Udupi: ಧರ್ಮ ದಂಗಲ್‌ಗೆ ಕೌಂಟರ್ ನೀಡಲು ಎಸ್‌ಡಿಪಿಐ ರೆಡಿ
ಧರ್ಮ ದಂಗಲ್ ಗೆ ಕೌಂಟರ್ ನೀಡಲು ಎಸ್‌ಡಿಪಿಐ ಸಿದ್ಧತೆ ಮಾಡಿಕೊಂಡಿದೆ. ಧರ್ಮದಂಗಲ್ ಆರಂಭವಾದ ಕಾಪುವಿನಿಂದಲೇ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದೆ. ಕಾಪು ಮಾರಿಗುಡಿಯಲ್ಲಿ ಕಳೆದ ವರ್ಷ ಧರ್ಮ ದಂಗಲ್ ಗೆ ಚಾಲನೆ ದೊರಕಿತ್ತು, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಮಾಡಲಾಗಿತ್ತು.
ಉಡುಪಿ (ಡಿ.22): ಧರ್ಮ ದಂಗಲ್ ಗೆ ಕೌಂಟರ್ ನೀಡಲು ಎಸ್‌ಡಿಪಿಐ ಸಿದ್ಧತೆ ಮಾಡಿಕೊಂಡಿದೆ. ಧರ್ಮ ದಂಗಲ್ ಆರಂಭವಾದ ಕಾಪುವಿನಿಂದಲೇ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದೆ. ಕಾಪು ಮಾರಿಗುಡಿಯಲ್ಲಿ ಕಳೆದ ವರ್ಷ ಧರ್ಮ ದಂಗಲ್ ಗೆ ಚಾಲನೆ ದೊರಕಿತ್ತು, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಮಾಡಲಾಗಿತ್ತು. ಬಳಿಕ ರಾಜ್ಯದ್ಯಂತ ಧರ್ಮ ದಂಗಲ್ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲು ಉಡುಪಿಯಲ್ಲಿ ಏಕೈಕ ಅಭ್ಯರ್ಥಿಯನ್ನು ಕಾಪು ಕ್ಷೇತ್ರದ ಮೂಲಕ ಕಣಕ್ಕಿಳಿಸಲು ಎಸ್ ಡಿಪಿಐ ನಿರ್ಧಾರ ಮಾಡಿದೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಎಸ್ ಡಿ ಪಿ ಐ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದು , ಗುರುವಾರ ಅಭ್ಯರ್ಥಿಯ ಅಧಿಕೃತ ಘೋಷಣೆ ಆಗಲಿದೆ. ಕಾಪು ಅತಿ ಹೆಚ್ಚು ಮುಸ್ಲಿಂ ಮತದಾರರಿರುವ ವಿಧಾನಸಭಾ ಕ್ಷೇತ್ರ. ಹಿಜಾಬ್ ವಿವಾದ ನಡೆದಾಗ ನಿಲುವು ಪ್ರಕಟಿಸದ ಕಾಂಗ್ರೆಸ್ ಬಗ್ಗೆ ವಿರೋಧ ಹೊಂದಿರುವ ಎಸ್‍ಡಿಪಿಐ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಸಿದ್ಧತೆ ಮಾಡಿಕೊಂಡಿದೆ. 50,000ಕ್ಕೂ ಅಧಿಕ ಮುಸ್ಲೀಂ ಮತದಾರರಿರುವ ಕಾಪು ವಿಧಾನಸಭಾ ಕ್ಷೇತ್ರ ಈ ಬಾರಿ ಗಮನ ಸೆಳೆದಿದೆ.
ಹಿಜಾಬ್ ವಿವಾದದ ಬಳಿಕ ಸಮುದಾಯಕ್ಕೆ ಎಸ್‌ಡಿಪಿಐ ಬಗ್ಗೆ ಒಲವು ಹೆಚ್ಚಿದೆ. ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಏಕೈಕ ಕ್ಷೇತ್ರದಲ್ಲಿ ಸ್ಪರ್ಧೆಗೆ ನಿರ್ಧಾರ ಮಾಡಿದ್ದಾರೆ, ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಎಸ್ ಡಿಪಿಐ ಮುಖಂಡ ಹನಿಫ್ ಮುಳೂರು, ನಾವು ಕಾಫುನಲ್ಲಿ ಬೆರೆತು ಬಾಳುತ್ತಿದ್ದೆವು, ಆದರೆ ಧರ್ಮ ದಂಗಲ್ ಮೂಲಕ ವಾತಾವರಣ ಕೆಡಿಸಲಾಗಿದೆ. ಕಾಂಗ್ರೆಸ್ ಪಕ್ಷದ ಹಿಂದೆ ಜೊಲ್ಲು ಹರಿಸುವ ನಾಯಿಗಳಂತೆ ನಾವು ಓಡಾಡುತ್ತಿದ್ದೆವು, ಕಾಂಗ್ರೆಸ್ ಹಿಂದೆ ಹೋಗಿ ನಮ್ಮ ಭವಿಷ್ಯವನ್ನು ಹಾಳು ಮಾಡಿಕೊಂಡೆವು ಎಂದಿದ್ದಾರೆ.
