ಬೆಂಗಳೂರು(ಡಿ.06): ನಗರದ ಪ್ರತಿಮನೆಯ ತ್ಯಾಜ್ಯ ಸಂಗ್ರಹಿಸುವ ಕುರಿತು ನಿಗಾ ವಹಿಸಲು ಸ್ಮಾರ್ಟ್‌ ಸಿಟಿ ಯೋಜನೆಯಡಿ ಪ್ರತಿ ಮನೆಗೆ ಕ್ಯೂಆರ್‌ ಕೋಡ್‌ ಅಳವಡಿಸಲು ಬಿಬಿಎಂಪಿ ಮುಂದಾಗಿದೆ. ಈ ಕುರಿತು ಸಾಧಕ-ಬಾಧಕ ತಿಳಿಯಲು ಪ್ರಾಯೋಗಿಕವಾಗಿ ಕೆಲವು ವಾರ್ಡ್‌ಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ಪ್ರತಿನಿತ್ಯ ಸುಮಾರು 4,500 ಟನ್‌ಗೂ ಅಧಿಕ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಆದರೆ, ತ್ಯಾಜ್ಯ ಸಂಗ್ರಹಣೆ ವೇಳೆ ಆಟೋ ಟಿಪ್ಪರ್‌ಗಳು ಪ್ರತಿ ಮನೆ-ಮನೆಗೆ ಹೋಗದಿರುವ ಕಾರಣ ಜನರು ಎಲ್ಲೆಂದರಲ್ಲಿ ಕಸ ಎಸೆದು ‘ಬ್ಲಾಕ್‌ ಸ್ಪಾಟ್‌’ ನಿರ್ಮಾಣ ಸೃಷ್ಟಿಯಾಗುತ್ತಿದೆ. ಇದನ್ನು ತಪ್ಪಿಸಲು ಪ್ರತಿ ಮನೆಯಿಂದ ತ್ಯಾಜ್ಯ ಸಂಗ್ರಹಣೆ ಖಚಿತಪಡಿಸಿಕೊಳ್ಳಲು ಕ್ಯೂಆರ್‌ ಕೋಡ್‌ ಅಳವಡಿಕೆಗೆ ತೀರ್ಮಾನಿಸಿದೆ. ಆಟೋ ಟಿಪ್ಪರ್‌ ಮತ್ತು ಪೌರ ಕಾರ್ಮಿಕರು ಪ್ರತಿ ಮನೆಗೆ ಹೋಗಿ, ಕ್ಯೂ ಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಿ ಕಸ ಸಂಗ್ರಹಿಸಬೇಕು. ಒಂದು ವೇಳೆ ಕಸ ಸಂಗ್ರಹಿಸದಿದ್ದರೆ, ಕಸ ಸಂಗ್ರಹಿಸುವವರಿಗೆ ಹೋಗಲು ಸೂಚಿಸಬಹುದು.

ವಿದ್ಯುತ್‌ ದರ ಏರಿಕೆಯ ಮಧ್ಯೆ ಕಾದಿದೆ ಮತ್ತೊಂದು ಶಾಕ್‌...!

ಕ್ಯೂಆರ್‌ ಕೋಡ್‌ ಹೇಗೆ ಕಾರ್ಯ ನಿರ್ವಹಿಸುತ್ತೆ?

ಹಣಕಾಸಿನ ವ್ಯವಹಾರದಲ್ಲಿ ಆನ್‌ಲೈನ್‌ ಪೇಮೆಂಟ್‌ಗೆ ಬಳಸುವ ಕ್ಯೂ ಆರ್‌ ಕೋಡ್‌ ಮಾದರಿಯಲ್ಲಿ ಕೋಡ್‌ ಸಿದ್ಧಪಡಿಸಲಾಗುತ್ತದೆ. ತ್ಯಾಜ್ಯ ಉತ್ಪಾದನೆ ಕೇಂದ್ರಗಳಾದ ಮನೆ, ಹೋಟೆಲ…, ಅಪಾರ್ಟ್‌ಮೆಂಚ್‌, ಕಾಂಪ್ಲೆಕ್ಸ್‌, ಮಳಿಗೆಗಳು ಹಾಗೂ ವಿವಿಧ ಉದ್ಯಮಗಳ ಕಾಂಪೌಂಡ್‌ಗಳಿಗೆ ಕ್ಯೂ-ಆರ್‌ ಕೋಡ್‌ ಅಂಟಿಸಲಾಗುತ್ತದೆ. ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ಗಳ ಪೌರ ಕಾರ್ಮಿಕರಿಗೆ ಸ್ಕ್ಯಾ‌ನ್‌ ಮಾಡುವ ಯಂತ್ರ ನೀಡಲಾಗುತ್ತದೆ. ಸ್ಕ್ಯಾ‌ನ್‌ ಮಾಡಿ ತ್ಯಾಜ್ಯ ಸಂಗ್ರಹಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಬಿಬಿಎಂಪಿ ಘನತ್ಯಾಜ್ಯ ಉಪನಿಯಮ-2020’ರಲ್ಲಿ ಮನೆ-ಮನೆಗೆ ಕ್ಯೂಆರ್‌ ಕೂಡ್‌ ಅಂಟಿಸುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದರ ಅನ್ವಯ ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನಿಂದ ಕಸ ಸಂಗ್ರಹಣೆ ಆಟೋ ಟಿಪ್ಪರ್‌ಗಳ ಮೇಲೆ ನಿಗಾ ವಹಿಸಲು ಕ್ಯೂಆರ್‌ ಕೋಡ್‌ ಅಳವಡಿಕೆ ಮಾಡಲಾಗುವುದು. ಮೊದಲು ಪ್ರಾಯೋಗಿಕವಾಗಿ ಒಂದು ವಾರ್ಡ್‌ನಲ್ಲಿ ಜಾರಿಗೊಳಿಸಲಾಗುವುದು ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌ ತಿಳಿಸಿದ್ದಾರೆ.