ನೀರಿನ ಬಿಲ್‌ ಪಾವತಿ ಪ್ರಕ್ರಿಯೆಯನ್ನು ಮತ್ತಷ್ಟುಸರಳಗೊಳಿಸಲು ಮುಂದಾಗಿರುವ ಬೆಂಗಳೂರು ಜಲಮಂಡಳಿ, ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಾವತಿ ವ್ಯವಸ್ಥೆ ಜಾರಿಗೆ ಮುಂದಾಗಿದೆ. 

ವಿಶೇಷ ವರದಿ

ಬೆಂಗಳೂರು (ಜ.22): ನೀರಿನ ಬಿಲ್‌ (Water Bill) ಪಾವತಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಮುಂದಾಗಿರುವ ಬೆಂಗಳೂರು ಜಲಮಂಡಳಿ (BWSSB), ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಾವತಿ ವ್ಯವಸ್ಥೆ ಜಾರಿಗೆ ಮುಂದಾಗಿದೆ. ನೀರಿನ ಬಿಲ್‌ನ್ನು ಪಾವತಿಸಲು ಈವರೆಗೂ ಜಲ ಮಂಡಳಿಯ ಕಿಯೋಸ್ಕ್‌ ಮತ್ತು ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಭೌತಿಕವಾಗಿ ಪಾವತಿಗೆ ಅವಕಾಶ ನೀಡಲಾಗಿತ್ತು. ಜೊತೆಗೆ ಆನ್‌ಲೈನ್‌ ಮೂಲಕ ಬಿಲ್‌ ಪಾವತಿಗೂ ವ್ಯವಸ್ಥೆ ಮಾಡಲಾಗಿತ್ತು. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಕ್ಯೂಆರ್‌ ಕೋಡ್‌ ಸೌಲಭ್ಯ ನೀಡಲು ಮುಂದಾಗಿದೆ.

ಪ್ರತಿ ಬಿಲ್‌ಗೂ ಕ್ಯೂಆರ್‌ ಕೋಡ್‌: ಗ್ರಾಹಕರಿಗೆ ನೀಡುವ ಪ್ರತಿ ಬಿಲ್‌ನಲ್ಲಿ ಅದೇ ಸಂಖ್ಯೆಗೆ ಹೊಂದಿಕೊಂಡಿರುವ ಕ್ಯೂಆರ್‌ ಕೋಡ್‌ ಮುದ್ರಿಸಲು ನಿರ್ಧರಿಸಲಾಗಿದೆ. ಈ ವ್ಯವಸ್ಥೆಯಿಂದ ಗ್ರಾಹಕರು ಸಂಖ್ಯೆಗಳನ್ನು ನಮೂದಿಸಿ ಹಣ ಪಾವತಿಸುವ ಅಗತ್ಯವಿರುವುದಿಲ್ಲ. ಕೇವಲ ಕೋಡ್‌ ಅನ್ನು ಮೊಬೈಲ್‌ ಮೂಲಕ ಸ್ಕ್ಯಾನ್‌ ಮಾಡಿದರೆ ಬಿಲ್‌ನ ವಿವರ ಲಭ್ಯವಾಗಲಿದೆ. ಈ ಮಾಹಿತಿಯನ್ನು ಪರಿಗಣಿಸಿ ಬಿಲ್‌ ಅನ್ನು ಪಾವತಿ ಮಾಡಬಹುದಾಗಿದೆ. ಇದರಿಂದ ಹಿರಿಯ ನಾಗರಿಕರಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಜಲ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

3 ತಿಂಗಳೊಳಗೆ ಜಾರಿ: ಏಪ್ರಿಲ್‌ನಿಂದ ಕ್ಯೂಆರ್‌ ಕೋಡ್‌ ವ್ಯವಸ್ಥೆಯನ್ನು ಜಾರಿ ಮಾಡುವ ಸಂಬಂಧ ಈಗಾಗಲೇ ಜಲ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಮಂಡಳಿಯ ಅನುಮೋದನೆ ಪಡೆಯಲಾಗುವುದು. ಆ ಬಳಿಕ ಕ್ಯೂಆರ್‌ ಕೋಡನ್ನು ಬಿಲ್‌ಗಳಲ್ಲಿ ಮುಂದ್ರಿಸಿ ಗ್ರಾಹಕರಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಜಲ ಮಂಡಳಿಯ ಮುಖ್ಯ ಆರ್ಥಿಕ ಸಲಹೆಗಾರ ಪ್ರಶಾಂತ್‌ ಕುಮಾರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