ಕಾಪುವಿನಲ್ಲಿ ಬಿಜೆಪಿಯ ಯಶ್ ಪಾಲ್ ಸುವರ್ಣಗೆ ಟಿಕೆಟ್ ಸಿಗಲ್ಲ. ಅದಕ್ಕಾಗಿ ಧರ್ಮದಂಗಲ ಆರಂಭ ಮಾಡಿದರು. ಹಿಂದೂ ಯುವಕರನ್ನು ಕಟ್ಟಿಕೊಂಡು ವ್ಯಾಪಾರ ಬಹಿಷ್ಕಾರ ಶುರು ಮಾಡಿದರು. ಹಿಜಾಬ್ ವಿವಾದದ ಮೂಲಕ ಚುನಾವಣೆ ಎದುರಿಸಲು ತಯಾರಿ ನಡೆಸಿದರು. ಶಾಲೆಯಲ್ಲೇ ಮುಗಿಯಬಹುದಾಗಿದ್ದ ವಿವಾದವನ್ನು ಇಡೀ ದೇಶಕ್ಕೆ ವ್ಯಾಪಿಸಿದರು ಎಂದು ಹೇಳಿದ್ದಾರೆ.
ಹಿಜಾಬ್ ವಿವಾದದಿಂದ ಮುಸ್ಲಿಂ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತಾಗಿದೆ.ಯಶ್ ಪಾಲ್ ಸುವರ್ಣಗೆ ಟಿಕೆಟ್ ನೀಡಲು ಅನುಕೂಲವಾಗುವಂತೆ ಧರ್ಮದಂಗಲ್ ಪ್ರಾರಂಭಿಸಿದರು. ಕಾಪು ಮಾರಿಗುಡಿಗೆ ಹೋಗಿ ವ್ಯಾಪಾರ ಬಹಿಷ್ಕಾರಕ್ಕೆ ಮನವಿ ಮಾಡಿದರು. ಕಾಪು ಮಾರಿಗುಡಿ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಇದ್ದಾರೆ, ಆದರೆ ಅವರು ಮೌನವಾಗಿದ್ದರು.
ಕಾಂಗ್ರೆಸ್ನ ಜಾತ್ಯತೀತ ನಾಯಕ ಎಂದು ಕರೆಸಿಕೊಳ್ಳುವ ನಕಲಿ ಆಟಗಾರರು ಅಲ್ಲೂ ಇದ್ದರು. ಕಾಂಗ್ರೆಸ್ ಮನಸು ಮಾಡಿದ್ದರೆ ಧರ್ಮದಂಗಲ್ ನಿಲ್ಲಿಸಬಹುದಿತ್ತು. ಎಲ್ಲಾ ಜಾತಿಯವರು ಕೂಡ ಮಾರಿಗುಡಿಯನ್ನು ಪೂಜಿಸುತ್ತಾರೆ. ಎಲ್ಲಾ ಧರ್ಮದವರು ವ್ಯಾಪಾರ ನಡೆಸುತ್ತಿದ್ದರು. ಕೇವಲ ರಾಜಕೀಯ ಗಿಮಿಕ್ ಗೋಸ್ಕರ ವ್ಯಾಪಾರ ಬಹಿಷ್ಕಾರ ಮಾಡಿದರು ಎಂದು ಹೇಳಿದರು.
