ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಯುವತಿ ಶರಣ್ಯ ನಾಪತ್ತೆಯಾಗಿದ್ದಾರೆ. ಪೊಲೀಸ್, ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರನ್ನೊಳಗೊಂಡ ನಾಲ್ಕು ತಂಡಗಳು ತೀವ್ರ ಶೋಧ ನಡೆಸುತ್ತಿದ್ದರೂ, ಯುವತಿಯ ಸುಳಿವು ಇನ್ನೂ ಪತ್ತೆಯಾಗಿಲ್ಲ. ಈ ಘಟನೆಯು ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ.

ನಾಪೋಕ್ಲು (ಏ.4): ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ಗೆ ತೆರಳಿದ್ದ ಕೇರಳದ ಯುವತಿ ನಾಪತ್ತೆ ಶುಕ್ರವಾರ ಸಂಜೆವರೆಗೂ ಯುವತಿಯ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.

Add Asianetnews Kannada as a Preferred SourcegooglePreferred

ಪೊಲೀಸ್, ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರು ಸೇರಿದಂತೆ 4 ತಂಡಗಳಿಂದ ಬಿರುಸಿನ ಶೋಧ ಕಾರ್ಯ ಶುಕ್ರವಾರ ಸಂಜೆವರೆಗೂ ನಡೆದಿದ್ದು ಯುವತಿ ಮತ್ತೆ ಆಗದೆ ಆತಂಕ ಸೃಷ್ಟಿಯಾಗಿದೆ.

ಕೇರಳ ಯುವತಿ ಹೋಗಿದ್ದೆಲ್ಲಿಗೆ?

ಕೊಡಗು ಜಿಲ್ಲೆಯ ಕಕ್ಕಬ್ಬೆ ಬಳಿಯ ಯವಕಪಾಡಿ ಗ್ರಾಮದ ಗ್ರಾಮದ ಕಬ್ಬಿನ ಕಾಡು ನಿವಾಸಿ ನಂದ ಎಂಬವರ ಹೋಂ ಸ್ಟೇಗೆ ಬಂದಿದ್ದ ಕೇರಳ ಮೂಲದ ಕೊಯ್ಕೊಡು ನಿವಾಸಿ ಯುವತಿ ಶರಣ್ಯ (36) ಎಂಬಾಕೆ ಬುಧವಾರ ಬೆಳಿಗ್ಗೆ ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್ಗೆ ಆನ್ಲೈನ್ನಲ್ಲಿ ಬುಕಿಂಗ್ ಮಾಡಿ ತೆರಳಿದ್ದು ಜೊತೆಯಾಗಿ ತೆರಳಿದ ಪ್ರವಾಸಿಗರು ಹಿಂತಿರುಗಿದ್ದರು. ಆದರೆ ಈಕೆ ಹಿಂತಿರುಗದೆ ನಾಪತ್ತೆಯಾಗಿದ್ದಾಳೆ. 

ತೀವ್ರ ಹುಡುಕಾಟ ನಡೆಸುತ್ತಿದ್ದರೂ ಶರಣ್ಯ ಸುಳಿವು ಇಲ್ಲ

ಈ ವಿಷಯ ತಿಳಿದ ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು, ಪೋಲಿಸ್ ಶ್ವಾನ ಹಾಗೂ ಗ್ರಾಮಸ್ಥರು ನಿರಂತರ ಹುಡುಕಾಟದಲ್ಲಿ ತೊಡಗಿಕೊಂಡಿದ್ದು ಗುರುವಾರ ತಡ ರಾತ್ರಿಯವರೆಗೆ ಹಾಗೂ ಶುಕ್ರವಾರ ಸಂಜೆವರೆಗೂ ಬೆಟ್ಟದಲ್ಲಿ ಶೋಧ ನಡೆಸಿದರೂ ಶರಣ್ಯ ಸುಳಿವು ದೊರೆತಿಲ್ಲ. 

ಈ ಬಗ್ಗೆ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶುಕ್ರವಾರ ಸಂಜೆ ಕೊಯ್ಕೊಡು ನಿವಾಸಿ ಯುವತಿ ಶರಣ್ಯಳ ಅಣ್ಣ ಶ್ಯಾಮ್ ಆಗಮಿಸಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಕುಡಿಯರ ಮುತ್ತಪ್ಪ ತಿಳಿಸಿದ್ದಾರೆ.