ವರದಿ : ವಸಂತಕುಮಾರ್‌ ಕತಗಾಲ

ಕಾರವಾರ (ನ.04):  ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸ್ಕೂಬಾ ಡೈವಿಂಗ್‌ ಸುಮಾರು 7 ತಿಂಗಳ ತರುವಾಯ ಮುರ್ಡೇಶ್ವರ ಬಳಿಯ ನೇತ್ರಾಣಿಯಲ್ಲಿ ಆರಂಭಗೊಂಡಿದೆ. ಕೋವಿಡ್‌ ಸುರಕ್ಷತಾ ಕ್ರಮಗಳೊಂದಿಗೆ ಡೈವಿಂಗ್‌ ಶುರುವಾಗಿದೆ.

ಕೋವಿಡ್‌-19 ದಾಳಿ ಇಡುತ್ತಿದ್ದಂತೆ ಅಂದರೆ ಕಳೆದ ಮಾರ್ಚ್ ತಿಂಗಳಿನಲ್ಲಿ ಉಳಿದೆಲ್ಲ ಚಟುವಟಿಕೆಗಳಂತೆ ಸ್ಕೂಬಾ ಡೈವಿಂಗ್‌ ಕೂಡ ಸ್ಥಗಿತವಾಯಿತು. ಲಾಕ್‌ಡೌನ್‌ ಸಡಿಲಿಕೆಯಾದರೂ ಸ್ಕೂಬಾ ಡೈವಿಂಗ್‌ ಮಾತ್ರ ಶುರುವಾಗಿರಲಿಲ್ಲ. ಇದೀಗ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸ್ಕೂಬಾ ಡೈವಿಂಗ್‌ ಆರಂಭಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಉತ್ತೇಜನ ಸಿಗಲಿದೆ.

ಮುರ್ಡೇಶ್ವರದಿಂದ 18 ಕಿಮೀ ದೂರದ ಅರಬ್ಬಿ ಸಮುದ್ರದ ದ್ವೀಪ ನೇತ್ರಾಣಿ ಬಳಿ ಸ್ಕೂಬಾ ಡೈವಿಂಗ್‌ ನಡೆಸಲಾಗುತ್ತದೆ. ಒಂದೂವರೆ ಗಂಟೆ ಬೋಟಿನಲ್ಲಿ ಪ್ರಯಾಣಿಸಬೇಕು. ಈ ಹಿಂದೆ ಒಂದು ಬೋಟ್‌ನಲ್ಲಿ 40ರಷ್ಟುಜನರನ್ನು ಕರೆದೊಯ್ಯಲಾಗುತ್ತಿತ್ತು. ಈಗ ಕೇವಲ 20 ಜನರನ್ನು ಮಾತ್ರ ಕರೆದೊಯ್ಯಲಾಗುತ್ತದೆ. ಬಳಸಿ ಬಿಸಾಡುವ ಉಪಕರಣಗಳನ್ನೆ ಹೆಚ್ಚು ಬಳಸಲಾಗುತ್ತದೆ. ಉಳಿದ ಉಪಕರಣಗಳನ್ನು ಅತ್ಯಾಧುನಿಕ ಉಪಕರಣಗಿಂದ ಸ್ವಚ್ಛಗೊಳಿಸಲಾಗುತ್ತದೆ.

ನೇತ್ರಾಣಿಯಲ್ಲಿ ಡೈವಿಂಗ್‌ ಚಟುವಟಿಕೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ನೇತ್ರಾಣಿ ಅಡ್ವೆಂಚರ್ಸ್‌ ಕಟ್ಟುನಿಟ್ಟಾಗಿ ಸುರಕ್ಷತಾ ಕ್ರಮವನ್ನು ಅನುಸರಿಸುತ್ತಿದೆ. ನೇತ್ರಾಣಿ ಅಡ್ವೆಂಚರ್ಸ್‌ನಲ್ಲಿರುವ ಡೈವಿಂಗ್‌ ಪರಿಣತರು ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.

ನೇತ್ರಾಣಿಯಲ್ಲಿ ಪತಿ ಜೊತೆ ಸಮುದ್ರದಾಳಕ್ಕೆ ಧುಮುಕಿದ ರೋಹಿಣಿ ಸಿಂಧೂರಿ

ನೇತ್ರಾಣಿ ಬಳಿ ಈಗ ಕಡಲು ತಿಳಿಯಾಗಿದೆ. ಪ್ರತಿಯೊಂದು ಜಲಚರಗಳನ್ನು ಸ್ಪಷ್ಟವಾಗಿ ವೀಕ್ಷಿಸಬಹುದು. ಬಣ್ಣ ಬಣ್ಣದ ಮೀನುಗಳು, ಹವಳದ ಬಂಡೆಗಳು, ಬಗೆ ಬಗೆಯ ಜಲಚರಗಳು, ಸಾಗರದಾಳದ ವೈವಿಧ್ಯಗಳನ್ನು ಸಮೀಪದಿಂದ ನೋಡಿ ಬೆರಗುಗೊಳ್ಳಬಹುದು.

ನಮ್ಮ ದೇಶದಲ್ಲಿ ಅಂಡಮಾನ್‌ ನಿಕೋಬಾರ್‌ ಹೊರತು ಪಡಿಸಿದರೆ ಕರ್ನಾಟಕದ ನೇತ್ರಾಣಿಯಲ್ಲೇ ಅಪರೂಪದ ಜಲಚರಗಳಿವೆ. ಜೀವ ವೈವಿಧ್ಯತೆ ಇದೆ. ಇಲ್ಲಿ ಕಡಲಿನ ನೀರು ತಿಳಿಯಾಗಿರುವುದರಿಂದ ವೀಕ್ಷಣೆಯೂ ಸುಲಭ. ಇದೆ ಕಾರಣಕ್ಕೆ ವಿದೇಶಿ ಪ್ರವಾಸಿಗರೂ ಸಹ ನೇತ್ರಾಣಿಗೆ ಡೈವಿಂಗ್‌ಗಾಗಿ ಬರುತ್ತಿದ್ದಾರೆ. ಈಚಿನ ವರ್ಷಗಳಲ್ಲಿ ಸ್ಕೂಬಾ ಡೈವಿಂಗ್‌ ಜನಪ್ರಿಯವಾಗುತ್ತಿದೆ. ಸ್ಕೂಬಾ ಡೈವಿಂಗ್‌ ಉತ್ಸವ ನಡೆಸಿ ಜಾಗತಿಕ ಮಟ್ಟದಲ್ಲಿ ನೇತ್ರಾಣಿ ಗಮನ ಸೆಳೆದಿತ್ತು.

ಸ್ಕೂಬಾ ಡೈವಿಂಗ್‌ನಲ್ಲಿ ಪರಿಣತಿ ,ಅಪಾರ ಅನುಭವವನ್ನು ಹೊಂದಿರುವ ನೇತ್ರಾಣಿ ಅಡ್ವೆಂಚರ್ಸ್‌ ಲಾಕ್‌ಡೌನ್‌ ಸಡಿಲಿಕೆ ತರುವಾಯ ಕಳೆದ 3-4 ದಿನಗಳ ಹಿಂದೆ ಸ್ಕೂಬಾ ಡೈವಿಂಗ್‌ ಪುನಾರಂಭಿಸಿದೆ. ಡೈವಿಂಗ್‌ ಮಾಡಬೇಕೆ ನೇತ್ರಾಣಿಗೆ ಬನ್ನಿ.