ಇಷ್ಟೆಲ್ಲಾ ಆಗುತ್ತಿದ್ದರೂ ಕಾಂಗ್ರೆಸ್ನವರು ಬಾಯಿ ಮುಚ್ಚಿ ಕೂತಿದ್ದರು. ಎಸ್ ಡಿ ಪಿ ಐ ಬಿಜೆಪಿಯ ಬಿಟೀಂ ಅಲ್ಲ. ಕಾಂಗ್ರೆಸ್ ಪಕ್ಷವೇ ಬಿಜೆಪಿಯ ಬಿ ಟೀಮ್. ಕಾಂಗ್ರೆಸ್ ನಿಂದ 17 ಶಾಸಕರು ಬಿಜೆಪಿಗೆ ಹಾರಿದ್ದಾರೆ. ಕಾಂಗ್ರೆಸ್ ಪಕ್ಷ ಬಿಜೆಪಿಯ ಬಿಟೀಮ್ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
Chikkamagaluru: ಸೋಮೇಶ್ವರ ಸ್ವಾಮಿ ದೇಗುಲದಲ್ಲಿ ರಥೋತ್ಸವಕ್ಕೂ ಮುನ್ನವೇ ಧರ್ಮ ದಂಗಲ್
ಬೇರೆ ಯಾವ ಕ್ಷೇತ್ರದಲ್ಲೂ ನಮ್ಮ ಸದಸ್ಯರಿಲ್ಲ. ಆದರೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಎಸ್ ಡಿ ಪಿ ಐ ಪುರಸಭೆ ಹಾಗೂ ಪಂಚಾಯತ್ ನಲ್ಲಿ ಆಯ್ಕೆಯಾಗಿದೆ. ಪುರಸಭೆಯಲ್ಲಿ ಮೂವರು ಕೌನ್ಸಿಲರ್ಗಳಿದ್ದಾರೆ, ಎಂಟು ಪಂಚಾಯತ್ ಮೆಂಬರ್ ಗಳಿದ್ದಾರೆ. ಕಾಂಗ್ರೆಸ್ ನಲ್ಲಿದ್ದ ಮುಸಲ್ಮಾನರಿಗೂ ಸತ್ಯದ ಅರಿವಾಗಿದೆ. ಈ ಹಿಂದೆ ಅವರು ನಮ್ಮನ್ನು ದೂರ ಮಾಡುತ್ತಿದ್ದರು. ಆದರೆ ಕಾಂಗ್ರೆಸ್ ನಕಲಿ ಜಾತ್ಯತೀತತೆ ಈಗ ಗೊತ್ತಾಗಿದೆ. ಮುಸಲ್ಮಾನರಿಗೆ ಸಮಸ್ಯೆ ಆದರೆ ಹಲ್ಲೆ ಆದರೆ ಕೊಂದು ಹಾಕಿದರೆ ಕೇಳುವವರು ಗತಿ ಇಲ್ಲ. ಎಸ್ ಡಿ ಪಿ ಐ ಕಾರ್ಯಕರ್ತ ಕೊನೆಗೆ ಶವವನ್ನಾದರೂ ಎತ್ತಿಕೊಂಡು ಹೋಗುತ್ತಾನೆ ಎಂಬ ಭರವಸೆ ಬಂದಿದೆ. ಎಸ್ ಡಿ ಪಿ ಐ ಜೀವ ಹೋದರೂ ತೊಂದ್ರೆ ಇಲ್ಲ ನ್ಯಾಯದ ಪರ ನಿಲುತ್ತೆ ಅನ್ನೋದು ಗೊತ್ತಾಗಿದೆ. ಹಾಗಾಗಿ ಕಾಪುವಿನಲ್ಲಿ ನಮ್ಮ ಪಕ್ಷದ ಪರವಾಗಿ ಒಲವಿದೆ. ನಾವು ಕಾಂಗ್ರೆಸ್ ಅನ್ನು ಸೋಲಿಸಲು ನಿಲ್ತಾ ಇಲ್ಲ. ಅವರೇ ನಮ್ಮನ್ನು ಸೋಲಿಸಲು ಪಣತೊಟ್ಟಿದ್ದಾರೆ ಹೆದರಿದ್ದಾರೆ. ಕಾಂಗ್ರೆಸ್ ಇನ್ನೂ ಕೂಡ ತನ್ನ ಅಭ್ಯರ್ಥಿ ಘೋಷಿಸಿಲ್ಲ. ಕಾಂಗ್ರೆಸ್ಸಿಗೆ ಎಸ್‍ಡಿಪಿಐ ನದ್ದೇ ಹೆದರಿಕೆ ಎಂದು ವ್ಯಂಗ್ಯವಾಡಿದರು.