ಹಾಸನ [ಡಿ.21]: ರಾಜ್ಯದಲ್ಲಿ ಅಕ್ಷರ ದಾಸೋಹ ಯೋಜನೆಯ ಖಾಸಗೀಕರಣ ವಿರೋಧಿಸಿ ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನಕ್ಕಾಗಿ ಒತ್ತಾಯಿಸಿ ಡಿ.26 ರಿಂದ ಬಿಸಿಯೂಟ ನೌಕರರ ಅನಿರ್ದಿಷ್ಟ ಹೋರಾಟ ಆರಂಭವಾಗಲಿದೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಎಂ.ಬಿ. ಪುಷ್ಪ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಶಾಲೆಗಳಲ್ಲಿ ಅಡುಗೆ ಕೆಲಸ ಬಂದ್‌ ಆಗಲಿದೆ. ಕಾರ್ಮಿಕರ ಫೋ​ರ್ಸ್  ಸರ್ವೇ 2017-18ರ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶದ ಮಹಿಳೆಯರ ನಿರುದ್ಯೋಗ ಹೆಚ್ಚಾಗುತ್ತಿದೆ. ಅಲ್ಲದೇ, ಇದೇ ಸರ್ವೇ ಪ್ರಕಾರ ಹಂಗಾಮಿ ಕಾರ್ಮಿಕರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂತಹ ಪರಿಸ್ಥಿತಿಗೆ ಮುಖ್ಯ ಕಾರಣ ಸರ್ಕಾರಗಳು. ಕಲ್ಯಾಣ ಕಾರ್ಯಕ್ರಮಗಳನ್ನು ಸಂಪೂರ್ಣ ಸುಧಾರಿಸುವ ಬದಲು ಸುಧಾರಣೆಯ ಭಾಗವಾಗಿ ಯೋಜನೆಗಳ ರೂಪದಲ್ಲಿ ತರುತ್ತಿರುವುದು. ಕಲ್ಯಾಣ ಯೋಜನೆಯಾಗಿ 2001-02ರಲ್ಲಿ ಬಂದದ್ದು ಅಕ್ಷರ ದಾಸೋಹ ಯೋಜನೆ. ಈ ಯೋಜನೆ ಅಕ್ಷರ ಕಲಿಯಲು ಬರುವ ಬಡತನದಲ್ಲಿಯೇ ಹುಟ್ಟಿಹಸಿವಿನಿಂದ ಬರುವ ಕಂದಮ್ಮನಿಗೆ ಅನ್ನ ನೀಡುವ ಕಾರ್ಯಕ್ರಮ.

ನಮ್ಮ ಸರ್ಕಾರಗಳು ಅನ್ನ ನೀಡಬೇಕು ಎನ್ನುತ್ತದೆ ಹೊರತು ಅನ್ನ ತಯಾರು ಮಾಡುವ ತಾಯಂದಿರ ಅನ್ನದ ಬಗ್ಗೆ ಮಾತನಾಡದೇ ಕ್ರೌರ್ಯವನ್ನು ಮೆರೆಯುತ್ತವೆ. ಮಾತ್ರವಲ್ಲದೇ, ದಿನಕ್ಕೆ 6 ಗಂಟೆಗಿಂತ ಹೆಚ್ಚು ದುಡಿಸಿಕೊಂಡು ಕಡಿಮೆ ಅವಧಿಯನ್ನು ನೋಡಿಸುತ್ತದೆ. ಮಾದರಿಯಾಗಬೇಕಾದ ಸರ್ಕಾರವೇ ಇಂದು ಖಾಸಗಿ ಮಾಲೀಕನಿಗಿಂತ ಹೆಚ್ಚಿನ ದರ್ಪ ನೋಡಿಸುತ್ತಿದೆ. ಹೇಗೆಂದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಎಂದು ಖಂಡಿಸಿದರು.

ಕೇಂದ್ರ ಸರ್ಕಾರ ಬಿಸಿಯೂಟ ನೌಕರರಿಗೆ 10 ವರ್ಷಗಳಿಂದಲೂ 10 ಪೈಸೆಯನ್ನೂ ಕೂಡಾ ಹೆಚ್ಚಳ ಮಾಡಲಿಲ್ಲ. ಬದಲಿಗೆ ಅನುದಾನ ಕಡಿತ ಮಾಡಿ ಈ ಯೋಜನೆಯನ್ನು ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನಾಗಿ ಮಾಡಲು ಶಿಫಾರಸ್ಸು ಮಾಡಿದೆ. ಈಗಾಗಲೇ ಮಂಡ್ಯ-ಮೈಸೂರು ಜಿಲ್ಲೆಯಲ್ಲಿ ಅಕ್ಷಯಪಾತ್ರೆ ಪೌಂಢೆಷನ್‌ ಸಂಸ್ಥೆಯಿಂದ ಬಿಸಿಯೂಟ ನೀಡಲು ಚಿಂತನೆ ನಡೆಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಈ ಯೋಜನೆ ಖಾಸಗಿ ಸಂಘ ಸಂಸ್ಥೆಗಳಿಗೆ ಕೋಡುವ ಬಗ್ಗೆ ಸರ್ಕಾರ ಬಹಳಷ್ಟುಆಸಕ್ತಿ ತೋರಿಸುತ್ತಿದೆ ಎಂದು ವಿಷಾದಿಸಿದರು.

ಮಕ್ಕಳಿಗೆ ಊಟ ಬಡಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್...