Coronavirus ಬೆಂಗಳೂರಿನಲ್ಲಿ ಕೊರೋನಾ ಕೊಂಚ ಇಳಿಕೆ, ಇಲ್ಲಿದೆ ಕರ್ನಾಟಕದ ಅಂಕಿ-ಸಂಖ್ಯೆ

ಅಲ್ಲದೆ, ನೀರಿನ ಬಿಲ್‌ನಲ್ಲಿ ಕ್ಯೂಆರ್‌ ಕೋಡ್‌ ಜಾರಿ ಮಾಡಿದ ಬಳಿಕ ಪ್ರಸ್ತುತ ಇರುವ ಆನ್‌ಲೈನ್‌, ಕಿಯೋಸ್ಕ್‌ ಮತ್ತು ಬೆಂಗಳೂರು ಒನ್‌ ಕೇಂದ್ರಗಳಿಂದ ಪಾವತಿ ಮಾಡುವ ವ್ಯವಸ್ಥೆಯೂ ಮುಂದುವರೆಯಲಿದೆ. ಗ್ರಾಹಕರು ತಮಗೆ ಸುಲಭವಾದ ಮಾರ್ಗವನ್ನು ಅನುಸರಿಸಿ ಬಿಲ್‌ಗಳನ್ನು ಪಾವತಿಸಬಹುದಾಗಿದೆ ಎಂದು ಅವರು ಹೇಳಿದರು.

ಆನ್‌ಲೈನ್‌ ಸೇವಾ ಶುಲ್ಕ ಕಡಿತ: ಜಲಮಂಡಳಿಯಿಂದ ಬಳಕೆ ಮಾಡಿರುವ ನೀರಿನ ಬಿಲ್‌ ಅನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಲು ಈವರೆಗೂ ಸೇವಾ ಶುಲ್ಕ (1 ಸಾವಿರಕ್ಕೆ 5 ರು.ಗಳಂತೆ) ವಿಧಿಸಲಾಗುತ್ತಿತ್ತು. ಈ ಸೇವಾ ಶುಲ್ಕವನ್ನು ಉಳಿಸುವುದಕ್ಕಾಗಿ ಹಲವು ಗ್ರಾಹಕರು ಆನ್‌ಲೈನ್‌ ಸೇವೆಯನ್ನು ಬಳಕೆ ಮಾಡಿಕೊಳ್ಳುತ್ತಿರಲಿಲ್ಲ. ಜತೆಗೆ, ಕಲ ಗ್ರಾಹಕರು ಮಂಡಳಿ ಕಿಯೋಸ್ಕ್‌ಗಳು ಮತ್ತು ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಸಾಲಿನಲ್ಲಿ ನಿಂತು ಪಾವತಿ ಮಾಡುತ್ತಿದ್ದರು.

ಕಸ ಸಂಗ್ರಹ: ಪ್ರತಿ ಮನೆಗೆ ‘ಕ್ಯೂಆರ್‌ ಕೋಡ್‌’ ಕೋಡ್‌?

ಕೊರೋನಾ ಸಂದರ್ಭದಲ್ಲಿ ಜನ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವುದು ಮತ್ತು ಮನೆಯಿಂದಲೇ ಹಣ ಪಾವತಿ ಮಾಡುವುದನ್ನು ಉತ್ತೇಜಿಸುವ ಸಲುವಾಗಿ ಸೇವಾ ಶುಲ್ಕ ರದ್ದು ಮಾಡಲಾಗಿದೆ. ಇದರಿಂದ ಗ್ರಾಹಕರು ತಮಗೆ ಬಂದಿರುವ ಬಿಲ್‌ ಮೊತ್ತವನ್ನು ಮಾತ್ರ ಆನ್‌ಲೈನ್‌ಲ್ಲಿ ಪಾವತಿ ಮಾಡಬಹುದಾಗಿದೆ ಎಂದು ಪ್ರಶಾಂತ್‌ ಕುಮಾರ್‌ ವಿವರಿಸಿದರು.

ಜಲಮಂಡಳಿ ಬಿಲ್‌ ಪಾವತಿಸುವ ಪ್ರಕ್ರಿಯೆಯಲ್ಲಿ ಸರಳ ವಿಧಾನ ಅಳವಡಿಸುತ್ತಿದ್ದು ಬಿಲ್‌ಗಳಲ್ಲಿ ಕ್ಯೂಆರ್‌ ಕೋಡ್‌ ಮುದ್ರಿಸಲು ನಿರ್ಧರಿಸಲಾಗಿದೆ. ಗ್ರಾಹಕರು ಈ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ಸುಲಭವಾಗಿ ಹಣ ಪಾವತಿ ಮಾಡಬಹುದಾಗಿದೆ.
-ಪ್ರಶಾಂತ್‌ ಕುಮಾರ್‌, ಜಲಮಂಡಳಿ ಮುಖ್ಯ ಆರ್ಥಿಕ ಸಲಹೆಗಾರರು