ಕೊರೋನಾ ದೃಢ: ಕಂಪ್ಲಿ ಮಾರುತಿ ನಗರ ಸೀಲ್‌ಡೌನ್
ಯಾರೂ ಒಳ ಪ್ರವೇಶಿಸದಂತೆ ಮುಳ್ಳುಬೇಲಿ| ಕಂಟೈನಮೆಂಟ್ ಪ್ರದೇಶದ ಎಲ್ಲರ ಆರೋಗ್ಯ ತಪಾಸಣೆ| ಕಂಪ್ಲಿ ಪಟ್ಟಣದವರು, ನಂ.10 ಮುದ್ದಾಪುರ ಗ್ರಾಮದವರು ಮತ್ತು ಸುತ್ತಲಿನ ಗ್ರಾಮದವರು ಮಾರುತಿ ನಗರ ಪ್ರವೇಶಿಸದಂತೆ 6 ಕಡೆ ಚೆಕ್ ಪೋಸ್ಟ್ ನಿರ್ಮಿಸಿ, ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ, ಪೊಲೀಸ್ ಬಂದೋಬಸ್ತ್|
ಕಂಪ್ಲಿ(ಮೇ.13): ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ಪತ್ತೆಯಾಗಿರುವ ಪಟ್ಟಣದ ಮಾರುತಿ ನಗರದ ಬಲಭಾಗದ ವೇರ್ ಹೌಸ್ ಹಿಂಭಾಗದ 183 ಮನೆಗಳ 100 ಮೀಟರ್ ವ್ಯಾಪ್ತಿಯನ್ನು ಮುಳ್ಳಿನ ಬೇಲಿ ಹಾಕಿ ಸೀಲ್‌ಡೌನ್ ಮಾಡಲಾಗಿದೆ.
ಕಂಪ್ಲಿ ಪಟ್ಟಣದವರು, ನಂ.10 ಮುದ್ದಾಪುರ ಗ್ರಾಮದವರು ಮತ್ತು ಸುತ್ತಲಿನ ಗ್ರಾಮದವರು ಮಾರುತಿ ನಗರ ಪ್ರವೇಶಿಸದಂತೆ 6 ಕಡೆ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ, ರಸ್ತೆಗಳಿಗೆ ಬ್ಯಾರಿಕೇಡ್‌ಗಳನ್ನು ಹಾಕಿ, ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆರೋಗ್ಯ ಇಲಾಖೆಯವರು ಸೀಲ್‌ಡೌನ್ ವ್ಯಾಪ್ತಿಯ ಮನೆಗಳಲ್ಲಿರುವ ಎಲ್ಲರನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಪುರಸಭೆ ಸಿಬ್ಬಂದಿಯವರು ಸ್ವಚ್ಛತೆ ಕಾರ್ಯ ನಡೆಸಿ, ರಸಾಯನಿಕ ಸಿಂಪಡಿಸಿ, ಈ ಪ್ರದೇಶದ ಸುತ್ತಲು ಮುಳ್ಳಿನ ಬೇಲಿ ಹಾಕುವ ಕಾರ್ಯ ನಡೆಸಿದ್ದಾರೆ. ಕಂದಾಯ ಇಲಾಖೆ ಸಿಬ್ಬಂದಿಯವರು ಸಂಪೂರ್ಣ ನಿಗಾವಹಿಸಿದ್ದಾರೆ.
ಗಂಗಾವತಿಯಿಂದ ಕಂಪ್ಲಿಗೆ ಆಟೋದಲ್ಲಿ ತೆರಳಿದ್ದವನಿಗೆ ಕೊರೋನಾ: ಆತಂಕದಲ್ಲಿ ಜನತೆ
ತಹಸೀಲ್ದಾರ್ ಎಂ. ರೇಣುಕಾ ಅವರು, ಕೊರೋನಾ ಪಾಸಿಟಿವ್ ಬಂದಿರುವ ಪ್ರದೇಶವನ್ನು 28 ದಿನಗಳ ವರೆಗೆ ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಸೋಂಕಿತ ವ್ಯಕ್ತಿ ಬೆಂಗಳೂರಿನಿಂದ ಕಂಪ್ಲಿಗೆ ಬಂದ ನಂತರ ಹೊರಗಡೆ ಎಲ್ಲೂ ಹೋಗಿಲ್ಲ, ಮನೆಯಲ್ಲಿಯೆ ಕ್ವಾರಂಟೈನ್ ಆಗಿದ್ದೇನೆಂದು ಹೇಳಿದ್ದಾನೆ. ಆತನೆ ಆರೋಗ್ಯ ಇಲಾಖೆಗೆ 1 ಬಾರಿ ಹೊರಗಡೆ ಹೋಗಿದ್ದೆನೆಂದು ಹೇಳಿದ್ದಾನೆ. ಸೋಂಕಿತ ವ್ಯಕ್ತಿಯನ್ನು ಬಳ್ಳಾರಿಯ ಕೋವಿಡ್-19 ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಲಾಗಿದೆ. ಆತನ ಸಂಪರ್ಕದಲ್ಲಿದ್ದ ಪತ್ನಿ, ತಾಯಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ, ಹೋಟೆಲ್‌ನ ಒಬ್ಬ ವ್ಯಕ್ತಿ, ಅಂಗಡಿಯ ಒಬ್ಬ ವ್ಯಕ್ತಿಯನ್ನು ಹೊಸಪೇಟೆ ಸಿದ್ಧಾರ್ಥ ಹೊಟೇಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಪತ್ನಿಯ ಗಂಟಲು ದ್ರವದ ಸ್ಯಾಂಪಲ್ ಕೊರೋನಾ ನೆಗೆಟಿವ್ ಬಂದಿದೆ. ತಾಯಿ ಗಂಟಲು ದ್ರವದ ಸ್ಯಾಂಪಲ್ ರಿಪೋರ್ಟ್ ಬರಬೇಕಾಗಿದೆ. ಇಲ್ಲಿನ ಜನರ ಅನುಕೂಲಕ್ಕಾಗಿ ತರಕಾರಿ, ಕಿರಾಣಿ, ಔಷಧ ಅಂಗಡಿ ವ್ಯವಸ್ಥೆ ಮಾಡಲಾಗಿದೆ. ಕಂದಾಯ, ಪೊಲೀಸ್, ಪುರಸಭೆ, ಆರೋಗ್ಯ ಇಲಾಖೆಯಿಂದ ಇಲ್ಲಿನ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಂಪೂರ್ಣ ನಿಗಾವಹಿಸಲಾಗಿದೆ ಎಂದು ತಿಳಿಸಿದರು.