ಕಳೆದ 18-19 ವರ್ಷದ ನಿಸ್ವಾರ್ಥ ಸೇವೆ ಮಾಡಿ ಯೋಜನೆಯನ್ನು ಯಶಸ್ವಿಯತ್ತ ನಡೆಸುತ್ತಿದ್ದರೂ ಈ ರೀತಿಯ ಖಾಸಗೀಕರಣ ಕಡೆ ಗಮನ ಹರಿಸಿ ಮಹಿಳೆಯರನ್ನು ಬೀದಿ ಪಾಲು ಮಾಡಲು ಹೊರಟಿದೆ. ಇಂತಹ ಖಾಸಗೀಕರಣದ ವಿರುದ್ಧ ನಮ್ಮ ಹೋರಾಟ ತೀವ್ರಗೊಳಿಸಬೇಕಿದೆ. ಕೆಲಸದ ಭದ್ರತೆ, ಸೇವಾ ನಿಯಮಾವಳಿ ಹಾಗೂ ಕನಿಷ್ಠ ಕೂಲಿ 21,000 ರು. ಹಾಗೂ ನಿವೃತ್ತಿ ವೇತನಕ್ಕಾಗಿ ಒತ್ತಾಯಿಸಿ ಡಿಸೆಂಬರ್‌ 26ರಿಂದ ಅನಿರ್ದಿಷ್ಟಹೋರಾಟವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷೆ ಉಷಾ, ಉಪಾಧ್ಯಕ್ಷೆ ಯಶೋಧ ಮೀನಾಕ್ಷಿ , ಖಜಾಂಚಿ ಕಲಾವತಿ , ಪ್ರಧಾನ ಕಾರ್ಯದರ್ಶಿ ಅರವಿಂದ ಇದ್ದರು.

ಪ್ರಮುಖ ಬೇಡಿಕೆಗಳು ಏನೇನು?

ಶಿಕ್ಷಣದ ಗುಣಮಟ್ಟಹೆಚ್ಚಿಸಲು ಪೂರಕವಾಗಿ ಕಾಣಿಕೆ ನೀಡುತ್ತಿರುವ ಬಿಸಿಯೂಟ ಯೋಜನೆಯನ್ನು ಕೆಲ ಜಿಲ್ಲೆಗಳಲ್ಲಿ ಧರ್ಮಾಧಾರಿತ ಸಂಘ-ಸಂಸ್ಥೆಗಳಿಗೆ ನೀಡಿದೆ. ತಕ್ಷಣ ಅದನ್ನು ವಾಪಸ್‌ ಪಡೆಯಬೇಕು ಹಾಗೂ ಇನ್ನಿತರ ಬೇರೆ ಯಾವುದೇ ಹೆಸರಿನಲ್ಲಿ ಖಾಸಗಿಯವರಿಗೆ ನೀಡಬಾರದು. ಸರ್ಕಾರವೇ ಈ ಯೋಜನೆಯನ್ನು ಸಂಪೂರ್ಣವಾಗಿ ನಡೆಸಬೇಕು.

ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಹೆಚ್ಚಳ ಮಾಡಿ ಬೆಳಗ್ಗೆ 9ರಿಂದ ಮಧ್ಯಾಹ್ನ 3ರ ವರೆಗೆ ಶಾಲೆಯಲ್ಲಿ ದಿನಕ್ಕೆ 6 ಗಂಟೆಗಿಂತಲೂ ಹೆಚ್ಚು ಕೆಲಸ ಮಾಡಿದರೂ ಆದೇಶದಲ್ಲಿ ಕೇವಲ 4 ಗಂಟೆ ಎಂದು ನಮೂದಿಸಿರುವುದನ್ನು 6 ಗಂಟೆ ಎಂದೂ ನಮೂದಿಸಬೇಕು.

ಅಡುಗೆ ಕೆಲಸದೋಟ್ಟಿಗೆ ಶಾಲೆಗಳಲ್ಲಿ ಡಿ ಗ್ರೂಪ್‌ ನೌಕರರು ಇಲ್ಲದಿರುವುದರಿಂದ ಆ ಕೆಲಸಗಳಿಗೆ ಪರೋಕ್ಷವಾಗಿ ಈಗಾಗಲೇ ಅಡುಗೆಯವರಿಂದಲೇ ಮಾಡಿಸಲಾಗುತ್ತದೆ. ಆದ್ದರಿಂದ ಡಿ ಗ್ರೂಪ್‌ ಕೆಲಸಗಳನ್ನು ಅಧಿಕೃತವಾಗಿ ನಮಗೆ ಜವಾಬ್ದಾರಿ ವಹಿಸಬೇಕು.

ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಕೈದೋಟ ಮಾಡಲು ಅವಕಾಶವಿರುವುದರಿಂದ ಆ ಕೆಲಸವನ್ನು ಅಡುಗೆ ಸಿಬ್ಬಂದಿಯಿಂದಲೇ ಮಧ್ಯಾಹ್ನದ ನಂತರ ಮಾಡಿಸಿದರೆ ಉದ್ಯೊಗ ಖಾತ್ರಿಯಲ್ಲಿ ಕೊಡುವ 249 ರು.ಗಳನ್ನು ಕನಿಷ್ಠ ಕೂಲಿ ಅಡುಗೆಯವರಿಗೆ ಕೊಡಲು ಸಾಧ್ಯವಾಗುತ್ತದೆ. ಈ ಅಂಶಗಳ ಕುರಿತು ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರ್ಕಾರ ಕೂಡಲೇ ತೀರ್ಮಾನ ತೆಗೆದು ಕೊಳ್ಳಬೇಕು.

ಬರಗಾಲ ಹಾಗೂ ವಿಶೇಷ ರಜಾ ದಿನಗಳಲ್ಲಿ ವೇತನ ನೀಡಬೇಕು.