ಮಾತಲ್ಲ. ಮತ್ತು ಈ ಕಾರ್ಯಕ್ರಮವನ್ನು ಬಹುವಾಗಿ ಮೆಚ್ಚಿಕೊಂಡು, ಕಾರ್ಯಕ್ರಮ ವೀಕ್ಷಿಸಿ ಪ್ರತಿಸ್ಪಂದಿಸುತ್ತಿರುವ ವೀಕ್ಷಕರೇ ಈ ಯಶಸ್ಸಿಗೆ ಮೂಲ ಕಾರಣ" ಎಂದು ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು ಹೇಳಿದರು.

ವೀಕ್ಷಕರಿಗೆಂದೇ ಏರ್ಪಡಿಸಿದ್ದ ಈ ನೇರ ಸಂವಾದದಲ್ಲಿ- ನೆರೆದಿದ್ದ ಪ್ರೇಕ್ಷಕರು, ವಿದ್ವಾನ್ ಜಗದೀಶ ಶರ್ಮಾ ಸಂಪ ಅವರಿಗೆ ಮಹಾಭಾರತವನ್ನು ಕುರಿತ ತಮ್ಮ ಅನೇಕ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ವಿದ್ವಾನರೊಂದಿಗೆ ಮಾತನಾಡಿ, ಅವರ ಪುಸ್ತಕಗಳನ್ನು ಕೊಂಡು, ಸೆಲ್ಫಿ ತೆಗೆಸಿಕೊಂಡು, ಖುಷಿ ಪಟ್ಟರು. ಜಗದೀಶ ಶರ್ಮಾ ಸಂಪ ಅವರಿಗೆ ಈ ಸಂದರ್ಭದಲ್ಲಿ ಗೌರೀಶ್ ಅಕ್ಕಿ ಸ್ಟುಡಿಯೋ ಹಾಗೂ ಆಲ್ಮಾ ಮೀಡಿಯಾ ಸ್ಕೂಲ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಿ, ಸ್ಮರಣಿಕೆ ನೀಡಲಾಯಿತು.