ಸಿಪಿಐ ಡಿ. ಹುಲುಗಪ್ಪ ಅವರು, ಕೊರೋನಾ ಸೋಂಕಿತ ಪ್ರದೇಶದಲ್ಲಿ ಇಬ್ಬರು ಸಿಪಿಐ, ಇಬ್ಬರು ಪಿಎಸ್‌ಐ, 9 ಎಎಸ್‌ಐ, 45 ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 58 ಪೊಲೀಸ್ ಸಿಬ್ಬಂದಿ ಬಂದೋಬಸ್‌್ತ ಕಾರ್ಯ ನಿರ್ವಹಿಸುತ್ತಿದ್ದಾರೆ. 6 ಕಡೆ ಚೆಕ್ ಪೋಸ್ಟ್‌ಗಳನ್ನು, ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಹೊಸಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್ ಅವರು, 4 ಸರ್ವೈವಲ್ ಟೀಂ ಮಾಡಲಾಗಿದೆ. ಇಬ್ಬರು ಮೇಲ್ವಿಚಾರಕರು, 8 ಜನ ಆಶಾ ಕಾರ್ಯಕರ್ತೆಯರು, 28 ದಿನಗಳ ವರೆಗೆ ಈ ಪ್ರದೇಶದ 183 ಮನೆಗಳ ನಿವಾಸಿಗಳ ಆರೋಗ್ಯವನ್ನು ಪ್ರತಿದಿನ ಪರೀಕ್ಷಿಸಲಿದ್ದಾರೆ. ನೆಗಡಿ, ಕೆಮ್ಮು, ಜ್ವರ ಬಂದವರು ಹತ್ತಿರದ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪ ಅವರು, ಕೊರೋನಾ ವೈರಸ್ ಮುಂಜಾಗ್ರತೆ ಕುರಿತು ಜನರಿಗೆ ತಿಳಿವಳಿಕೆ ನೀಡಲಾಗುವುದು ಎಂದು ತಿಳಿಸಿದರು. ಅಡಿಶನಲ್ ಎಸ್ಪಿ ಲಾವಣ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್ಪಿ ವಿ. ರಘುಕುಮಾರ್, ಸಿಪಿಐ ಹಸನ್‌ಸಾಬ್, ಪಿಎಸ್‌ಐಗಳಾದ ಶಶಿಧರ ವೈ. ತಿಮ್ಮಪ್ಪ, ಟಿ.ಎಲ್. ಬಸಪ್ಪ, ಉಪತಹಸೀಲ್ದಾರ್ ಬಿ. ರವೀಂದ್ರಕುಮಾರ್, ಮುಖ್ಯಾಧಿಕಾರಿ ರಮೇಶ ಬಡಿಗೇರ, ಡಾ. ರವೀಂದ್ರ ಕನಕೇರಿ, ಡಾ. ಮಲ್ಲೇಶಪ್ಪ, ಧರ್ಮನಗೌಡ, ಕಿರಿಯ ಆರೊಗ್ಯ ಸಹಾಯಕ ಎನ್. ಚನ್ನಬಸವರಾಜ, ಆರೋಗ್ಯ ಶಿಕ್ಷಣಾಧಿಕಾರಿ ಶೋಭಾ, ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶಬಾಬು, ಕಿರಿಯ ಆರೋಗ್ಯ ನಿರೀಕ್ಷಕಿ ಎ.ಕೆ. ರಾಧಿಕಾ, ಸಮುದಾಯ ಸಂಘಟಕಿ ಎಂ. ವಸಂತಮ್ಮ, ಆಶಾ, ಅಂಗನವಾಡಿ, ಪುರಸಭೆ, ಆರೋಗ್ಯ, ಕಂದಾಯ, ಪೊಲೀಸ್ ಸಿಬ್ಬಂದಿ ಇದ್ದರು.
ಕಂಪ್ಲಿ ಪಟ್ಟಣದ ಬಟ್ಟೆ, ಬಂಗಾರ ಅಂಗಡಿಗಳನ್ನು ಮುಚ್ಚಲಾಗಿತ್ತು. ಉಳಿದಂತೆ ಔಷಧ, ಕಿರಾಣಿ, ತರಕಾರಿ, ಹೊಟೇಲ್ ಪಾರ್ಸಲ್‌ಗೆ ಹಾಗೂ ಇತರೆ ಅಂಗಡಿಗಳ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು.